ETV Bharat / sports

ಐರ್ಲೆಂಡ್​ ವಿರುದ್ಧ ಮಿಂಚಿದ ರಿಂಕು.. 'ನನ್ನೆಲ್ಲ ಪ್ರಯತ್ನಕ್ಕೆ ಸಿಕ್ಕ ಫಲ' ಎಂದ ಯುವ ಬ್ಯಾಟರ್​

author img

By

Published : Aug 21, 2023, 9:03 AM IST

Rinku Singh Special knock against Ireland: ಐರ್ಲೆಂಡ್​ ವಿರುದ್ಧದ ಎರಡನೇ ಟಿ -20 ಪಂದ್ಯದಲ್ಲಿ ಭಾರತದ ಯುವ ಆಟಗಾರ​ ರಿಂಕು ಸಿಂಗ್​ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದರು.

Etv Bharat
Etv Bharat

ಡಬ್ಲಿನ್‌: ಡಬ್ಲಿನ್‌ನಲ್ಲಿ ಭಾನುವಾರ ನಡೆದ ಐರ್ಲೆಂಡ್‌ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡ 33 ರನ್​ಗಳ ಜಯ ದಾಖಲಿಸಿ, ಸರಣಿಯನ್ನು 2-0 ಅಂತರದಿಂದ ತನ್ನದಾಗಿಸಿಕೊಂಡಿದೆ. ಈ ಪಂದ್ಯದಲ್ಲಿ ಬ್ಯಾಟಿಂಗ್​ಗಿಳಿದ ಯುವ ಬ್ಯಾಟರ್​​ ರಿಂಕು ಸಿಂಗ್‌ ಅಂತಿಮ ಓವರ್​ಗಳಲ್ಲಿ ಸಿಡಿಲಬ್ಬರದ ಪ್ರದರ್ಶನ ತೋರುವ ಮೂಲಕ ಸಿಕ್ಕ ಅವಕಾಶ ಸದ್ಭಳಕೆ ಮಾಡಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಅದ್ಭುತ ಎಂಟ್ರಿ ಕೊಟ್ಟಿದ್ದಾರೆ.

ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ಪರ ಆಡುತ್ತಿರುವ ರಿಂಕು 2023ರ ಋತುವಿನಲ್ಲಿ ಭರ್ಜರಿ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತಂಡದ ಕದ ತಟ್ಟಿದ್ದರು. ಐರ್ಲೆಂಡ್​​ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ರಿಂಕು, ಮೊದಲ ಟಿ-20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಆದರೆ, ಪಂದ್ಯದ ಅರ್ಧದಲ್ಲೇ ಮಳೆ ಕಾಡಿದ್ದರಿಂದ ರಿಂಕು ಸಿಂಗ್​ಗೆ ಬ್ಯಾಟಿಂಗ್​ ಮಾಡುವ ಅವಕಾಶ ಸಿಕ್ಕಿರಲಿಲ್ಲ.

ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್​ಗಿಳಿದ ರಿಂಕು ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರು. ಅಂತಿಮ ಓವರ್​ಗಳಲ್ಲಿ ಸಾಮರ್ಥ್ಯ ತೋರಿದ ಯುವ ಎಡಗೈ ಬ್ಯಾಟರ್​ ಕೇವಲ 21 ಎಸೆತಗಳಲ್ಲಿ 38 ರನ್‌ ಬಾರಿಸಿ ದೊಡ್ಡ ಹೊಡೆತದ ಯತ್ನಕ್ಕೆ ಮುಂದಾಗಿ ಔಟಾದರು. ಆರಂಭಿಕ ಆಟಗಾರ ರುತುರಾಜ್​ ಗಾಯಕ್ವಾಡ್​ ವಿಕೆಟ್​ ಪತನದ ಬಳಿಕ ಮೈದಾನಕ್ಕಿಳಿದ ರಿಂಕು, ಆರಂಭದಲ್ಲಿ ಸಮಯೋಚಿತ ಬ್ಯಾಟಿಂಗ್​ ಮಾಡಿದರು.

