ETV Bharat / bharat

Brij Bhushan Singh: ಜನಪ್ರತಿನಿಧಿಗಳ ಕೋರ್ಟ್​ಗೆ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್ ಭೂಷಣ್ ಪ್ರಕರಣ ವರ್ಗಾವಣೆ

author img

By

Published : Jun 22, 2023, 5:31 PM IST

Brij Bhushan Sharan Singh
ಬ್ರಿಜ್ ಭೂಷಣ್ ಶರಣ್ ಸಿಂಗ್

ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ವಿರುದ್ಧದ ಪ್ರಕರಣವನ್ನು ಜನಪ್ರತಿನಿಧಿಗಳ ಕೋರ್ಟ್​ಗೆ ವರ್ಗಾಯಿಸಲಾಗಿದೆ.

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್‌ಐ)ದ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣವನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯವು ಎಂಪಿ/ಎಂಎಲ್​ಎ (ಜನಪ್ರತಿನಿಧಿಗಳ) ಕೋರ್ಟ್​ಗೆ ಇಂದು ವರ್ಗಾಯಿಸಿದೆ.

ಖ್ಯಾತ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಏಳು ಜನ ಕುಸ್ತಿಪಟುಗಳು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಸೇರಿ ಎರಡು ಕೇಸ್​ಗಳು ದಾಖಲಾಗಿದ್ದವು. ಜೂನ್​ 15ರಂದು ದೆಹಲಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಿದ್ದರು. ಈ ವೇಳೆ ಬ್ರಿಜ್ ಭೂಷಣ್ ವಿರುದ್ಧ ಪೋಕ್ಸೋ ರದ್ದು ಮಾಡುವ ಬಗ್ಗೆಯೂ ವರದಿ ಸಲ್ಲಿಸಿದ್ದರು.

ಇದನ್ನೂ ಓದಿ: Wrestlers Protest: "ಬ್ರಿಜ್ ಭೂಷಣ್ ವಿರುದ್ಧ ನಮ್ಮ ಹೋರಾಟ, ಸರ್ಕಾರದ ವಿರುದ್ಧ ಅಲ್ಲ"-ಸಾಕ್ಷಿ ಮಲಿಕ್ ದಂಪತಿ

ಇಂದು ಪ್ರಕರಣದ ವಿಚಾರಣೆ ವೇಳೆ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮಹಿಮಾ ರಾಯ್ ಸಿಂಗ್ ಅವರು ಪೋಕ್ಸೋ ರದ್ದತಿ ಅರ್ಜಿಯನ್ನು ಪ್ರತ್ಯೇಕವಾಗಿ ಸಲ್ಲಿಸಲಾಗಿದೆಯೇ ಎಂದು ದೆಹಲಿ ಪೊಲೀಸರನ್ನು ಕೇಳಿದರು. ಆಗ ಠಾಣಾಧಿಕಾರಿ ಉಪೇಂದ್ರ ಸಿಂಗ್, ಪೋಕ್ಸೋ ಪ್ರಕರಣದಲ್ಲಿ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ರದ್ದತಿ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನಂತರ ನ್ಯಾ. ಮಹಿಮಾ ರೈ ಸಿಂಗ್ ಈ ಪ್ರಕರಣವನ್ನು ಎಂಪಿ/ಎಂಎಲ್​ಎ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಇದೀಗ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಹರ್ಜೀತ್ ಸಿಂಗ್ ಜಸ್ಪಾಲ್ ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಲಿದೆ.

ಜೂನ್​ 27ರಿಂದ ಚಾರ್ಜ್‌ಶೀಟ್‌ ವಿಚಾರಣೆ: ಪ್ರಶಸ್ತಿ ವಿಜೇತ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪವು ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಆರೋಪ ಕೇಳಿ ಬಂದ ತಿಂಗಳುಗಳ ನಂತರ ಪೊಲೀಸರು ಅಂತಿಮವಾಗಿ ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಚಾರ್ಜ್‌ಶೀಟ್​ನ ಮುಂದಿನ ವಿಚಾರಣೆ ಜೂನ್ 27ರಂದು ನಡೆಯಲಿದೆ. ಜೂನ್ 15ರಂದು ಸಲ್ಲಿಕೆಯಾದ ಚಾರ್ಜ್‌ಶೀಟ್​ನಲ್ಲಿ ಸೆಕ್ಷನ್ 354 (ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವಿಕೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಕಲಂಗಳನ್ನು ಪೊಲೀಸರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: Wrestlers protest: ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ರೌಸ್​ ಅವೆನ್ಯೂ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ

ತಿಂಗಳುಗಳ ಕಾಲ ನಡೆದಿದ್ದ ಪ್ರತಿಭಟನೆ: ಬ್ರಿಜ್ ಭೂಷಣ್ ಶರಣ್ ಸಿಂಗ್ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಮತ್ತು ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು. ಕೇಂದ್ರ ಸರ್ಕಾರವು ಸಿಂಗ್ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ಮೇಲುಸ್ತುವಾರಿ ಸಮಿತಿ ರಚಿಸಿತ್ತು.

ಮತ್ತೊಂದೆಡೆ, ಕುಸ್ತಿಪಟುಗಳು ಸಿಂಗ್ ವಿರುದ್ಧ ಪೊಲೀಸರಿಗೂ ದೂರು ನೀಡಿದ್ದರು. ಆದರೆ, ಇದುವರೆಗೂ ಡಬ್ಲ್ಯುಎಫ್‌ಐ ವಿರುದ್ಧವಾಗಲಿ ಅಥವಾ ಅದರ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧವಾಗಲಿ ಪೊಲೀಸರು ಯಾವುದೇ ಕೇಸ್​ ದಾಖಲಿಸಿಲ್ಲ ಎಂದು ಏಪ್ರಿಲ್​ನಲ್ಲಿ ಮತ್ತೆ ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಕುಳಿತಿದ್ದರು. ಏಪ್ರಿಲ್ 28ರಂದು ಸುಪ್ರೀಂ ಕೋರ್ಟ್ ಆದೇಶದ ನಂತರ ದೆಹಲಿ ಪೊಲೀಸರು ಸಿಂಗ್ ವಿರುದ್ಧ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಯಲ್ಲಿ ಎರಡು ಕೇಸ್​ಗಳನ್ನು ದಾಖಲಿಸಿದ್ದರು.

ಇತ್ತೀಚೆಗೆ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಭೇಟಿಯಾಗಿ ಚರ್ಚೆ ನಡೆಸಿದ್ದರು. ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆ ನಿಲ್ಲಿಸಿದ್ದಾರೆ. ನ್ಯಾಯ ದೊರೆಯದೇ ಹೋದಲ್ಲಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಮತ್ತೊಂದೆಡೆ, ತನ್ನ ವಿರುದ್ಧದ ಒಂದೇ ಒಂದು ಆರೋಪ ಸಾಬೀತಾದರೂ ನೇಣು ಹಾಕಿಕೊಳ್ಳುತ್ತೇನೆ ಎಂದು ಬ್ರಿಜ್ ಭೂಷಣ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ''ನನ್ನನ್ನು ಗಲ್ಲಿಗೇರಿಸಿ, ಆದ್ರೆ ಕುಸ್ತಿ ಚಟುವಟಿಕೆಗಳು ನಿಲ್ಲಬಾರದು..'': ಬ್ರಿಜ್ ಭೂಷಣ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.