ETV Bharat / city

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ.. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಕ್ಕಾ ಎಂದ ಸಿದ್ದರಾಮಯ್ಯ

author img

By

Published : May 25, 2022, 7:18 PM IST

ಕಾಂಗ್ರೆಸ್​ನಿಂದ ಪದವೀಧರ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಜಿ.ಮಧು ಅವರು ಈ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

former-cm-siddaramaiah
ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಕ್ಕಾ ಎಂದ ಸಿದ್ದರಾಮಯ್ಯ

ಮೈಸೂರು: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಈ ಬಾರಿ ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಜಿ.ಮಧು ಮಾದೇಗೌಡ ಅವರು ಇಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಾಜಿ ಸಿಎಂ, ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ನಮ್ಮ ಅಭ್ಯರ್ಥಿಯ ಗೆಲುವಿಗೆ ಪೂರಕವಾಗುತ್ತದೆ. ರಾಜ್ಯ ಸರ್ಕಾರದ ನಡೆಯಿಂದ ಪದವೀಧರರು ರೋಸಿ ಹೋಗಿದ್ದಾರೆ. ನಿರುದ್ಯೋಗ ಸೃಷ್ಟಿ ಮಾಡಿದ್ದಾರೆ. ಪ್ರಾಧ್ಯಾಪಕರ ನೇಮಕಾತಿ ಹಗರಣಗಳು ಈ ಚುನಾವಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.

ಒಗ್ಗಟ್ಟಾಗಿ ಕೆಲಸ ಮಾಡಲು ಕರೆ: ನಾಮಪತ್ರ ಸಲ್ಲಿಕೆಗೂ ಮುನ್ನ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ದೇಶದ ಸಾಮರಸ್ಯ ಹಾಳು ಮಾಡಿದೆ. ಶಾಂತಿ ನೆಮ್ಮದಿ ಇಲ್ಲದೇ ದೇಶ ಉದ್ಧಾರ ಆಗಲ್ಲ. ಇದೇ ರೀತಿ ಬಿಟ್ಟರೆ ಶ್ರೀಲಂಕಾಕ್ಕೆ ಆದ ಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಾನು ಜೆಡಿಎಸ್ ಬಗ್ಗೆ ಮಾತನಾಡಲ್ಲ. ಜೆಡಿಎಸ್ ಗೆಲ್ಲಲ್ಲ ಅಂತ ಗೊತ್ತು. ಅದಕ್ಕೆ ಶ್ರೀಕಂಠೇಗೌಡ ಸ್ಪರ್ಧೆ ಮಾಡಲಿಲ್ಲ. ಮಂಡ್ಯದಲ್ಲಿ 7 ಜೆಡಿಎಸ್ ಎಂಎಲ್​ಎ ಇದ್ರೂ ಗೂಳಿಗೌಡ ಮಂಡ್ಯದಲ್ಲಿ ಗೆದ್ದಿದ್ದಾರೆ ಅಂದರೆ ಇಲ್ಲಿ ಗೆಲ್ಲಲು ಆಗಲ್ವಾ. ನೀವು ಕೆಲಸ ಸರಿಯಾಗಿ ಮಾಡಿದ್ರೆ ಮಧು ಮಾದೇಗೌಡ ನೂರಕ್ಕೆ ನೂರು ಗೆದ್ದೇ ಗೆಲ್ತಾರೆ. ನೀವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕರ್ತರಿಗೆ ಕರೆ‌ ನೀಡಿದರು.

ಓದಿ: ರಾಜ್ಯ ವಿಧಾನಸಭೆಯಿಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಆಯ್ಕೆಗೆ ಬಿಜೆಪಿಗರ ಅಪಸ್ವರ!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.