ETV Bharat / bharat

Uniform Civil Code: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಪ್ರಧಾನಿ ಮೋದಿ ಮಾತು; ತಡರಾತ್ರಿ ಸಭೆ ನಡೆಸಿದ ಮುಸ್ಲಿಂ ಕಾನೂನು ಮಂಡಳಿ

author img

By

Published : Jun 28, 2023, 3:30 PM IST

ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಮಾತುಗಳ ಬಲವಾಗಿ ಕೇಳಿಬರುತ್ತಿವೆ. ಪ್ರಧಾನಿ ಮೋದಿ ಅವರು ಕೂಡ ನಿನ್ನೆ ಇದನ್ನು ಸಮರ್ಥಿಸುವ ಮಾತನ್ನಾಡಿದ್ದಾರೆ. ಇತ್ತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಡರಾತ್ರಿ ಸಭೆ ನಡೆಸಿದೆ.

ಏಕರೂಪ ನಾಗರಿಕ ಸಂಹಿತೆ
ಏಕರೂಪ ನಾಗರಿಕ ಸಂಹಿತೆ

ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಲವಾಗಿ ಸಮರ್ಥಿಸಿಕೊಂಡ ಕೆಲವೇ ಗಂಟೆಗಳಲ್ಲೇ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ನಿನ್ನೆ(ಮಂಗಳವಾರ) ತಡರಾತ್ರಿ ತುರ್ತು ಸಭೆ ನಡೆಸಿದೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾನೂನನ್ನು ವಿರೋಧಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೆ ತರುವ ಉದ್ದೇಶದಿಂದ ಕಾನೂನು ಆಯೋಗ ಈಗಾಗಲೇ ಸಲಹೆಗಳನ್ನು ಕೋರಿದೆ. ಮಂಗಳವಾರ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಯುಸಿಸಿ ಜಾರಿ ಬಗ್ಗೆ ಸುಳಿವು ನೀಡಿದ್ದರು. ಇತ್ತ ಎಐಎಂಪಿಎಲ್‌ಬಿ ರಾತ್ರಿ ಈ ಕುರಿತು ಸಭೆ ನಡೆಸಿದ್ದು ಭಾರಿ ಕುತೂಹಲ ಕೆರಳಿಸಿದೆ.

ಯುಸಿಸಿ ಬಗ್ಗೆ ಮೋದಿ ಹೇಳಿದ್ದೇನು?: ಭೋಪಾಲ್‌ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದೇ ದೇಶದಲ್ಲಿ ಎರಡು ಕಾನೂನುಗಳು ಕಾರ್ಯನಿರ್ವಹಿಸುವುದಿಲ್ಲ. ಸಂವಿಧಾನವು ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದೆ. ಸುಪ್ರೀಂ ಕೋರ್ಟ್‌ನ ತೀರ್ಪುಗಳು ಕೂಡ ಏಕರೂಪದ ಕಾನೂನಿನ ಅಗತ್ಯತೆಯನ್ನು ಸಾರಿವೆ. ಬಿಜೆಪಿ ಮತಬ್ಯಾಂಕ್​ಗಾಗಿ ತುಷ್ಟೀಕರಣ ರಾಜಕಾರಣ ಮಾಡುವುದಿಲ್ಲ. ಮತಬ್ಯಾಂಕ್​ಗಾಗಿ ವಿಪಕ್ಷಗಳಿಂದ ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿದೆ. ಬಿಜೆಪಿ ತುಷ್ಟೀಕರಣದ ಹಾದಿಯನ್ನು ಅನುಸರಿಸುವುದಿಲ್ಲ. ಓಲೈಕೆ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು.

