ETV Bharat / city

ತೆರಿಗೆ ಹಣದಲ್ಲಿ ಉಚಿತ ಅಕ್ಕಿ ಕೊಡಲು ಸರ್ಕಾರಕ್ಕೇನು ಸಮಸ್ಯೆ?: ಸಿದ್ದರಾಮಯ್ಯ ಪ್ರಶ್ನೆ

author img

By

Published : Aug 3, 2021, 9:22 PM IST

siddaramaiah
ಸಿದ್ದರಾಮಯ್ಯ

ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಗೆ ಬಡವರ ಅನ್ನ ಕಸಿಯುವ ಬುದ್ದಿ ಎಲ್ಲಿಂದ ಬಂತು, ನಾವು ಏಳು ಕೆ.ಜಿ. ಅಕ್ಕಿ ನೀಡಿದ್ದೆವು, ಅವರು ಅದಕ್ಕೆ ಕತ್ತರಿ ಹಾಕಿದ್ದಾರೆ ಎಂದು ಗುಡುಗಿದರು. ಅಲ್ಲದೇ ಸಿಎಂ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ರಬ್ಬರ್​ ಸ್ಟಾಂಪ್​ ಅವರಿಗೆ ಸ್ವತಂತ್ರವಾಗಿ ಅಧಿಕಾರ ಮಾಡಲು ಸಾಧ್ಯವಿಲ್ಲ ಎಂದು ಮತ್ತೆ ಗುಡುಗಿದರು.

ಬೆಂಗಳೂರು: ಬಡಜನರ ತೆರಿಗೆ ಹಣ ಪಡೆಯುವ ಸರ್ಕಾರಕ್ಕೆ ಅವರಿಗೆ ಉಚಿತ ಅಕ್ಕಿ ನೀಡಲು ಸರ್ಕಾರಕ್ಕೆ ಏನು ಸಮಸ್ಯೆ,? ಬಡವರ ಹಣ ಯಾರಪ್ಪನ ಮನೆಯ ಸ್ವತ್ತಲ್ಲ, ಅವರ ಹಣವನ್ನು ಅವರಿಗಾಗಿ ಖರ್ಚು ಮಾಡುವುದರಲ್ಲಿ ಏನು ತಪ್ಪಿದೆ ಎಂದು ಸರ್ಕಾರವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಪದ್ಮನಾಭ ನಗರ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್​ಗಳ ವಿತರಣಾ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಅವರು ಚಾಲನೆ ನೀಡಿ ನಂತರ ಮಾತನಾಡಿ, ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಏಳು ಕೆ.ಜಿ ಅಕ್ಕಿ ಕೊಡುತ್ತಿದ್ದೆವು. ಆದರೆ ಬಿಜೆಪಿ ಸರ್ಕಾರ ಅದಕ್ಕೆ ಕತ್ತರಿ ಹಾಕಿದೆ. ಬಡವರ ಅನ್ನ ಕಸಿಯುವ ಬುದ್ದಿ ಇವರಿಗೇಕೆ ಬಂದಿದೆ? ಎಂದು ಕಿಡಿಕಾರಿದರು.

ಬಿಎಸ್​ವೈ ಭ್ರಷ್ಟಾಚಾರ ಹೆಚ್ಚಾಗಿದ್ದಕ್ಕೆ ಕಿತ್ತು ಹಾಕಿದ್ರು: ಯಡಿಯೂರಪ್ಪ ಭ್ರಷ್ಟಾಚಾರ ಜಾಸ್ತಿಯಾದ ಕಾರಣ ಅಧಿಕಾರದಿಂದ ಕಿತ್ತು ಹಾಕಿದ್ದಾರೆ, ಇದು ಸತ್ಯಸಂಗತಿ. ಆರ್​ಟಿಜಿಎಸ್ ಮೂಲಕ ಲಂಚ ಪಡೆದ ಭ್ರಷ್ಟ ರಾಜಕಾರಣಿ ಯಾರಾದ್ರೂ ಇದ್ದರೆ, ಅದು ಯಡಿಯೂರಪ್ಪ ಮಾತ್ರ. ಈ ವಿಚಾರವನ್ನು ಹೇಳಲು ನಮ್ಮ ಕಾರ್ಯಕರ್ತರು ಹೆದರಬಾರದು ಎಂದು ಹೇಳಿದರು.

