ಕರ್ನಾಟಕ

karnataka

ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ, ಅದಕ್ಕಾಗಿ 1.24 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದೇವೆ: ಸಿಎಂ ