ETV Bharat / sports

ಬ್ಯಾಟ್​ ಕ್ರೀಸ್​ ದಾಟಿದ್ದರೂ ಔಟ್​ ನೀಡಿದ ಮೂರನೇ ಅಂಪೈರ್​... ಮಹಿಳಾ ಏಷ್ಯಾಕಪ್​ನಲ್ಲಿ ರನೌಟ್​ ವಿವಾದ

author img

By

Published : Oct 2, 2022, 8:59 AM IST

ಮಹಿಳಾ ಏಷ್ಯಾಕಪ್​ ಪಂದ್ಯದಲ್ಲಿ ರನೌಟ್​ ವಿವಾದ ಸದ್ದು ಮಾಡಿದೆ. ಭಾರತ- ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಮೂರನೇ ಅಂಪೈರ್​ ನೀಡಿದ ಯಡವಟ್ಟಿನ ತೀರ್ಪಿಗೆ ಭಾರೀ ಟೀಕೆ ವ್ಯಕ್ತವಾಗಿದೆ.

runout-controversy-in-womens-asia-cup
ಮಹಿಳಾ ಏಷ್ಯಾಕಪ್​ನಲ್ಲಿ ರನೌಟ್​ ವಿವಾದ

ಮಹಿಳಾ ಕ್ರಿಕೆಟ್​ನಲ್ಲಿ ಒಂದಿಲ್ಲ ಒಂದು ವಿವಾದ ಭುಗಿಲೇಳುತ್ತಲೇ ಇದೆ. ಕೆಲ ದಿನಗಳ ಹಿಂದೆ ಇಂಗ್ಲೆಂಡ್​ ಪ್ರವಾಸದ ವೇಳೆ ಭಾರತ ದೀಪ್ತಿ ಶರ್ಮಾರ ಮಂಕಂಡಿಂಗ್​ ಭಾರೀ ಸದ್ದು ಮಾಡಿದ್ದರೆ, ಈಗ ನಡೆಯುತ್ತಿರುವ ಏಷ್ಯಾ ಕಪ್​ನಲ್ಲಿ ಪೂಜಾ ವಸ್ತ್ರಕಾರ್​ ಅವರ ರನ್​ ಔಟ್, ಭಾರೀ ಚರ್ಚೆಗೆ ಗ್ರಾಸವಾಗಿದೆ. ಯುವರಾಜ್​ ಸಿಂಗ್​ ಸೇರಿದಂತೆ ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಶಾಕ್​ ವ್ಯಕ್ತಪಡಿಸಿದ್ದಾರೆ.

ನಿನ್ನೆ ಶ್ರೀಲಂಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 41 ರನ್​ಗಳ ಗೆಲುವು ಸಾಧಿಸಿದೆ. ಆದರೆ, ಪಂದ್ಯದ ವೇಳೆ ಮೂರನೇ ಅಂಪೈರ್​ ತಪ್ಪು ನಿರ್ಧಾರದಿಂದ ಭಾರತದ ಪೂಜಾ ವಸ್ತ್ರಕಾರ್​ ಮೈದಾನದಿಂದ ಹೊರನಡೆಯಬೇಕಾಯಿತು.

ಪಂದ್ಯದಲ್ಲಿ ಪೂಜಾ ವಸ್ತ್ರಕಾರ್​ ಒಂಟಿ ರನ್​ಗಾಗಿ ಓಡುತ್ತಿದ್ದಾಗ ಶ್ರೀಲಂಕಾ ವಿಕೆಟ್​ ಕೀಪರ್​ ರನೌಟ್​ಗೆ ಯತ್ನಿಸಿದರು. ಪೂಜಾ ಬ್ಯಾಟ್​ ಕ್ರೀಸ್​ ಅಂಚಿನಲ್ಲಿ ದಾಟುತ್ತಿದ್ದಾಗ ಬೇಲ್​​ ಎಗರಿವೆ. ತೀರ್ಪು ನಿರ್ಣಯಿಸಲು ಮೂರನೇ ಅಂಪೈರ್​ ಪರಿಶೀಲಿಸಿದಾಗ ಬ್ಯಾಟ್​ ಕ್ರೀಸ್​ನಲ್ಲಿರುವುದು ಗೋಚರವಾಯಿತು.

ಈ ವೇಳೆ ಎಲ್ಲ ಆಟಗಾರರು ನಾಟೌಟ್​ ಎಂದು ತಿಳಿದು ಫೀಲ್ಡಿಂಗ್​ಗೆ ಸಜ್ಜಾಗಿದ್ದರೆ, ಮೂರನೇ ಅಂಪೈರ್​ ಔಟ್​ ಎಂದು ಘೋಷಿಸಿದರು. ಇದು ಕೆಲ ವೇಳೆ ಗಲಿಬಿಲಿ ಉಂಟು ಮಾಡಿತು. ಬಳಿಕ ಪೂಜಾ ವಸ್ತ್ರಕಾರ್​ ಅವರನ್ನು ಫೀಲ್ಡ್​ ಅಂಪೈರ್​ ಮೈದಾನ ತೊರೆಯಲು ಸೂಚಿಸಿದರು.

ಮೂರನೇ ಅಂಪೈರ್​ ತೀರ್ಪು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಭಾರತ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​, "ಇದೊಂದು ಕೆಟ್ಟ ತೀರ್ಪಾಗಿದೆ" ಎಂದು ಟೀಕಿಸಿದ್ದರೆ, ಟ್ವಿಟ್ಟರ್​ ಬಳಕೆದಾರರೊಬ್ಬರು "ಎಲ್ಲರೂ ನಾಟೌಟ್​ ಎಂದು ಭಾವಿಸಿ ಫೀಲ್ಡಿಂಗ್​ಗೆ ಸಜ್ಜಾಗಿದ್ದರೆ, ಔಟ್​ ಹೇಗಾಯಿತು" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ತೀರ್ಪಿನ ಮಧ್ಯೆಯೂ ಭಾರತ ಉತ್ತಮ ಆಟವಾಡಿತು. ಭಾರತದ ವನಿತೆಯರು 20 ಓವರ್‌ಗಳಲ್ಲಿ 150/6 ಗಳಿಸಿದರೆ, ಶ್ರೀಲಂಕಾ ವನಿತೆಯರು 18.2 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಂದ್ಯ ಸೋತರು.

ಓದಿ: ಫುಟ್ಬಾಲ್ ಪಂದ್ಯ ಸೋತಿದ್ದಕ್ಕೆ ಮೈದಾನದಲ್ಲೇ ಹಿಂಸಾಚಾರ.. 127 ಅಭಿಮಾನಿಗಳು ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.