ETV Bharat / sports

Rohit Sharma: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ರೋಹಿತ್ ಶರ್ಮಾಗೆ ಕೊಕ್​ ಸಂಭವ: ರಹಾನೆಗೆ ಕ್ಯಾಪ್ಟನ್‌ ಹೊಣೆ?

author img

By

Published : Jun 16, 2023, 7:54 PM IST

ಒಂದು ತಿಂಗಳ ವಿರಾಮದ ನಂತರ ಭಾರತ ತಂಡ ಕೆರಿಬಿಯನ್ನರ ನಾಡಿಗೆ ತೆರಳಲಿದೆ. ಎರಡು ಟೆಸ್ಟ್​​, ಮೂರು ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.

Rohit Sharma
ರೋಹಿತ್​ ಶರ್ಮಾ

ನಾಯಕ ರೋಹಿತ್​ ಶರ್ಮಾ ಸದ್ಯ ಕಳಪೆ ಫಾರ್ಮ್‌ನಲ್ಲಿದ್ದಾರೆ. ಹೀಗಾಗಿ ಮುಂದಿನ ತಿಂಗಳು ವೆಸ್ಟ್​ ಇಂಡೀಸ್​ನಲ್ಲಿ ನಡೆಯಲಿರುವ ಪಂದ್ಯಗಳಿಗೆ ಅವರಿಗೆ ರೆಸ್ಟ್​ ಕೊಡುವ ಬಗ್ಗೆ ಚರ್ಚೆಗಳಾಗುತ್ತಿವೆ. ಆದರೆ ಆಯ್ಕೆದಾರರ ನಿರ್ಧಾರವೇನು ಎಂಬುದು ಬೆಂಗಳೂರಿನಲ್ಲಿ ನಡೆಯುವ ದುಲೀಪ್ ಟ್ರೋಫಿ ಮುನ್ನಾ ದಿನವಾದ ಜೂನ್ 27 ರಂದು ತಿಳಿಯಲಿದೆ.

ವೆಸ್ಟ್​ ಇಂಡೀಸ್​ನಲ್ಲಿ ಭಾರತ ಮೊದಲ ಟೆಸ್ಟ್ ಪಂದ್ಯವನ್ನು ಜುಲೈ 12 ರಿಂದ 16 ವರೆಗೆ ಡೊಮಿನಿಕಾದಲ್ಲಿಯೂ ಮತ್ತು ಎರಡನೇ ಟೆಸ್ಟ್ ಅ​ನ್ನು ಜುಲೈ 20 ರಿಂದ 24ರ ವರೆಗೆ ಟ್ರಿನಿಡಾಡ್‌ನಲ್ಲಿ ಆಡಲಿದೆ. ಐಪಿಎಲ್ 2023 ಮತ್ತು ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ರೋಹಿತ್ ಸುಸ್ತಾದಂತೆ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ವಿಂಡೀಸ್ ಪ್ರವಾಸದ ಟೆಸ್ಟ್​ ನಾಯಕತ್ವವನ್ನು ಬೇರೆಯವರಿಗೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ವೆಸ್ಟ್​​ ಇಂಡೀಸ್​ನಲ್ಲಿ ನಡೆಯಲಿರುವ ಎಲ್ಲ ಪಂದ್ಯಗಳಿಂದ ರೋಹಿತ್​ ಹೊರಗುಳಿಯಲಿದ್ದಾರೆ. ಆದರೆ ಈ ನಿರ್ಧಾರವನ್ನು ಆಯ್ಕೆದಾರರು ತೆಗೆದುಕೊಳ್ಳುವ ಮುನ್ನ ರೋಹಿತ್​ ಶರ್ಮಾರೊಂದಿಗೆ ಚರ್ಚಿಸಲಿದ್ದಾರೆ. ಟೆಸ್ಟ್​ ನಾಯಕತ್ವವನ್ನು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಉತ್ತಮ ಬ್ಯಾಟಿಂಗ್​ ಮಾಡಿದ ಅಜಿಂಕ್ಯ ರಹಾನೆಗೆ ವಹಿಸಬಹುದು ಎಂಬ ಲೆಕ್ಕಾಚಾರಗಳಿವೆ.

