ETV Bharat / city

ಕಾಂಗ್ರೆಸ್​​ಗೆ ಗುಡ್ ಬೈ ಹೇಳಿದ್ದ ಮುಖ್ಯಮಂತ್ರಿ ಚಂದ್ರು ಇಂದು 'ಆಪ್‌'ಗೆ ಸೇರ್ಪಡೆ

author img

By

Published : Jun 7, 2022, 7:07 AM IST

Mukhyamantri Chandru
ಮುಖ್ಯಮಂತ್ರಿ ಚಂದ್ರು

ಇತ್ತೀಚೆಗೆ ಕಾಂಗ್ರೆಸ್ ತೊರೆದಿದ್ದ ನಟ ಮುಖ್ಯಮಂತ್ರಿ ಚಂದ್ರು ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ.

ಬೆಂಗಳೂರು: ರಾಜ್ಯಸಭೆ ಸಭೆ ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ಹಿರಿಯ ಚಿತ್ರ ನಟ, ಮಾಜಿ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು 'ಆಮ್ ಆದ್ಮಿ' ಪಕ್ಷ ಸೇರುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇಂದು(ಮಂಗಳವಾರ) ಬೆಳಗ್ಗೆ ಖಾಸಗಿ ಹೋಟೆಲ್​​​ನಲ್ಲಿ ನಡೆಯುವ ಸರಳ ಕಾರ್ಯಕ್ರಮದಲ್ಲಿ ಆಪ್​​ನ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ಅವರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರಲಿದ್ದಾರೆ.

ಕಾಂಗ್ರೆಸ್ ತೊರೆದಿರುವ ಮುಖ್ಯಮಂತ್ರಿ ಚಂದ್ರು ಅವರನ್ನು ಆಪ್​​ನ ಪೃಥ್ವಿ ರೆಡ್ಡಿ ಮತ್ತು ಇತರ ಪ್ರಮುಖರು ಭೇಟಿ ಮಾಡಿ ಪಕ್ಷ ಸೇರಲು ಮನವೊಲಿಸಿದ್ದಾರೆ. ಇದಕ್ಕೆ ಸ್ಪಂದಿಸಿ ಪಕ್ಷ ಸೇರುವ ಭರವಸೆ ನೀಡಿದ್ದಾರೆ. ಈ ಬಗ್ಗೆ ತಿಳಿಸಿರುವ ಎಎಪಿ ಪಕ್ಷ, ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಕಳೆದ ತಿಂಗಳು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್​​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೀಗ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಲು ನಿರ್ಧರಿಸಿದ್ದಾರೆ ಎಂದು ತಿಳಿಸಿದೆ.

ಮೂಲಗಳ ಪ್ರಕಾರ ಕಾಂಗ್ರೆಸ್ ಪಕ್ಷದಿಂದ ಅಸಮಾಧಾನ ಹೊಂದಿರುವ ಅನೇಕ ನಾಯಕರು ಮುಂದಿನ ದಿನಗಳಲ್ಲಿ ಎಎಪಿ ಸೇರುವ ಸಾಧ್ಯತೆ ಇದೆ. ಇತ್ತೀಚೆಗೆ ಅಸಮಾಧಾನಗೊಂಡು ಕಾಂಗ್ರೆಸ್ ತೊರೆದಿದ್ದ ರಾಷ್ಟ್ರೀಯ ವಕ್ತಾರ ಬ್ರಿಜೇಶ್‌ ಕಾಳಪ್ಪ ಕೂಡ ಎಎಪಿಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಉಳಿದಂತೆ ಕಾಂಗ್ರೆಸ್​​ನಿಂದ ಕಡೆಗಣಿಸಲ್ಪಟ್ಟ ಕೆಲ ನಾಯಕರು ಎಎಪಿ ಕಡೆ ಮುಖಮಾಡಲಿದ್ದಾರೆ ಎಂದು ಎಎಪಿ ತಿಳಿಸಿದೆ.

‌‌ಬಿಜೆಪಿಯಲ್ಲಿ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಮುಖ್ಯಮಂತ್ರಿ ಚಂದ್ರು, ಈ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿದ್ದರು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಾಗ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಮಾತನಾಡಿ ಕಾಂಗ್ರೆಸ್ ಪಕ್ಷ ಸೇರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಒಂದು ವರ್ಷದ ಅವಧಿಗೆ ಮುಂದುವರೆದಿದ್ದರು.

ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನ ಮಾನದ ನಿರೀಕ್ಷೆಯಲ್ಲಿದ್ದ ಮುಖ್ಯಮಂತ್ರಿ ಚಂದ್ರು ಅವರು ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಂತಿಮವಾಗಿ ರಾಜ್ಯಸಭೆ ಮತ್ತು ವಿಧಾನ ಪರಿಷತ್​​ನಲ್ಲಿ ಟಿಕೆಟ್ ನೀಡದಿರುವುದಕ್ಕೆ ಬೇಸತ್ತು ಪಕ್ಷಕ್ಕೆ ಗುಡ್ ಬೈ ಹೇಳಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಪಕ್ಷಕ್ಕೆ ಮುಖ್ಯಮಂತ್ರಿ ಚಂದ್ರು ರಾಜೀನಾಮೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.