ETV Bharat / sports

ಐಸಿಯುವಿನಿಂದ ಬಿಡುಗಡೆ ಆದ ತಂದೆಗಾಗಿ ಆಡಿದೆ: ಮೊಹ್ಸಿನ್ ಖಾನ್

author img

By

Published : May 17, 2023, 5:36 PM IST

ಮುಂಬೈ ವಿರುದ್ಧ ಕೊನೆಯ ಓವರ್​ನಲ್ಲಿ ಲಕ್ನೋಗೆ 5 ರನ್​ ಉಳಿಸಿ ಪಂದ್ಯ ಗೆಲ್ಲಿಸಿ ಮೊಹ್ಸಿನ್ ಖಾನ್ ಹೀರೋ ಆದರು. ಆದರೆ ಅವರ ಈ ಪ್ರದರ್ಶನ ಹಿಂದಿನ ನೋವಿನ ಕಹಾನಿ ಇಲ್ಲಿದೆ..

Mohsin Khan
ಮೊಹ್ಸಿನ್ ಖಾನ್

ಲಕ್ನೋ (ಉತ್ತರ ಪ್ರದೇಶ): ನಿನ್ನೆ ನಡೆದ ಐಪಿಎಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಲಕ್ನೋ ಸೂಪರ್​ ಜೈಂಟ್ಸ್​ ಮುಖಾಮುಖಿಯಾಗಿದ್ದವು. ಉಭಯ ತಂಡಕ್ಕೂ ಪ್ಲೇ ಆಫ್​ ಪ್ರವೇಶಕ್ಕೆ ಅತ್ಯಂತ ಪ್ರಮುಖ ಪಂದ್ಯ ಇದಾಗಿತ್ತು. ಲಕ್ನೋ ಕೊನೆಯ ಓವರ್​ ವರೆಗೆ ಪಂದ್ಯವನ್ನು ನಿಯಂತ್ರಿಸಿ 5 ರನ್​ ನಿಂದ ಮುಂಬೈಅನ್ನು ಮಣಿಸಿತು. ಇದರಿಂದ ನಾಲ್ಕರಿಂದ ಮೂರನೇ ಸ್ಥಾನಕ್ಕೆ ಅಂಕಪಟ್ಟಿಯಲ್ಲಿ ಕೃನಾಲ್ ಪಡೆ ಏರಿಕೆ ಕಂಡು ಪ್ಲೇ ಆಫ್​ ಹಾದಿ ಸುಲಭ ಮಾಡಿಕೊಂಡಿತು.

ಲಕ್ನೋ ಗೆಲುವಿನಲ್ಲಿ ಬ್ಯಾಟರ್​ಗಳಷ್ಟೇ ಬೌಲರ್​ಗಳ ಪಾತ್ರವೂ ಇದೆ. ಕೊನೆಯ ನಾಲ್ಕು ಓವರ್​ನಲ್ಲಿ ಕೃನಾಲ್​ ಬೌಲಿಂಗ್​ನಲ್ಲಿ ಉತ್ತಮ ನಿಯಂತ್ರಣ ಸಾಧಿಸಿದರು. ಇದರಿಂದ ಗ್ರೀಸ್​ನಲ್ಲಿದ್ದ ಮುಂಬೈ ಇಂಡಿಯನ್ಸ್​ನ ಬಿಗ್​ ಹಿಟ್ಟರ್​​ಗಳಾದ ಕ್ಯಾಮರಾನ್​ ಗ್ರೀನ್​ ಮತ್ತು ಟಿಮ್​ ಡೇವಿಡ್​ಗೆ ರನ್​ ಗಳಿಸಲು ಸಾಧ್ಯವಾಗಲಿಲ್ಲ. ಯಶಸ್ವಿ ಯಾರ್ಕರ್​ನಿಂದ ಕೊನೆಯ ನಾಲ್ಕು ಓವರ್​ನಲ್ಲಿ ಲಕ್ನೋ ಗೆಲುವು ಕಂಡಿತು.

ಮುಂಬೈ ಇಂಡಿಯನ್ಸ್​ ಗೆಲುವಿಗೆ ಕೊನೆಯ ಐದು ಓವರ್​ನಲ್ಲಿ 52 ರನ್​ ಗಳಿಸ ಬೇಕಿತ್ತು ಆದರೆ 47 ರನ್​ ಮಾತ್ರ ಗಳಿಸಲು ಶಕ್ತವಾಯಿತು. ನವೀನ್ ಉಲ್​ ಹಕ್​, ಮೊಹ್ಸಿನ್ ಖಾನ್ ಮತ್ತು ಯಶ್​ ಠಾಕೂರ್​ ಡೆತ್​ ಓವರ್​ನಲ್ಲಿ ಉತ್ತಮ ಪ್ರದರ್ಶನ ನೀಡಿದರು. ಕೊನೆಯ ಓವರ್​ನ 6 ಬಾಲ್​ಗೆ 11 ರನ್​ನ ಅವಶ್ಯಕತೆ ಇತ್ತು. ಕೃನಾಲ್​ ಈ ಆರು ಬಾಲ್​ನ ಜವಾಬ್ದಾರಿಯನ್ನು ಮೊಹ್ಸಿನ್ ಖಾನ್​ಗೆ ನೀಡಿದ್ದರು.