ರೋಹಿತ್ ಶರ್ಮಾ ಕಳಪೆ ಫಾರ್ಮ್: 16ನೇ ಆವೃತ್ತಿಯ ಐಪಿಎಲ್​ನಲ್ಲಿ ರೋಹಿತ್ 16 ಪಂದ್ಯಗಳಲ್ಲಿ 20.75 ರ ಸರಾಸರಿಯಲ್ಲಿ ಎರಡು ಅರ್ಧಶತಕದಿಂದ 332 ರನ್ ಗಳಿಸಿದ್ದಾರೆ. ಇಂಗ್ಲೆಂಡ್​ನ ಓವಲ್​ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ನಡೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಒಂದು ಇನ್ನಿಂಗ್ಸ್​ನಲ್ಲಿ 15, ಮತ್ತೊಂದರಲ್ಲಿ 43 ರನ್‌ಗಳಿಗೆ ಔಟಾಗಿದ್ದರು. ಹೀಗಾಗಿ ಅವರ ಒತ್ತಡವನ್ನು ತಗ್ಗಿಸುವ ಮತ್ತು ಏಷ್ಯಾಕಪ್​ಗೂ ಮುನ್ನ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಬಹುದು.

2022ರಲ್ಲಿ ರೋಹಿತ್ ನಾಯಕತ್ವವನ್ನು ವಹಿಸಿಕೊಂಡಾಗಿನಿಂದ ಭಾರತ ಆಡಿದ ಹತ್ತು ಟೆಸ್ಟ್‌ಗಳಲ್ಲಿ, ರೋಹಿತ್​ ಮೂರು ಪಂದ್ಯಗಳನ್ನು ಆಡಿಲ್ಲ. ಕೋವಿಡ್-19 ಕಾರಣದಿಂದಾಗಿ ಇಂಗ್ಲೆಂಡ್‌ನಲ್ಲಿ ಒಂದು ಮತ್ತು ಬಾಂಗ್ಲಾದೇಶದಲ್ಲಿ ಎರಡು ಪಂದ್ಯದಿಂದ ಹೊರಗಿದ್ದರು. ನಾಗ್ಪುರದ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ 120 ರನ್‌ ಕಲೆಹಾಕಿರುವುದು ನಾಯಕತ್ವದ ನಂತರದ ಬೆಸ್ಟ್​ ಸ್ಕೋರ್​ ಆಗಿದೆ.

ಬೌಲರ್​ಗಳಿಗೂ ವಿಶ್ರಾಂತಿ: ಬೌಲಿಂಗ್​ನಲ್ಲಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಟೆಸ್ಟ್‌ನಿಂದ ರೆಸ್ಟ್​ ಕೊಡುವ ಸಾಧ್ಯತೆ ಇದೆ. ಮುಂದೆ ಏಷ್ಯಾಕಪ್,​ ವಿಶ್ವಕಪ್​ ಇರುವ ಕಾರಣ ಟೆಸ್ಟ್​ನಿಂದ ಕೈ ಬಿಟ್ಟು ಏಕದಿನ ಮತ್ತು ಟಿ20ಗೆ ಆಡಿಸಲಿದ್ದಾರೆ ಎನ್ನಲಾಗಿದೆ.

ಪೂಜಾರ ಬದಲಿಗೆ ಜೈಸ್ವಾಲ್​ಗೆ ಸ್ಥಾನ: ಕೌಂಟಿಯಲ್ಲಿ ಉತ್ತಮವಾಗಿ ಆಡಿದ್ದರೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲ ಚೇತೇಶ್ವರ ಪೂಜಾರ ಅವರಿಗೆ ಕೊಕ್​ ಕೊಟ್ಟು ಅವರ ಬದಲಿಯಾಗಿ ಜೈಸ್ವಾಲ್​ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ. ಡಬ್ಲ್ಯೂಟಿಸಿ ಫೈನಲ್​ಗೆ ಮೀಸಲು ಆಟಗಾರನಾಗಿ ಆಯ್ಕೆ ಆಗಿರುವ ಯುವ ಪ್ರತಿಭೆ ಈ ವರ್ಷ ಐಪಿಎಲ್​ನಲ್ಲಿ ಒಂದು ಶತಕಗಳಿಸಿ ಉತ್ತಮ ರನ್​ ಕಲೆಹಾಕಿದ್ದಾರೆ. ಅಲ್ಲದೇ ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಜೈಸ್ವಾಲ್ ಅವರನ್ನು ವೆಸ್ಟ್​ ಇಂಡೀಸ್​ ಎದುರು ಪಾದಾರ್ಪಣೆ ಮಾಡಿಸುವ ಸಾಧ್ಯತೆಗಳೂ ಚರ್ಚೆಯಲ್ಲಿವೆ.

ಇದನ್ನೂ ಓದಿ: Asia Cup 2023: ಏಷ್ಯಾ ಕಪ್​ಗೆ ಮರಳುವರೇ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.