ETV Bharat / sports

ಕೊನೆ ಘಟ್ಟದಲ್ಲಿ ಐಪಿಎಲ್​: ಯಾರಿಗಿದೆ ಪ್ಲೇ ಆಫ್​ ಪ್ರವೇಶ ಚಾನ್ಸ್​,? ಲೆಕ್ಕಾಚಾರ ಇಲ್ಲಿದೆ

author img

By

Published : May 17, 2023, 8:04 PM IST

ಐಪಿಎಲ್​ನ ಲೀಗ್ ಹಂತದ ಪಂದ್ಯಗಳು ಮುಗಿಯುವ ಹಂತದಲ್ಲಿದ್ದು, ಯಾವೆಲ್ಲಾ ತಂಡಗಳು ಪ್ಲೇಆಫ್​ಗೆ ಅರ್ಹತೆ ಪಡೆಯಲಿವೆ ಎಂಬುದು ಕುತೂಹಲ ಮೂಡಿಸಿದೆ. ಗುಜರಾತ್​ ಟೈಟಾನ್ಸ್​ ಕ್ವಾಲಿಫೈ ಆಗಿದ್ದು, ಹೈದರಾಬಾದ್​, ಡೆಲ್ಲಿ ಕ್ಯಾಪಿಟಲ್ಸ್​ ಟೂರ್ನಿಯಿಂದ ಹೊರಬಿದ್ದಿವೆ. 7 ತಂಡಗಳ ಮಧ್ಯೆ ಇನ್ನೂ ಪೈಪೋಟಿ ಇದೆ.

ಯಾರಿಗಿದೆ ಪ್ಲೇ ಆಫ್​ ಪ್ರವೇಶ ಚಾನ್ಸ್
ಯಾರಿಗಿದೆ ಪ್ಲೇ ಆಫ್​ ಪ್ರವೇಶ ಚಾನ್ಸ್

16 ನೇ ಆವೃತ್ತಿಯ ಐಪಿಎಲ್​ ಕೊನೆಯ ಘಟ್ಟಕ್ಕೆ ಬಂದಿದೆ. ಲೀಗ್ ಹಂತದಲ್ಲಿ ಕೇವಲ ಏಳು ಪಂದ್ಯಗಳು ಉಳಿದಿದ್ದು, 18 ಅಂಕ ಗಳಿಸಿ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಕ್ವಾಲಿಫೈ ಹಂತ ತಲುಪಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸತತ ಸೋಲಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿವೆ. ಉಳಿದ ಏಳು ತಂಡಗಳ ಮಧ್ಯೆ ಮೂರು ಪ್ಲೇಆಫ್ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆದಿದೆ.

ಮಂಗಳವಾರ ಮುಂಬೈ ಇಂಡಿಯನ್ಸ್ ವಿರುದ್ಧ, ಲಕ್ನೋ ಸೂಪರ್ ಜೈಂಟ್ಸ್ 5 ರನ್‌ಗಳ ಜಯ ಗಳಿಸುವ ಮೂಲಕ ಪ್ಲೇಆಫ್ ಸನಿಹಕ್ಕೆ ಬಂದು ನಿಂತಿದೆ. ಇದಲ್ಲದೇ, ಸೋತರೂ ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್​ ಕಿಂಗ್ಸ್​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ರಾಜಸ್ಥಾನ ರಾಯಲ್ಸ್​, ಕೋಲ್ಕತ್ತಾ ನೈಟ್​ ರೈಡರ್ಸ್​, ಪಂಜಾಬ್​ ಕಿಂಗ್ಸ್​ ಕೂಡ ರೇಸ್​ನಲ್ಲಿವೆ.

13 ಪಂದ್ಯಗಳಲ್ಲಿ 7 ರಲ್ಲಿ ಗೆಲುವು ಸಾಧಿಸಿರುವ ಸಿಎಸ್​ಕೆ 15 ಅಂಕ ಗಳಿಸಿದ್ದು, ಪಾಯಿಂಟ್​ ಪಟ್ಟಿಯಲ್ಲಿ ಸದ್ಯಕ್ಕೆ 2ನೇ ಸ್ಥಾನದಲ್ಲಿದೆ. ಕೊನೆಯ ಲೀಗ್​ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಆಡಲಿದೆ. ಗೆದ್ದಲ್ಲಿ 17 ಅಂಕಗಳೊಂದಿಗೆ 2ನೇ ಸ್ಥಾನಕ್ಕೇರಲಿದೆ. ಇಷ್ಟಾದರೂ ಉತ್ತಮ ರನ್​ರೇಟ್​ ಕಾಯ್ದುಕೊಳ್ಳುವುದು ಅಗತ್ಯ. ಕಾರಣ ಇಷ್ಟೇ ಅಂಕ ಗಳಿಸಿರುವ ಲಖನೌ ಕೂಡ ಸ್ಪರ್ಧೆಯಲ್ಲಿದೆ.