ಕೋವಿಡ್​ ಸೋಂಕಿತರ ಸಾವಿಗೆ ಶಾಸಕ ಆರ್. ಅಶೋಕ್​ ಕಾರಣ: ಪದ್ಮನಾಭ ನಗರದಲ್ಲಿ ಕೊರೊನಾ ಸೋಂಕಿಗೆ ಯಾರಾದರೂ ಬಲಿಯಾಗಿದ್ದರೆ ಅದಕ್ಕೆ ಕ್ಷೇತ್ರದ ಶಾಸಕ ಆರ್. ಅಶೋಕ್ ಕಾರಣ. ಅನೇಕ ಬಾರಿ ಕ್ಷೇತ್ರದಿಂದ ಗೆದ್ದಿದ್ದಾರೆ, ಕೊರೊನಾ ಸೋಂಕಿತರಿಗೆ ಆಹಾರ, ಔಷಧ, ಆಸ್ಪತ್ರೆ ಒದಗಿಸಬೇಕಾಗಿದ್ದು ಅವರ ಕರ್ತವ್ಯವಲ್ಲವೆ?

ಕ್ಷೇತ್ರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಭೆ ಮಾಡಲು ಅಶೋಕ್ ಅವರ ಅನುಮತಿ ಪಡೆಯಬೇಕು ಅಂತಾರೆ, ಇದೇನು ಅಶೋಕ್ ಅವರ ಸ್ವಂತ ಸ್ವತ್ತೇ? ಇಂತಹಾ ಅಸಂಬದ್ಧ ವಿಷಯಗಳಿಗೆ ಪೊಲೀಸ್ ಇಲಾಖೆ ಸೊಪ್ಪು ಹಾಕಬಾರದು, ಇನ್ನು ಒಂದೂವರೆ ವರ್ಷ ಕಳೆದರೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಇದಕ್ಕೆಲ್ಲ ಉತ್ತರ ಕೊಡಬೇಕಾಗುತ್ತದೆ ಎಂದರು.

ಯಡಿಯೂರಪ್ಪಗೆ ಮುಂಬಾಗಿಲ ರಾಜಕಾರಣ ಗೊತ್ತಿಲ್ಲ: ಯಡಿಯೂರಪ್ಪ ಅವರಿಗೆ ಮುಂಬಾಗಿಲ ಮೂಲಕ ರಾಜಕಾರಣ ಮಾಡಿ ಗೊತ್ತಿಲ್ಲ. ಆಪರೇಷನ್ ಕಮಲ, ಕುದುರೆ ವ್ಯಾಪಾರದಂತ ಹಿಂಬಾಗಿಲ ರಾಜಕಾರಣ ಮಾಡೋಕೆ ಮಾತ್ರ ಗೊತ್ತಿದೆ. ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿಸಿರುವುದೇ ಯಡಿಯೂರಪ್ಪ. ಬೊಮ್ಮಾಯಿ ಬಿಎಸ್​ವೈ ರಬ್ಬರ್ ಸ್ಟಾಂಪ್. ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡೋಕಾಗುತ್ತಾ? ಎಂದು ಪ್ರಶ್ನಿಸಿದರು.

ಬಿಜೆಪಿ ಬಂಡವಾಳ ಶಾಹಿಗಳ ಪಕ್ಷ: ಗರೀಭಿ ಹಠಾವೋ ಘೋಷಣೆ ಮಾಡಿದ್ದು ಇಂದಿರಾಗಾಂಧಿ, ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿ ಮಾಡಿದವರು ನೆಹರು, ದೂರಸಂಪರ್ಕ ಅಭಿವೃದ್ಧಿ ಮಾಡಿದವರು ರಾಜೀವ್ ಗಾಂಧಿ, ದೇಶಕ್ಕೆ ಬಿಜೆಪಿಯ ಕೊಡುಗೆ ಏನು? ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರೋದು ಬಿಜೆಪಿಯವರು. ಕಳೆದ ಬಾರಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಹದಿನಾರು ಸ್ಥಾನ ಗೆದ್ದಿದ್ದೆವು, ಮುಂದಿನ ಬಾರಿ ಕನಿಷ್ಠ 25 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಹಾಗಾಗಿ ಪದ್ಮನಾಭ ನಗರದಲ್ಲಿ ಜನ ಬದಲಾವಣೆ ಮಾಡಬೇಕು. ಬಿಜೆಪಿ ಬಂಡವಾಳ ಶಾಹಿ ಪಕ್ಷ, ಈ ಪಕ್ಷದಿಂದ ಅಭಿವೃದ್ಧಿ ನಿರೀಕ್ಷೆ ಸಾಧ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ಪ್ರತಿಪಾದಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.