ಕರ್ನಾಟಕ

karnataka

ಲೋಕ ಸಮರ: ಬಿಜೆಪಿ ಅಭ್ಯರ್ಥಿಗಳಿಗೆ ಆರ್​. ಅಶೋಕ್​ ಅಭಿನಂದನೆ; ಪ್ರಧಾನಿಗೆ ಧನ್ಯವಾದ ಅರ್ಪಿಸಿದ ತೇಜಸ್ವಿ ಸೂರ್ಯ

By ETV Bharat Karnataka Team

Published : Mar 14, 2024, 9:59 AM IST

Lok Sabha election: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳಿಗೆ ಆರ್. ಅಶೋಕ್ ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ, ತೇಜಸ್ವಿ ಸೂರ್ಯ ಅವರು ಪ್ರಧಾನಿ ಮೋದಿ ಸೇರಿದಂತೆ ಸರ್ವರಿಗೂ ಧನ್ಯವಾದ ತಿಳಿಸಿದ್ದಾರೆ.

R Ashok congratulates BJP candidates
ಲೋಕಸಮರ: ಬಿಜೆಪಿ ಅಭ್ಯರ್ಥಿಗಳಿಗೆ ಆರ್​.ಅಶೋಕ್​ ಅಭಿನಂದನೆ; ಪ್ರಧಾನಿಗೆ ಧನ್ಯವಾದ ಅರ್ಪಿಸಿದ ತೇಜಸ್ವಿ ಸೂರ್ಯ

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್​​ನಿಂದ ಬಿಡುಗಡೆಯಾಗಿರುವ ಎರಡನೇ ಪಟ್ಟಿಯಲ್ಲಿರುವ ರಾಜ್ಯದ ನಾಯಕರಿಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅಭಿನಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ವಿಕಸಿತ ಭಾರತವಾಗಿ ಹೊರಹೊಮ್ಮುವತ್ತ ನಮ್ಮ ದೇಶ ದಿಟ್ಟ ಹೆಜ್ಜೆಗಳನ್ನು ಇಡುತ್ತಿರುವ ಈ ಅಮೃತ ಕಾಲದಲ್ಲಿ ಸಂಸತ್ತಿನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವುದು ಅತ್ಯಂತ ದೊಡ್ಡ ಸೌಭಾಗ್ಯ. ಶತಕೋಟಿ ಭಾರತೀಯರ ಆಶಯದಂತೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿ ಮಾಡಲು ಕರ್ನಾಟಕದಿಂದ ದೊಡ್ಡ ಮಟ್ಟದಲ್ಲಿ ಶಕ್ತಿ ತುಂಬೋಣ. ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲೂ ಕಮಲ ಅರಳಿಸಲು ಶ್ರಮಿಸೋಣ ಎಂದು ಆರ್​. ಅಶೋಕ್ ಟ್ವೀಟ್ ಮಾಡಿದ್ದಾರೆ.

ಹಿಂದಿನ ಅನುಭವದ ಆಧಾರದಲ್ಲಿ ಅಭಿವೃದ್ಧಿಗೆ ಶ್ರಮ: ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಹಿಂದಿನ ಅನುಭವದ ಆಧಾರದಲ್ಲಿ ಮುಂದಿನ ವರ್ಷಗಳಲ್ಲಿ ಬೆಂಗಳೂರು ಮತ್ತು ರಾಜ್ಯದ ಪ್ರಗತಿಗೆ ನಾನು ಶ್ರಮಿಸುತ್ತೇನೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ನನ್ನ ಮೇಲೆ ನಂಬಿಕೆ ಇಟ್ಟು ಮತ್ತೊಂದು ಬಾರಿ ಸ್ಪರ್ಧಿಸಲು ಅವಕಾಶ ನೀಡಿರುವ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಹೃದಯಾಂತರಾಳದ ನಮನಗಳು. ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಮಾರ್ಗದರ್ಶನ ಮತ್ತು ಸಹಕಾರವನ್ನು ಈ ಸಂದರ್ಭದಲ್ಲಿ ನೆನೆಯಲು ಇಚ್ಛಿಸುತ್ತೇನೆ. ಹಿರಿಯರಾದ ಬಿ.ಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಂಘಟನಾ ಕಾರ್ಯದರ್ಶಿ ರಾಜೀವ್ ಅವರ ಪ್ರೋತ್ಸಾಹ ಕೂಡ ನನ್ನ ಪಾಲಿಗೆ ಶ್ರೀರಕ್ಷೆಯಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಬಿಜೆಪಿ ಪಟ್ಟಿ ವಿಶೇಷ: ಮಾಜಿ ಸಿಎಂಗೆ ಕೋಕ್! ಮತ್ತೊಬ್ಬ ಮಾಜಿ ಸಿಎಂಗೆ ಎಂಟ್ರಿ!!, ಇನ್ನೊಬ್ಬ ಮಾಜಿ ಸಿಎಂಗೆ ಸಸ್ಪೆನ್ಸ್!!!

