ETV Bharat / bharat

370ನೇ ವಿಧಿ ರದ್ಧತಿ: ಡಿಸೆಂಬರ್​​​​​​ 11ಕ್ಕೆ ತೀರ್ಪು ನೀಡಲಿರುವ ಸುಪ್ರೀಂಕೋರ್ಟ್​​​

author img

By ETV Bharat Karnataka Team

Published : Dec 8, 2023, 7:13 AM IST

370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ನೀಡಲಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್​ನ ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು 16 ದಿನಗಳ ಕಾಲ ವಾದ ಪ್ರತಿವಾದ ಆಲಿಸಿ ತೀರ್ಪು ಕಾಯ್ದಿರಿತ್ತು.

SC to deliver judgment on Dec 11
370ನೇ ವಿಧಿ ರದ್ಧತಿ: ಡಿಸೆಂಬರ್​​​​​​ 11ಕ್ಕೆ ತೀರ್ಪು ನೀಡಲಿರುವ ಸುಪ್ರೀಂಕೋರ್ಟ್​​​

ನವದೆಹಲಿ: ಈ ಹಿಂದಿನ ಜಮ್ಮು - ಕಾಶ್ಮೀರ ರಾಜ್ಯಕ್ಕೆ ನೀಡಿದ್ದ 370ನೇ ವಿಧಿ ರದ್ದತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ತೀರ್ಪು ಡಿಸೆಂಬರ್ 11ರಂದು ಹೊರಬೀಳಲಿದೆ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತ ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್​​​, ಸೆಪ್ಟೆಂಬರ್ 5ರಂದು ತೀರ್ಪು ಕಾಯ್ದಿರಿಸಿತ್ತು.

ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಮತ್ತು ಸೂರ್ಯ ಕಾಂತ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ, ಈ ಸಂಬಂಧ ಸತತವಾಗಿ 16 ದಿನಗಳ ಕಾಲ ವಾದ- ಪ್ರತಿವಾದಗಳನ್ನು ಆಲಿಸಿತ್ತು. ಸುದೀರ್ಘ ವಿಚಾರಣೆ ಕೈಗೊಂಡಿತ್ತು. ಹಿರಿಯ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್, ಗೋಪಾಲ್ ಸುಬ್ರಮಣಿಯಂ, ದುಷ್ಯಂತ್ ದವೆ, ಜಾಫರ್ ಷಾ, ಗೋಪಾಲ್ ಶಂಕರನಾರಾಯಣನ್ ಅರ್ಜಿದಾರರ ಪರ ತಮ್ಮ ಪ್ರಬಲ ವಾದಗಳನ್ನು ಮಂಡಿಸಿದ್ದರು.

ಇನ್ನು ಸರ್ಕಾರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿವಾದ ಮಂಡಿಸಿದ್ದರು. ಜಮ್ಮು - ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಯಾಕೆ ಹಿಂಪಡೆಯಲಾಯಿತು ಎಂಬುದರ ಬಗ್ಗೆ ಸುಪ್ರೀಂಕೋರ್ಟ್​ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಇನ್ನು ಹಲವು ಅರ್ಜಿಗಳ ಪರ ವಕೀಲರು ವಾದ ಮಂಡಿಸಿದ್ದರು. ಸಜ್ಜದ್ ಲೋನ್ ನೇತೃತ್ವದ ಜೆ & ಕೆ ಪೀಪಲ್ಸ್ ಕಾನ್ಫರೆನ್ಸ್ ಸಲ್ಲಿಸಿದ್ದ ಅರ್ಜಿಗಳ ಪರ ವಕೀಲ ಧವನ್ ವಾದ ಮಂಡಿಸಿದ್ದರು.

ಇತರ ರಾಜಪ್ರಭುತ್ವದ ರಾಜ್ಯಗಳಂತೆ ಜಮ್ಮು ಕಾಶ್ಮೀರ ವಿಲೀನ ಒಪ್ಪಂದಕ್ಕೆ ಸಹಿ ಮಾಡಿರಲಿಲ್ಲ ಎಂಬ ಅಂಶವನ್ನು ವಿಚಾರಣೆ ವೇಳೆ ಕೋರ್ಟ್​ ಗಮನಕ್ಕೆ ತರಲಾಗಿತ್ತು. ಆಗಸ್ಟ್ 2 ರಂದು ಸುಪ್ರೀಂ ಕೋರ್ಟ್ ಅರ್ಜಿದಾರರ ವಾದವನ್ನು ಆಲಿಸಲು ಶುರು ಮಾಡಿತ್ತು. ಮತ್ತೊಬ್ಬ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು. ಜಮ್ಮು ಕಾಶ್ಮೀರದ ಜನರು ಭಾರತದೊಂದಿಗೆ ಇದ್ದಾರೆ. ಆದರೆ, ಅವರಿಗೆ 370 ನೇ ವಿಧಿ ಅನ್ವಯ ವಿಶೇಷ ಸಂಬಂಧವಿದೆ ಎಂದು ಪ್ರತಿಪಾದಿಸಿದ್ದರು.

ಕೇಂದ್ರ ಸರ್ಕಾರ 2019ರಲ್ಲಿ ಸಂವಿಧಾದನ 35 -ಎ ಕಲಂ ಅನ್ವಯ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿತ್ತು. 2019 ರ ಆಗಸ್ಟ್​ 5 ರಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿ ಹಾಗೂ ಜಮ್ಮು ಕಾಶ್ಮೀರ ಮತ್ತು ಲಡಾಖ್​ಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಮಾಡುವುದಾಗಿ ಸಂಸತ್​ನಲ್ಲಿ ಪ್ರಸ್ತಾಪ ಮಂಡಿಸಿದ್ದರು. ಇದಕ್ಕೆ ಸಂಸತ್​ ಅನುಮೋದನೆ ಕೂಡಾ ನೀಡಿತ್ತು.

ಇದನ್ನು ಓದಿ: 370ನೇ ವಿಧಿ ರದ್ದು ಪ್ರಕರಣ: ಡಿಸೆಂಬರ್​ 2ನೇ ವಾರದಲ್ಲಿ ಸುಪ್ರೀಂಕೋರ್ಟ್​ನಿಂದ ತೀರ್ಪು ಪ್ರಕಟ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.