ದೇಶವೆಂಬುದು ಒಂದು ಕುಟುಂಬ. ಅದರಲ್ಲಿ ಒಬ್ಬರಿಗೆ ಒಂದು ಕಾನೂನು, ಉಳಿವರಿಗೆ ಇನ್ನೊಂದು ಕಾನೂನು ಅನ್ವಯಿಸಲು ಸಾಧ್ಯವಿಲ್ಲ. ವಿಪಕ್ಷಗಳು ಮುಸ್ಲಿಮರನ್ನು ಬೇಕಂತಲೇ ಎತ್ತಿಕಟ್ಟುತ್ತಿವೆ. ಎರಡೆರಡು ಕಾನೂನುಗಳನ್ನು ಇಟ್ಟುಕೊಂಡು ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಏಕರೂಪ ನಾಗರಿಕ ಸಂಹಿತೆ ಜಾರಿ ಖಂಡಿತ ಎಂಬ ಸುಳಿವು ನೀಡಿದ್ದರು.

ಮೂರು ಗಂಟೆ ಸಭೆ: ಭೋಪಾಲ್​ನಲ್ಲಿ ಮೋದಿ ಈ ಹೇಳಿಕೆ ನೀಡಿದ ಬೆನ್ನಲ್ಲೇ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತುರ್ತು ಸಭೆ ನಡೆದಿದೆ. ನಿನ್ನೆ ತಡರಾತ್ರಿ ಮೂರು ಗಂಟೆಗಳ ಕಾಲ ಕಾನೂನಿಗೆ ಸಹಮತ ಸೂಚಿಸಬೇಕೆ, ವಿರೋಧಿಸಬೇಕೆ ಎಂಬ ಬಗ್ಗೆ ಚರ್ಚೆ ನಡೆಸಲಾಗಿದೆ. ಕೊನೆಯಲ್ಲಿ ಕಾನೂನನ್ನು ವಿರೋಧಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಏನಿದು ಯುಸಿಸಿ?: ಏಕರೂಪ ನಾಗರಿಕ ಸಂಹಿತೆಯು (ಯುಸಿಸಿ) ದೇಶದ ಎಲ್ಲ ಜನರಿಗೆ ಅನ್ವಯಿಸುವ ಕಾನೂನಾಗಿದೆ. ಪ್ರಸ್ತುತ ದೇಶದಲ್ಲಿ ವಿವಿಧ ಧರ್ಮಗಳು ವಿವಾಹ, ವಿಚ್ಛೇದನ, ಉತ್ತರದಾಯಿತ್ವ, ಆಸ್ತಿ ಹಕ್ಕು ಮೊದಲಾದ ವಿಚಾರಗಳಲ್ಲಿ ತಮ್ಮದೇ ಆದ ಪ್ರತ್ಯೇಕ ವೈಯಕ್ತಿಕ ಕಾನೂನು ಹೊಂದಿವೆ. ಇವು ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಿಲ್ಲ. ಹೀಗಾಗಿ ಇದನ್ನು ತೊಡೆದು ಹಾಕಿ ದೇಶದಲ್ಲಿ ಎಲ್ಲ ಜಾತಿ, ಧರ್ಮದವರನ್ನು ಒಂದೇ ಕಾನೂನಿನಡಿ ತರುವ ಪ್ರಯತ್ನವಾಗಿದೆ.

ಕಳೆದ ವರ್ಷ, ಏಕರೂಪ ನಾಗರಿಕ ಸಂಹಿತೆ ರೂಪಿಸಲು ಕಾನೂನು ಸಮಿತಿಯನ್ನು ರಚಿಸಲು ಪ್ರಸ್ತಾಪಿಸುವ ಖಾಸಗಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಇದನ್ನು ವಿರೋಧ ಪಕ್ಷಗಳು ಬಲವಾಗಿ ತಿರಸ್ಕರಿಸಿದ್ದವು. ಮೇಲ್ಮನೆಯಲ್ಲೂ ಇದರ ಪ್ರಯತ್ನಗಳನ್ನು ವಿಪಕ್ಷಗಳು ವಿಫಲಗೊಳಿಸಿದ್ದವು.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಮಾಲೋಚನೆ ಪ್ರಕ್ರಿಯೆ ಪ್ರಾರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.