ಮೊಹ್ಸಿನ್ ಖಾನ್​ ಇದನ್ನು ಯಶಸ್ವಿಯಾಗಿ ಪೂರೈಸಿದರು. 6 ಬಾಲ್​ನಲ್ಲಿ ಉತ್ತಮ ಯಾರ್ಕರ್​ಗಳ ಪ್ರಯೋಗದಿಂದ ಕೇವಲ 5 ರನ್​ ಬಿಟ್ಟುಕೊಟ್ಟ ತಂಡಕ್ಕೆ ಗೆಲುವು ತಂದರು. ನಿನ್ನೆ ಪಂದ್ಯದಲ್ಲಿ 3 ಓವರ್​ ಮಾಡಿದ್ದ ಮೊಹ್ಸಿನ್ ಖಾನ್ ಕೇವಲ 26 ರನ್​ ಬಿಟ್ಟುಕೊಟ್ಟು 1 ವಿಕೆಟ್​ ಕಬಳಿಸಿದರು. ಪಂದ್ಯದ ಎರಡನೇ ಓವರ್​ನಲ್ಲಿ 13 ರನ್​ ಬಿಟ್ಟುಕೊಟ್ಟರೆ ನಂತರ 17ನೇ ಓವರ್​ನಲ್ಲಿ 8 ರನ್​ ಕೊಟ್ಟು ವಧೇರಾ ಅವರ ವಿಕೆಟ್ ಕಿತ್ತರು. 20ನೇ ಓವರ್​ನಲ್ಲಿ 5 ರನ್​ ಮಾತ್ರ ನೀಡಿದರು. ಕೊನೆಯ ಓವರ್​ನಲ್ಲಿ ಟಿಮ್​ ಡೇವಿಡ್​ ಮತ್ತು ಗ್ರೀನ್​ ಕ್ರೀಸ್​ನಲ್ಲಿದ್ದರೂ ಗೆಲುವಿನ ರನ್ ಕದಿಯದಂತೆ ಮೊಹ್ಸಿನ್ ಖಾನ್​ ಕಟ್ಟಿಹಾಕಿದರು.

ಪಂದ್ಯದ ನಂತರ ಮಾತನಾಡಿದ ಮೊಹ್ಸಿನ್ ಖಾನ್ "ನಾನು ಗಾಯಗೊಂಡು ಒಂದು ವರ್ಷದ ನಂತರ ಆಡುತ್ತಿದ್ದೇನೆ, ಇದು ಕಠಿಣ ಸಮಯವಾಗಿದೆ. ಕಳೆದ 10 ದಿನಗಳಿಂದ ನನ್ನ ತಂದೆ ಐಸಿಯುನಲ್ಲಿದ್ದರು. ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ. ಅವರು ಪಂದ್ಯವನ್ನು ನೋಡುತ್ತಿರುತ್ತಾರೆ. ನಾನು ಅವರಿಗಾಗಿ ಬೌಲಿಂಗ್​ ಮಾಡಿದೆ" ಎಂದಿದ್ದಾರೆ.

"ನಾನು ಅಭ್ಯಾಸ ಮಾಡುವಾಗ ಏನು ಕಲಿತಿದ್ದೇನೋ ಅದನ್ನೇ ಇಲ್ಲಿ ಪ್ರಯೋಗಿಸಿದೆ. ಅದು ಬಿಟ್ಟರೆ ಬೇರೆ ಏನು ಮಾಡಲಿಲ್ಲ. ನಾಯಕ ಕೃನಾಲ್​ ಅವರು ಸಹ ಅದೇ ಸಲಹೆಯನ್ನು ನನಗೆ ನೀಡಿದರು. ಸ್ಕೋರ್​ ಬೋರ್ಡ್​ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಕೇವಲ ಕೊನೆಯ ಆರು ಬಾಲ್​ಗಳ ಬಗ್ಗೆ ಮಾತ್ರ ಏಕಾಗ್ರತೆ ವಹಿಸಿದ್ದೆ. ಕೊನೆಯಲ್ಲಿ ಬೋರ್ಡ್​ ಕಂಡಾಗ ನಾನು ಉತ್ತಮವಾಗಿ ನಿರ್ವಹಿಸಿದ್ದೆ. ಬಾಲ್​ ಪಿಚ್​ನಲ್ಲಿ ನಿಂತು ಹೋಗುವುದನ್ನು ಗಮನಿಸಿ ಎರಡು ಸ್ಲೋ ಬಾಲ್​ ಪ್ರಯೋಗಿಸಿದೆ. ನಂತರ ಯಾರ್ಕರ್​ಗಳನ್ನು ಮಾಡಿದೆ. ಅವು ರಿವರ್ಸ್​ ಸ್ವಿಂಗ್​ ಆದವು, ಇದು ಉತ್ತಮ ಎನಿಸಿತು" ಎಂದಿದ್ದಾರೆ. ಇದರ ಜೊತೆಗೆ ತಂಡದಲ್ಲಿ ಸಹಕಾರ ನೀಡಿದ ಗೌತಮ್ ಗಂಭೀರ್, ವಿಜಯ್ ದಹಿಯಾ ಅವರಿಗೆ ಧನ್ಯವಾದ ಹೇಳಿದರು.

ಇದನ್ನೂ ಓದಿ: ಮುಂಬೈ ವಿರುದ್ಧ ಲಕ್ನೋಗೆ 5 ರನ್‌ಗಳ ಗೆಲುವು: ಅಬ್ಬರಿಸಿದ ಸ್ಟೋಯಿನಿಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.