ರಿಂಕು - ಶಿವಂ ಜೊತೆಯಾಟ: 18ನೇ ಓವರ್‌ನ ಅಂತ್ಯಕ್ಕೆ ರಿಂಕು 15 ಎಸೆತಗಳಲ್ಲಿ 15 ರನ್‌ ಗಳಿಸಿದ್ದರು. ಬಳಿಕ ಅಂತಿಮ ಎರಡು ಓವರ್​ಗಳಲ್ಲಿ ಐರಿಸ್​ ಬೌಲರ್​ಗಳ ಮೇಲೆ ಸವಾರಿ ನಡೆಸಿದರು. ತಾವೆದುರಿಸಿದ 16ನೇ ಎಸೆತದಿಂದ ಬಳಿಕ ಐದು ಎಸೆತಗಳಲ್ಲಿ 4, 6, 6, 1, 6 ಬಾರಿಸುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು. ಇನ್ನೊಂದೆಡೆ ಮತ್ತೋರ್ವ ಎಡಗೈ ದಾಂಡಿಗ ಶಿವಂ ದುಬೆ (16 ಎಸೆತಗಳಲ್ಲಿ 22 ರನ್​) ಕೂಡ ರಿಂಕುಗೆ ತಕ್ಕ ಸಾಥ್​ ನೀಡಿದರು. ಈ ಜೋಡಿ ಕೊನೆಯ 11 ಎಸೆತಗಳಲ್ಲಿ 41 ರನ್​ ದೋಚಿತು. ಅಂತಿಮವಾಗಿ ಟೀಂ ಇಂಡಿಯಾ 5 ವಿಕೆಟ್​ಗೆ 185 ರನ್​ಗಳ ಬೃಹತ್​ ಮೊತ್ತ ದಾಖಲಿಸುವಲ್ಲಿ ಪ್ರಮುಖ ಕಾಣಿಕೆ ನೀಡಿದರು.

ಪಂದ್ಯಶ್ರೇಷ್ಠ ಪ್ರಶಸ್ತಿ: ಅಬ್ಬರದ ಬ್ಯಾಟಿಂಗ್​ ಪ್ರದರ್ಶನ ತೋರಿದ ರಿಂಕು ಸಿಂಗ್​ ಪ್ಲೇಯರ್​​ ಆಫ್​ ದಿ ಮ್ಯಾಚ್​ ಗೌರವ ಪಡೆದರು. ಈ ವೇಳೆ ಮಾತನಾಡಿದ ಅವರು, ''ನನಗೆ ತುಂಬಾ ಸಂತಸವಾಗುತ್ತಿದೆ. ನಾನು ಐಪಿಎಲ್‌ನ ಪ್ರದರ್ಶನವನ್ನೇ ಇಲ್ಲಿಯೂ ಮುಂದುವರೆಸಲು ಯತ್ನಿಸಿದ್ದೇನೆ. ಮೈದಾನದಲ್ಲಿ ಬಹಳ ಆತ್ಮವಿಶ್ವಾಸದಿಂದ ಇದ್ದು, ಶಾಂತತೆ ವಹಿಸಲು ಪ್ರಯತ್ನಿಸಿದೆ. ಕಳೆದ 10 ವರ್ಷಗಳಿಂದ ಕ್ರಿಕೆಟ್​​ ಆಡುತ್ತಿದ್ದೇನೆ. ನನ್ನೆಲ್ಲ ಪ್ರಯತ್ನಗಳೂ ಇದೀಗ ಫಲ ನೀಡಿವೆ. ಮೊದಲ ಪಂದ್ಯದಲ್ಲೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿರುವುದು ಬಹಳ ಖುಷಿ ಆಗಿದೆ'' ಎಂದು ಹೇಳಿದರು.

ರಿಂಕು ಸಿಂಗ್​ 2023ರ ಐಪಿಎಲ್​ನಲ್ಲಿ ಕೋಲ್ಕತ್ತಾ ಪರ 14 ಪಂದ್ಯಗಳಿಂದ 59.25ರ ಸರಾಸರಿಯಲ್ಲಿ 474 ರನ್​ ಸಿಡಿಸಿದ್ದರು. 149ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್​ ಬೀಸಿದ್ದು, 29 ಸಿಕ್ಸರ್​ ಹಾಗೂ 31 ಬೌಂಡರಿ ಬಾರಿಸಿದ್ದರು. ಕೆಲ ಪಂದ್ಯಗಳ ನಿರ್ಣಾಯಕ ಘಟ್ಟದಲ್ಲಿ ಅಬ್ಬರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅದರಲ್ಲೂ ಗುಜರಾತ್​ ಟೈಟಾನ್ಸ್​ ವಿರುದ್ಧ ಅಂತಿಮ ಓವರ್​ನಲ್ಲಿ 28 ರನ್​ ಅಗತ್ಯವಿದ್ದಾಗ ಯಶ್​ ದಯಾಲ್​ಗೆ ರಿಂಕು 5 ಸಿಕ್ಸರ್​ ಚಚ್ಚುವ ಮೂಲಕ ಜಯದ ನಗೆ ಬೀರಿದ್ದು ಸ್ಮರಣೀಯವಾದುದಾಗಿದೆ.

ಇದನ್ನೂ ಓದಿ: ಭಾರತ Vs ಐರ್ಲೆಂಡ್ 2ನೇ ಟಿ 20ಐ: ಗಾಯಕ್ವಾಡ್, ಬೌಲರ್‌ಗಳ ಅಬ್ಬರಕ್ಕೆ ಐರ್ಲೆಂಡ್ ತತ್ತರ, 33 ರನ್‌ಗಳಿಂದ ಗೆಲುವು.. ಸರಣಿ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.