ETV Bharat / bharat

Uniform Civil Code: ಏಕರೂಪ ನಾಗರಿಕ ಸಂಹಿತೆ; ಕಾನೂನು ಆಯೋಗಕ್ಕೆ 15 ದಿನದಲ್ಲಿ 8.5 ಲಕ್ಷ ಸಲಹೆ, ಜನರಿಂದ ಭಾರಿ ಸ್ಪಂದನೆ

author img

By

Published : Jun 28, 2023, 8:07 PM IST

ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ಕಾನೂನು ಆಯೋಗ ಜನರಿಂದ ಸಲಹೆ, ಅಭಿಪ್ರಾಯ ಕೋರಿತ್ತು.

ಏಕರೂಪ ನಾಗರಿಕ ಸಂಹಿತೆ
ಏಕರೂಪ ನಾಗರಿಕ ಸಂಹಿತೆ

ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತಂತೆ ಕಾನೂನು ಆಯೋಗ ಜನರಿಂದ ಸಲಹೆ, ಅಭಿಪ್ರಾಯಗಳನ್ನು ಕೇಳಿದ್ದು, ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 15 ದಿನದಲ್ಲಿ 8.5 ಲಕ್ಷ ಪ್ರತಿಕ್ರಿಯೆಗಳು ಬಂದಿವೆ ಎಂದು ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮಾಹಿತಿ ನೀಡಿದ್ದಾರೆ.

ಇಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವಸ್ತಿ, ಕಾನೂನು ಕುರಿತಂತೆ ಸಲಹೆ ನೀಡಲು ಕೇಳಿದ ಬಳಿಕ ಜನರಿಂದ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನ್​ 27 ರವರೆಗೂ ನಾವು 8.5 ಲಕ್ಷ ಪ್ರತಿಕ್ರಿಯೆಗಳನ್ನು ಸ್ವೀಕರಿಸಿದ್ದೇವೆ. ಇದು ಇನ್ನಷ್ಟು ಹೆಚ್ಚಲಿದೆ ಎಂದು ತಿಳಿಸಿದರು.

ಏಕರೂಪ ನಾಗರಿಕ ಸಂಹಿತೆ (UCC) ಹೊಸ ಕಾನೂನಲ್ಲ. 2016ರಲ್ಲಿ ರಚಿಸಲಾದ ನಿಯಮಗಳನ್ನೇ ಈಗ ಮಂಡಿಸಲಾಗುತ್ತದೆ. 2018ರಲ್ಲಿ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಲಾಗಿತ್ತು. 2018 ರಿಂದ ನವೆಂಬರ್ 2022 ರವರೆಗೆ ಯಾವುದೇ ಪ್ರಸ್ತಾಪಗಳು ನಡೆಯದ ಕಾರಣ, ಕಾನೂನು ಆಯೋಗವೂ ಯಾವುದೇ ಕಾರ್ಯನಿರ್ವಹಿಸಲಿಲ್ಲ. 2022ರ ನವೆಂಬರ್​ನಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಲಾಗಿದೆ. ಇದೀಗ ಹೆಚ್ಚಿನ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.

ಎಲ್ಲ ಧರ್ಮ, ಜಾತಿಗಳ ಮಧ್ಯಸ್ಥಗಾರರು, ಸಂಘಟನೆಗಳೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲಾಗುತ್ತಿದೆ. ಅವರೂ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜನರೂ ಕೂಡ ಯಥೇಚ್ಛವಾಗಿ ಸಲಹೆಗಳನ್ನು ರವಾನಿಸುತ್ತಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡರು.

30 ದಿನ ಕಾಲಾವಕಾಶ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕುರಿತಂತೆ ಕಾನೂನು ಆಯೋಗವು ಜೂನ್ 14ರಿಂದ ಸಾರ್ವಜನಿಕರು ಮತ್ತು ಧಾರ್ಮಿಕ ಸಂಸ್ಥೆಗಳ ಅಭಿಪ್ರಾಯಗಳನ್ನು ಕೋರಿದೆ. ಜನರು, ಸಂಘ-ಸಂಸ್ಥೆಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಲು 30 ದಿನಗಳ ಕಾಲಾವಕಾಶವನ್ನೂ ನೀಡಿದೆ.

ಯುಸಿಸಿ ಬಗ್ಗೆ ಮೋದಿ ಹೇಳಿದ್ದೇನು?: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಪ್ರಧಾನಿ ಮೋದಿ, ಒಂದೇ ದೇಶದಲ್ಲಿ ಎರಡು ಕಾನೂನುಗಳು ಕಾರ್ಯನಿರ್ವಹಿಸುವುದು ತರವಲ್ಲ. ದೇಶವೆಂಬುದು ಒಂದು ಕುಟುಂಬ. ಅದರಲ್ಲಿ ಒಬ್ಬರಿಗೆ ಒಂದು ಕಾನೂನು, ಉಳಿವರಿಗೆ ಇನ್ನೊಂದು ಕಾನೂನು ಅನ್ವಯಿಸಲು ಸಾಧ್ಯವಿಲ್ಲ. ವಿಪಕ್ಷಗಳು ಮುಸ್ಲಿಮರನ್ನು ಬೇಕಂತಲೇ ಎತ್ತಿಕಟ್ಟುತ್ತಿವೆ. ಎರಡೆರಡು ಕಾನೂನುಗಳನ್ನು ಇಟ್ಟುಕೊಂಡು ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿ ಖಂಡಿತ ಎಂಬ ಸುಳಿವು ನೀಡಿದ್ದರು.

ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಿಂದ 3 ಗಂಟೆ ಸಭೆ: ಭೋಪಾಲ್​ನಲ್ಲಿ ಮೋದಿ ಈ ಹೇಳಿಕೆ ನೀಡಿದ ಬೆನ್ನಲ್ಲೇ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಂಗಳವಾರ ತಡರಾತ್ರಿ ತುರ್ತು ಸಭೆ ನಡೆಸಿದೆ. ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕಾನೂನಿಗೆ ಸಹಮತ ಸೂಚಿಸಬೇಕೆ, ವಿರೋಧಿಸಬೇಕೆ ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಕೊನೆಯಲ್ಲಿ ಕಾನೂನನ್ನು ವಿರೋಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಏನಿದು ಯುಸಿಸಿ?: ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ದೇಶದ ಎಲ್ಲ ಜನರಿಗೆ ಅನ್ವಯಿಸುವ ಕಾನೂನಾಗಿದೆ. ಪ್ರಸ್ತುತ ದೇಶದಲ್ಲಿ ವಿವಿಧ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಚಾರಗಳಲ್ಲಿ ತಮ್ಮದೇ ಆದ ಪ್ರತ್ಯೇಕ ವೈಯಕ್ತಿಕ ಕಾನೂನು ಹೊಂದಿವೆ. ಇವು ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಿಲ್ಲ. ಹೀಗಾಗಿ ಇದನ್ನು ತೊಡೆದು ಹಾಕಿ ದೇಶದಲ್ಲಿ ಎಲ್ಲ ಜಾತಿ, ಧರ್ಮದವರನ್ನು ಒಂದೇ ಕಾನೂನಿನಡಿ ತರುವ ಪ್ರಯತ್ನವಾಗಿದೆ.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಧಾನಿ ಮೋದಿ ಮಾತು; ತಡರಾತ್ರಿ ಸಭೆ ನಡೆಸಿದ ಮುಸ್ಲಿಂ ಕಾನೂನು ಮಂಡಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.