ETV Bharat / bharat

ಮಹಾರಾಷ್ಟ್ರ: ಟೀ ಕುಡಿಯುತ್ತಿದ್ದ ಮಾಜಿ ಮೇಯರ್​ ಮೇಲೆ ಗುಂಡಿನ ದಾಳಿ - Former Malegaon Mayor Attacked

author img

By PTI

Published : May 27, 2024, 11:45 AM IST

ಎಐಎಂಐಎಂ ನಾಯಕ ಹಾಗೂ ಮಾಜಿ ಮೇಯರ್ ಅಬ್ದುಲ್ ಮಲಿಕ್ ಎಂಬವರ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.

UNIDENTIFIED PERSONS OPEN FIRE  FORMER MALEGAON MAYOR  MAHARASHTRA POLICE
ಮಾಜಿ ಮೇಯರ್ ಅಬ್ದುಲ್ ಮಲಿಕ್ (ETV Bharat)

ನಾಸಿಕ್(ಮಹಾರಾಷ್ಟ್ರ): ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್‌ನಲ್ಲಿ ಎಐಎಂಐಎಂ ನಾಯಕ ಹಾಗೂ ಮಾಜಿ ಮೇಯರ್ ಅಬ್ದುಲ್ ಮಲಿಕ್ ಎಂಬವರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಮಲಿಕ್‌ಗೆ ಮೂರು ಗುಂಡುಗಳು ತಗುಲಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ. ಘಟನೆಯ ನಂತರ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

ಭಾನುವಾರ ರಾತ್ರಿ ಅಬ್ದುಲ್ ಮಲಿಕ್ ಮಾಲೆಗಾಂವ್ ಚೌಕ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಟೀ ಕುಡಿಯುತ್ತಾ ಕುಳಿತಿದ್ದಾಗ ಬೈಕ್​ನಲ್ಲಿ ಬಂದ ಮೂವರು ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಅಬ್ದುಲ್ ಮಲಿಕ್‌ ಅವರ ಕೈ, ಕಾಲು ಮತ್ತು ಎದೆಗೆ ಗುಂಡುಗಳು ತಗುಲಿವೆ. ಇದೀಗ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಗೆ ಕಾರಣ ತಿಳಿದು ಬಂದಿಲ್ಲ. ಎಐಎಂಐಎಂ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳ ಮೊರೆ ಹೋಗಿದ್ದಾರೆ. ಆದರೆ, ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಸಿಸಿಟಿವಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.

ಈ ವರ್ಷದ ಫೆಬ್ರವರಿಯಲ್ಲಿ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಎಐಎಂಐಎಂ ರಾಜ್ಯ ಕಾರ್ಯದರ್ಶಿ ಮತ್ತು ಸರನ್ ಉಸ್ತುವಾರಿ ಅಬ್ದುಲ್ ಸಲಾಂ ಅಲಿಯಾಸ್ ಅಸ್ಲಂ ಮುಖಿಯಾ ಎಂಬವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಅಸ್ಲಾಂ ಮುಖಿಯಾ ನವೆಂಬರ್ 2023ರಲ್ಲಿ ಗೋಪಾಲ್ಗಂಜ್ ಸದರ್ ಕ್ಷೇತ್ರದಿಂದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಮಾಲೆಗಾಂವ್ ಪ್ರದೇಶ ಅಪರಾಧಗಳ ತಾಣವಾಗುತ್ತಿರುವುದು ಕಳವಳ ಮೂಡಿಸಿದೆ. ಇತ್ತೀಚೆಗೆ ಇಲ್ಲಿ ಪೆಟ್ರೋಲ್ ಪಂಪ್ ದರೋಡೆಗೆ ಬಂದಿದ್ದ ಇಬ್ಬರು ಯುವಕರು ಗುಂಡು ಹಾರಿಸಿದ್ದರು. ಈ ಘಟನೆ ನಡೆದ 24 ಗಂಟೆಯೊಳಗೆ ಮತ್ತೆ ಗುಂಡಿನ ಸದ್ದು ಕೇಳಿ ಬಂದಿತ್ತು. ಇದೀಗ ಮಾಜಿ ಮೇಯರ್​ ಮೇಲೆ ದಾಳಿ ನಡೆದಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಇದನ್ನೂ ಓದಿ: ಛತ್ತೀಸ್‌ಗಢ ಕಾರ್ಖಾನೆ ಸ್ಫೋಟ: 8 ಕಾರ್ಮಿಕರು ಮೃತಪಟ್ಟಿರುವ ಶಂಕೆ - Chhattisgarh blast

ETV Bharat Logo

Copyright © 2024 Ushodaya Enterprises Pvt. Ltd., All Rights Reserved.