ETV Bharat / state

ಬಿಜೆಪಿ ಪಟ್ಟಿ ವಿಶೇಷ: ಮಾಜಿ ಸಿಎಂಗೆ ಕೊಕ್! ಮತ್ತೊಬ್ಬ ಮಾಜಿ ಸಿಎಂಗೆ ಎಂಟ್ರಿ!!, ಇನ್ನೊಬ್ಬ ಮಾಜಿ ಸಿಎಂಗೆ ಸಸ್ಪೆನ್ಸ್!!!

author img

By ETV Bharat Karnataka Team

Published : Mar 13, 2024, 11:08 PM IST

Updated : Mar 14, 2024, 3:45 PM IST

ತೀವ್ರ ಕುತೂಹಲ ಮೂಡಿಸಿದ್ದ ಲೋಕಸಭಾ ಚುನಾವಣೆಗೆ ಬಿಜೆಪಿಯು 2ನೇ ಪಟ್ಟಿ ಪ್ರಕಟಿಸಿದ್ದು ಹಲವು ವಿಶೇಷತೆಗಳಿಂದ ಕೂಡಿದೆ.

Lok Sabha Elections 2024
Lok Sabha Elections 2024

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿ ಹಲವಾರು ವಿಶೇಷತೆಗಳಿಂದ ಕೂಡಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಮೂವರು ಮಾಜಿ ಸಿಎಂಗಳಲ್ಲಿ ಒಬ್ಬರಿಗೆ ಟಿಕೆಟ್ ಮಿಸ್ ಆಗಿದೆ. ಮತ್ತೊಬ್ಬರಿಗೆ ಟಿಕೆಟ್ ಸಿಕ್ಕಿದ್ದರೆ, ಇನ್ನೊಬ್ಬ ಮಾಜಿ ಸಿಎಂಗೆ ಟಿಕೆಟ್ ಘೋಷಣೆ ಮಾಡದೇ ಬಿಜೆಪಿ ಸಸ್ಪೆನ್ಸ್​ನಲ್ಲಿ ಇಟ್ಟಿದೆ.

ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ
ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾಗಿದ್ದ ಡಿ ವಿ ಸದಾನಂದಗೌಡ ಬೆಂಗಳೂರು ಉತ್ತರ ಕ್ಷೇತ್ರದಿಂದ ಪುನರಾಯ್ಕೆ ಬಯಸಿ ಟಿಕೆಟ್ ಬಯಸಿದ್ದರು. ಕ್ಷೇತ್ರದ ತುಂಬ ಸಂಚರಿಸಿ ಮುಖಂಡರ, ಕಾರ್ಯಕರ್ತರ ಸಭೆ ನಡೆಸಿ ಚುನಾವಣೆ ಸ್ಪರ್ಧೆಗೆ ಸಿದ್ಧತೆ ಸಹ ನಡೆಸಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ನೇಮಕಗೊಂಡ ನಂತರ ಹಾಗು ಆರ್ ಅಶೋಕ್ ಅವರು ಪ್ರತಿಪಕ್ಷ ನಾಯಕರಾಗಿ ಆಯ್ಕೆಯಾದ ಬಳಿಕ ಟಿಕೆಟ್ ಸಿಗುವ ವಿಶ್ವಾಸ ಹೊಂದಿದ್ದರು. ಆದರೆ, ಅಂತಿಮವಾಗಿ ಪಕ್ಷದ ಹೈಕಮಾಂಡ್ ಹಾಲಿ ಸಂಸದರಾದ ಮಾಜಿ ಸಿಎಂ ಸದಾನಂದಗೌಡರಿಗೆ ಸ್ಪರ್ಧೆ ಮಾಡಲು ಟಿಕೆಟ್ ನೀಡಿಲ್ಲ. ಅವರ ಕ್ಷೇತ್ರದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ.

ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕನಸು ಕಂಡಿದ್ದರು. ಹಾವೇರಿ ಕ್ಷೇತ್ರದ ಹಾಲಿ ಸಂಸದರಾಗಿರುವ ಶಿವಕುಮಾರ ಉದಾಸಿ ಅವರು ಈ ಬಾರಿ ಲೋಕಸಭೆ ಚುನಾವಣೆಗೆ ತಾವು ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದರು. ಈ ನಡುವೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಹಾಗೂ ಪ್ರತಿಪಕ್ಷ ಸ್ಥಾನ ತಮಗೆ ಸಿಗಬಹುದೆನ್ನುವ ನಿರೀಕ್ಷೆ ಇಟ್ಟುಕೊಂಡಿದ್ದರು. ಬಿಜೆಪಿ ಅಧ್ಯಕ್ಷರಾಗಿ ವಿಜಯೇಂದ್ರ ಮತ್ತು ವಿಧಾನಸಭೆ ವಿರೋಧ ಪಕ್ಷ ನಾಯಕರಾಗಿ ಆರ್ ಅಶೋಕ್ ನೇಮಕಗೊಂಡ ನಂತರ ರಾಜ್ಯ ರಾಜಕಾರಣದಲ್ಲಿ ತಮಗಿನ್ನೂ ಅವಕಾಶವಿಲ್ಲ ಎನ್ನುವುದು ಬೊಮ್ಮಾಯಿಯವರಿಗೆ ಖಚಿತವಾಯಿತು ಎಂದು ಹೇಳಲಾಗಿದೆ.