15 ಅಂಕಗಳಿಂದ ಲಖನೌ ಮೂರನೇ ಸ್ಥಾನದಲ್ಲಿದೆ. ಶನಿವಾರ ನಡೆಯುವ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದರೆ 17 ಅಂಕಕ್ಕೆ ತಲುಪಲಿದೆ. ಒಂದು ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ವಿರುದ್ಧ ಸೋತರೆ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿ ಪ್ಲೇಆಫ್​ಗೆ ಅರ್ಹತೆ ಪಡೆಯಲಿದೆ.

ಚೆನ್ನೈಗೆ ಲಖನೌ ಪೈಪೋಟಿ: ಒಂದು ವೇಳೆ ಕೋಲ್ಕತ್ತಾ ವಿರುದ್ಧ, ಲಖನೌ ಸೋತರೆ 15 ಅಂಕಗಳಲ್ಲೇ ಉಳಿಯಲಿದೆ. ಆಗ ಚೆನ್ನೈ, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್‌ನ ಫಲಿತಾಂಶ ಮೇಲೆ ಆಧಾರಿತವಾಗಲಿದೆ. ಲಖನೌಗೆ ಇರುವ ಒಂದು ಅವಕಾಶವೆಂದರೆ, ಚೆನ್ನೈ-ಡೆಲ್ಲಿ ಮಧ್ಯೆ ಪಂದ್ಯ ಮುಗಿದ ನಂತರ ಬಳಿಕ ಅದು ಕೋಲ್ಕತ್ತಾ ವಿರುದ್ಧ ಆಡಲಿದೆ. ಪಂದ್ಯದ ಫಲಿತಾಂಶ ನೋಡಿಕೊಂಡು ರನ್​ರೇಟ್​ ದೃಷ್ಟಿಕೋನದಿಂದ ತಂಡ ಯೋಜನೆ ರೂಪಿಸಬಹುದಾಗಿದೆ.

ಸೋತು ಪೇಚಿಗೆ ಬಿದ್ದ ಮುಂಬೈ: ಲಖನೌ ವಿರುದ್ಧ ಸೋಲುವ ಮೂಲಕ ಮುಂಬೈ ಸಂಕಷ್ಟಕ್ಕೆ ಸಿಲುಕಿದೆ. ಭಾನುವಾರ ಹೈದರಾಬಾದ್ ವಿರುದ್ಧದ ಪಂದ್ಯವನ್ನು ಅದು ಗೆಲ್ಲಲೇಬೇಕು. ಅದೂ ಉತ್ತಮ ರನ್​ರೇಟ್​ನಿಂದ ಮಾತ್ರ. ಆದರೂ, ಆರ್​ಸಿಬಿ, ಲಖನೌ, ಚೆನ್ನೈ ಮತ್ತು ಪಂಜಾಬ್‌ನ ಫಲಿತಾಂಶಗಳು ಏನೆಂಬುದರ ಮೇಲೆ ಪ್ಲೇಆಫ್​ ಪ್ರವೇಶ ನಿರ್ಧಾರವಾಗಲಿದೆ. ಹಾಗೊಂದು ವೇಳೆ ಹೈದರಾಬಾದ್​ ವಿರುದ್ಧ ಅಚಾನಕ್ಕಾಗಿ ಸೋತಲ್ಲಿ ಅವಕಾಶ ಮತ್ತಷ್ಟು ಕಠಿಣವಾಗಲಿದೆ.

ಸಿಎಸ್​ಕೆ: ಕಳೆದ ಪಂದ್ಯದಲ್ಲಿ ಕೋಲ್ಕತ್ತಾ ವಿರುದ್ಧ ಸೋತಿದ್ದರೂ ಮುಂಬೈನ ಸೋಲು ಚೆನ್ನೈಗೆ ಅಗ್ರ ಎರಡರಲ್ಲಿ ಮುಂದುವರೆಯುವ ಅವಕಾಶ ಸಿಕ್ಕಿತು. ಚೆನ್ನೈ ಮತ್ತು ಲಖನೌ ತಮ್ಮ ಕೊನೆಯ ಪಂದ್ಯಗಳನ್ನು ಗೆದ್ದರೆ, ನಂತರ ರನ್​ರೇಟ್​ನಿಂದ ಪ್ಲೇಆಫ್​ ನಿರ್ಧಾರವಾಗಲಿದೆ. ಡೆಲ್ಲಿ ವಿರುದ್ಧ ಸೋತಲ್ಲಿ ಉಳಿದ ಐದು ತಂಡಗಳ ಜೊತೆ ಅದೃಷ್ಟ ಪರೀಕ್ಷೆಗಿಳಿಯಬೇಕಿದೆ.

ಕೆಕೆಆರ್​: ಕೋಲ್ಕತ್ತಾ ನೈಟ್​ ರೈಡರ್ಸ್​ ಲೀಗ್​ನ ಕೊನೆಯ ಪಂದ್ಯವನ್ನು ಲಖನೌ ವಿರುದ್ಧ ಆಡಲಿದೆ. ಪಂದ್ಯ ಸೋತಲ್ಲಿ ನೇರವಾಗಿ ಟೂರ್ನಿಯಿಂದ ಹೊರಬೀಳಲಿದೆ. ಒಂದು ವೇಳೆ ದೊಡ್ಡ ಅಂತರದಿಂದ ಗೆದ್ದರೆ, ರಾಜಸ್ಥಾನ, ಮುಂಬೈ, ಬೆಂಗಳೂರು ಪಂದ್ಯಗಳ ಮೇಲೆ ಅದು ಅವಲಂಬಿತವಾಗಿದೆ. ಅದರಲ್ಲೂ ಮೂರು ತಂಡಗಳು ಸೋಲಬೇಕು. ಆಗ ರನ್​ರೇಟ್​ ಆಧಾರದ ಮೇಲೆ 14 ಪಾಯಿಂಟ್‌ಗಳ ಸಮೇತ ಪಂಜಾಬ್ ಮತ್ತು ಮುಂಬೈ ಜೊತೆಗೆ ಪೈಪೋಟಿ ನಡೆಸಲಿದೆ.

ಪಂಜಾಬ್​: ತಂಡಕ್ಕೆ ಇನ್ನೂ 2 ಪಂದ್ಯ ಬಾಕಿ ಇದೆ. 12 ಅಂಕ ಹೊಂದಿರುವ ತಂಡ ರಾಜಸ್ಥಾನ, ಡೆಲ್ಲಿ ವಿರುದ್ಧದ ಪಂದ್ಯಗಳಲ್ಲಿ ಗೆದ್ದರೆ 16 ಅಂಕ ಪಡೆಯಲಿದೆ. ಆರ್​ಸಿಬಿ ತಂಡ ರನ್​ರೇಟ್​ನಲ್ಲಿ ಮುಂದಿದ್ದು, ಅದರ ಸೋಲು, ಗೆಲುವು ತಂಡದ ಪ್ಲೇಆಫ್​ ನಿರ್ಧರಿಸಲಿದೆ.

ಆರ್​ಸಿಬಿ ಕತೆಯೇನು?: ಸಹಸ್ರಾರು ಅಭಿಮಾನಿಗಳನ್ನು ಹೊಂದಿರುವ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡದ ಪ್ಲೇ ಆಫ್​ ಕೂಡ ಅಷ್ಟು ಸಲೀಸಲಾಗಿಲ್ಲ. ಉಳಿದೆರಡೂ ಪಂದ್ಯಗಳಲ್ಲಿ ಕಡ್ಡಾಯ ಗೆಲ್ಲಲೇಬೇಕಿದೆ. ಕಳೆದ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ 112 ರನ್‌ಗಳ ಭರ್ಜರಿ ಗೆಲುವಿನಿಂದ ರನ್​ರೇಟ್​ ಉತ್ತಮಪಡಿಸಿಕೊಂಡಿದೆ. ಹೀಗಾಗಿ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಉಳಿದ ಪಂದ್ಯಗಳನ್ನು ಹೈದರಾಬಾದ್​ ಮತ್ತು ಗುಜರಾತ್​ ವಿರುದ್ಧ ಆಡಲಿದೆ.

ಆರ್​ಆರ್​: ಸಂಜು ಸ್ಯಾಮ್ಸನ್​ ನೇತೃತ್ವದ ರಾಜಸ್ಥಾನ ರಾಯಲ್ಸ್​ ಇನ್ನೊಂದು ಪಂದ್ಯ ಬಾಕಿ ಉಳಿದಿದ್ದು, ಪಂಜಾಬ್​ ಕಿಂಗ್ಸ್​ ವಿರುದ್ಧ ಆಡಲಿದೆ. ಪ್ಲೇ ಆಫ್​ಗೆ ಅರ್ಹತೆ ಪಡೆಯಲು ಗೆಲ್ಲುವ ಮೂಲಕ ಉಳಿದ ತಂಡಗಳ ಫಲಿತಾಂಶವನ್ನೂ ಕಾಯಬೇಕಿದೆ.

ಓದಿ: ಐಸಿಯುವಿನಿಂದ ಬಿಡುಗಡೆ ಆದ ತಂದೆಗಾಗಿ ಆಡಿದೆ: ಮೊಹ್ಸಿನ್ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.