5 ವರ್ಷಗಳ ಹಿಂದೆ ಪಕ್ಷದ ನಾಯಕತ್ವವು ದೇಶದ ಅತ್ಯಂತ ಪ್ರತಿಷ್ಠಿತ ಕ್ಷೇತ್ರ ಬೆಂಗಳೂರು ದಕ್ಷಿಣಕ್ಕೆ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿದ ನಂತರ ತಮ್ಮ ಮನೆಮಗನಂತೆ ನನ್ನನ್ನು ಆಶೀರ್ವದಿಸಿದ ಸಮಸ್ತ ಬೆಂಗಳೂರು ದಕ್ಷಿಣದ ನಾಗರಿಕರಿಗೆ ನಾನು ಎಂದೆಂದಿಗೂ ಋಣಿ. 17ನೇ ಲೋಕಸಭೆಯಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಸಂಸದನಾಗಿ ಆಯ್ಕೆಗೊಳಿಸಿ ಆಶೀರ್ವದಿಸಿದ ನನ್ನ ಕ್ಷೇತ್ರದ ಮತದಾರರ ಶ್ರೇಯೋಭಿವೃದ್ಧಿಗೆ ನಾನು ಶ್ರಮಿಸಿದ್ದೇನೆ. ನನ್ನಂಥ ಯುವಕನಿಗೆ ಕಳೆದ 5 ವರ್ಷಗಳು ಅತ್ಯಂತ ಮಹತ್ವದ್ದಾಗಿದ್ದು, ಈ ಸಂದರ್ಭದಲ್ಲಿ ಅನೇಕ ಹೊಸ ಕಲಿಕೆಗಳಿಗೆ ಒಡ್ಡಿಕೊಂಡಿದ್ದೇನೆ. ಅವಿರತ ಶ್ರಮ, ಅತ್ಯುತ್ತಮ ತಂಡದೊಂದಿಗೆ ಕಳೆದ 5 ವರ್ಷಗಳಲ್ಲಿ ಕ್ಷೇತ್ರದ ನಾಗರಿಕರು ನನ್ನನ್ನು ಅವರ ಕುಟುಂಬದ ಸದಸ್ಯರಂತೆ ಪರಿಗಣಿಸಿದ್ದು ಹೆಮ್ಮೆಯ ಸಂಗತಿ ಎಂದಿದ್ದಾರೆ.

ಇದನ್ನೂ ಓದಿ:ಒಂಬತ್ತು ಸಂಸದರಿಗೆ ಕೈತಪ್ಪಿದ ಟಿಕೆಟ್: ಯಾರು ಔಟ್? ಯಾರು ಇನ್, ಇಲ್ಲಿದೆ ಫುಲ್ ಡಿಟೇಲ್ಸ್

ಇದೇ ಸಂದರ್ಭದಲ್ಲಿ ನನ್ನೊಂದಿಗೆ ಕಾರ್ಯನಿರ್ವಹಿಸಿದ ಬೆಂಗಳೂರು ದಕ್ಷಿಣದ ನನ್ನ ಬಿಜೆಪಿ ಕಾರ್ಯಕರ್ತ ಸಹೋದರರ ಸಹಕಾರ ಎಂದೆಂದಿಗೂ ಮರೆಯಲಾರೆ. ನನ್ನ ವಿರೋಧಿಗಳ ಮಾತಿಗೆ ಕಿವಿಗೊಡದೆ ಗಟ್ಟಿಯಾಗಿ ನನ್ನೊಂದಿಗೆ ನಿಂತ ಸಾಮಾಜಿಕ ಜಾಲತಾಣ ಮಾಧ್ಯಮದ ಹಿತೈಷಿಗಳು ಹಾಗೂ ನನ್ನ ಕಾರ್ಯನಿರ್ವಹಣೆಯಲ್ಲಿ ಜೊತೆಗೂಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಭಾರತಕ್ಕೆ ನರೇಂದ್ರ ಮೋದಿ ಅವರಂತಹ ದೂರದರ್ಶಿ, ಸದೃಢ ನಾಯಕನ ಅವಶ್ಯಕತೆ ಇದೆ. ಅಮೃತಕಾಲಕ್ಕೆ ಅಡಿ ಇಡುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಅಗತ್ಯತೆ ಇದೆ. ವಂದೇ ಮಾತರಂ! ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details