ಮಾಜಿ ಸಿಎಂ ಬೊಮ್ಮಾಯಿ
ಮಾಜಿ ಸಿಎಂ ಬೊಮ್ಮಾಯಿ

ಕೇಂದ್ರದಲ್ಲಿ ಮತ್ತೆ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರವೇ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದೆಯೆನ್ನುವ ನಿಲುವು ಹೊಂದಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಾವು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸಿದರೆ ಕೇಂದ್ರ ಸಚಿವರಾಗುವ ಅವಕಾಶ ದೊರೆಯುವ ಬಗ್ಗೆ ಲೆಕ್ಕಾಚಾರ ಹಾಕಿದ್ದಾರೆನ್ನಲಾಗಿದೆ. ಹಾಲಿ ಸಂಸದ ಶಿವಕುಮಾರ ಉದಾಸಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರ ಲಾಭ ಪಡೆದುಕೊಂಡ ಬೊಮ್ಮಾಯಿ ಅವರು ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಹಾವೇರಿ ಕ್ಷೇತ್ರದಿಂದ ಲೋಕಸಭೆಗೆ ಕಣಕ್ಕಿಳಿಯುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಪಕ್ಷವು ಸಹ ಬಸವರಾಜ ಬೊಮ್ಮಾಯಿ ಸೂಕ್ತ ಅಭ್ಯರ್ಥಿಯಾಗಬಲ್ಲರು ಎನ್ನುವ ಉದ್ದೇಶದಿಂದ ಅವರಿಗೆ ಟಿಕೆಟ್​ ಅನ್ನು ಪ್ರಕಟಿಸಿದೆ.

ಬಿಎಸ್​ವೈ, ಜೆಪಿ ನಡ್ಡಾ ಜೊತೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್
ಬಿಎಸ್​ವೈ, ಜೆಪಿ ನಡ್ಡಾ ಜೊತೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಮತ್ತೆ ಬಿಜೆಪಿಗೆ ಮರಳಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸಹ ಲೋಕಸಭೆ ಟಿಕೆಟ್ ಬಯಸಿದ್ದಾರೆ. ಬಿಜೆಪಿಗೆ ಮರಳುವ ಸಂದರ್ಭದಲ್ಲಿ ಅವರು ಲೋಕಸಭೆ ಚುನಾವಣೆಯಲ್ಲಿ ಧಾರವಾಡ ಅಥವಾ ಹಾವೇರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಆಸಕ್ತಿ ಹೊಂದಿದ್ದರು. ಬಿಜೆಪಿ ಪ್ರಕಟಿಸಿದ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಅವರು ಕಣ್ಣಿಟ್ಟಿದ್ದ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಲಾಗಿದೆ. ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಟಿಕೆಟ್ ಪಡೆದಿದ್ದರೆ, ಹಾವೇರಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರಿಗೆ ಎಲ್ಲಿ ಟಿಕೆಟ್ ನೀಡಬೇಕು ಎನ್ನುವ ಬಗ್ಗೆ ಕುತೂಹಲವನ್ನು ಬಿಜೆಪಿ ಹಾಗೆ ಉಳಿಸಿಕೊಂಡಿದೆ.

ಆರ್​ ಅಶೋಕ್​, ಮಾಜಿ ಸಿಎಂಗಳಾದ ಜಗದೀಶ್​ ಶೆಟ್ಟರ್ ಮತ್ತು ಡಿ ವಿ ಸದಾನಂದಗೌಡ
ಆರ್​ ಅಶೋಕ್​, ಮಾಜಿ ಸಿಎಂಗಳಾದ ಜಗದೀಶ್​ ಶೆಟ್ಟರ್ ಮತ್ತು ಡಿ ವಿ ಸದಾನಂದಗೌಡ

ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿಯವರ ನಿಧನದ ಬಳಿಕ ಬೆಳಗಾವಿ ಕ್ಷೇತ್ರದಿಂದ ಜಗದೀಶ ಶೆಟ್ಟರ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಹೈಕಮಾಂಡ್ ಮೊದಲಿನಿಂದಲೂ ಯೋಚಿಸುತ್ತಿತ್ತು. ಉಪ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಗೆದ್ದು ಸಂಸದರಾಗಿರುವ ಸುರೇಶ್ ಅಂಗಡಿಯವರ ಪತ್ನಿ ಮಂಗಳ ಅಂಗಡಿ ಬದಲಿಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದ್ದು ತನ್ನ ನಿರ್ಧಾರವನ್ನು ಸಸ್ಪೆನ್ಸ್​​ನಲ್ಲಿ ಇಟ್ಟಿದೆ.

ಇದನ್ನೂ ಓದಿ: ಒಂಬತ್ತು ಸಂಸದರಿಗೆ ಕೈತಪ್ಪಿದ ಟಿಕೆಟ್: ಯಾರು ಔಟ್? ಯಾರು ಇನ್, ಇಲ್ಲಿದೆ ಫುಲ್ ಡಿಟೇಲ್ಸ್

Last Updated :Mar 14, 2024, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.