ಕರ್ನಾಟಕ

karnataka

ದೇಶದಲ್ಲಿ ಬಡತನ ನಿರುದ್ಯೋಗ ಮೊದಲಿಗಿಂತ ಹೆಚ್ಚಾಗಿದೆ: ಡಾ ಅನ್ಸುಲ್ ಅವಿಜಿತ್

By ETV Bharat Karnataka Team

Published : Mar 2, 2024, 4:45 PM IST

ಕೇಂದ್ರದ ಖಜಾನೆಯಲ್ಲಿರುವ ಬಡಜನರ ಹಣ ನೈಜ ಫಲಾನುಭವಿಗಳನ್ನು ತಲುಪುತ್ತಿಲ್ಲ. ಅದು ಉದ್ಯಮಿಗಳ ಪಾಲಾಗುತ್ತಿದೆ.ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳ ಮೂಲಕ ಬಿಜೆಪಿ ಮತಯಾಚಿಸುತ್ತಿದೆ. ಆದರೆ ಬಿಜೆಪಿ ನೈಜ ನಿರುದ್ಯೋಗ, ಬಡತನ, ಬೆಲೆಯೇರಿಕೆ ವಿಷಯಗಳನ್ನು ಮರೆಮಾಚಿದೆ ಎಂದು ಎಐಸಿಸಿ ವಕ್ತಾರ ಡಾ ಅನ್ಸುಲ್ ಅವಿಜಿತ್ ಆರೋಪಿಸಿದರು.

AICC spokesperson Dr Ansul Avijit addressed the press conference.
ಎಐಸಿಸಿ ವಕ್ತಾರ ಡಾ ಅನ್ಸುಲ್ ಅವಿಜಿತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೈಸೂರು: ನೀತಿ ಆಯೋಗ ಬಡತನ ಶೇ.5ಕ್ಕಿಂತ ಕೆಳಗೆ ಇಳಿದಿದೆ ಎಂದು ಹೇಳಿರುವುದು ಸತ್ಯವಲ್ಲ. ವಾಸ್ತವವಾಗಿ ಬಡತನ ಹಾಗೂ ನಿರುದ್ಯೋಗ ಮೊದಲಿಗಿಂತ ಹೆಚ್ಚಾಗಿದೆ ಎಂದು ಎಐಸಿಸಿ ವಕ್ತಾರ ಡಾ. ಅನ್ಸುಲ್ ಅವಿಜಿತ್ ಆರೋಪಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಭಾವನಾತ್ಮಕ ವಿಚಾರಗಳ ಮೂಲಕ ಬಿಜೆಪಿ ಮತಯಾಚಿಸುತ್ತಿದೆ. ಆದರೆ ನೈಜ ನಿರುದ್ಯೋಗ, ಬಡತನ, ಬೆಲೆಯೇರಿಕೆ ವಿಷಯಗಳನ್ನು ಮರೆಮಾಚಿದೆ ಎಂದರು.

ಈ ಬಾರಿಯ ಸಾರ್ವತ್ರಿಕ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸಾಮಾಜಿಕ ನ್ಯಾಯದ ವಿಷಯ ಎತ್ತಿಕೊಂಡು ಬಂದಿದ್ದರೆ, ಬಿಜೆಪಿ ಎಂದಿನಂತೆ ರಾಮಮಂದಿರದಂತಹ ಭಾವನಾತ್ಮಕ ವಿಷಯ ಇಟ್ಟುಕೊಂಡು ನಿರುದ್ಯೋಗ, ಬಡತನ, ಬೆಲೆಯೇರಿಕೆ ಮೊದಲಾದ ನೈಜ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯುತ್ತಿದೆ ಎಂದು ಅವರು ದೂರಿದರು.

ಕೇಂದ್ರದ ಹಣ ಉದ್ಯಮಿಗಳ ಪಾಲು: ಕೇಂದ್ರದ ಖಜಾನೆಯಲ್ಲಿರುವ ಬಡಜನರ ಹಣ ನೈಜ ಫಲಾನುಭವಿಗಳನ್ನು ತಲುಪುತ್ತಿಲ್ಲ. ಅದು ಉದ್ಯಮಿಗಳ ಪಾಲಾಗುತ್ತಿದೆ. ಹೀಗಾಗಿ ಅದು ಅರ್ಹರನ್ನು ತಲುಪಬೇಕೆಂದು ಕಾಂಗ್ರೆಸ್ ಹೋರಾಡುತ್ತಿದೆ. ಈ ಬಾರಿಯ ಭಾರತ್ ಜೋಡೋ ನ್ಯಾಯ ಯಾತ್ರೆ ಸಹಾ ಇದೇ ಉದ್ದೇಶ ಹೊಂದಿದೆ. ಇದಲ್ಲದೇ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿಯೂ ಇದೇ ಕಾರಣಕ್ಕಾಗಿ ಹೋರಾಟ ಮಾಡಿದರು ಎಂದರು.

ಡಾ. ಸ್ವಾಮಿನಾಥನ್ ವರದಿ ಜಾರಿಗೊಳಿಸುವದಾಗಿ ಬಿಜೆಪಿ ನೀಡಿದ್ದ ಭರವಸೆ ಹುಸಿಯಾಗಿದೆ. ಹೀಗಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವರದಿ ಜಾರಿಗೊಳಿಸುತ್ತದೆ ಎಂದು ಡಾ. ಅನ್ಸುಲ್​ ಹೇಳಿದರು.

ಚುನಾವಣೆಯಗಳಲ್ಲಿ ಇವಿಎಂ ಬಳಕೆ ಸಂಶಯಾಸ್ಪದವಾಗಿರುವ ಕಾರಣ ಕಾಂಗ್ರೆಸ್ ಅದನ್ನು ವಿರೋಧಿಸುತ್ತದೆ. ಇದೇ ವೇಳೆ ಜಾತಿ ಗಣತಿ ವರದಿ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದ್ದರೂ ಸಾಮಾಜಿಕ ನ್ಯಾಯದ ಕಾರಣ ಪಕ್ಷದ ವರಿಷ್ಠರು ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ, ಐದು ಗ್ಯಾರೆಂಟಿಗಳನ್ನು ಜಾರಿಗೊಳಿಸಿದೆ. ಇದರಿಂದಾಗಿ ಬೆಲೆಯೇರಿಕೆ ಬಿಸಿ ಜನತೆಗೆ ತಟ್ಟಿದಂತಾಗಿದೆ. ಇನ್ನು ಯುವನಿಧಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ. ಆದರೆ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ನಮ್ಮ ಗ್ಯಾರಂಟಿ ಪದ ಬಳಸುತ್ತಿದ್ದಾರೆ ಎಂದು ಅನ್ಸುಲ್​ ಅವಿಜಿತ್ ಲೇವಡಿ ಮಾಡಿದರು.

40 ಪರ್ಸೆಂಟ್ ಸರಕಾರ:ಕಳೆದ ವಿಧಾನಸಭಾ ಚುನಾವಣೆ ವೇಳೆ 40 ಪರ್ಸೆಂಟ್ ಸರಕಾರದ ವಿರುದ್ಧ ಕಾಂಗ್ರೆಸ್ ಮತ ಕೇಳಿತು. ಹೀಗಾಗಿ ಜನತೆ ಆಗಿನ ಬಿಜೆಪಿ ರಾಜ್ಯ ಸರಕಾರವನ್ನು ಕಿತ್ತೊಗೆದರು. ಈಗ ಲೋಕಸಭಾ ಚುನಾವಣೆ ಬಂದಿದ್ದು, ಜನತೆ ಸಾಮಾಜಿಕ ನ್ಯಾಯದ ಪರವಾಗಿ ಇರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ. ಡಿ. ತಿಮ್ಮಯ್ಯ, ಪಕ್ಷದ ಗ್ರಾಮಾಂತರ ಅಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಮರಯ್ಯ, ಬಸವಣ್ಣ, ಎಂ. ಶಿವಪ್ರಸಾದ್, ಮತ್ತಿತರರು ಇದ್ದರು.

ಇದನ್ನೂಓದಿ:ಮಾ.4 ರಂದು ಬೆಂಗಳೂರು ಕೃಷಿ ವಿವಿಯ 58ನೇ ಘಟಿಕೋತ್ಸವ: ಎಂ.ಸಿ. ರಂಗಸ್ವಾಮಿಗೆ ಗೌರವ ಡಾಕ್ಟರೇಟ್

ABOUT THE AUTHOR

...view details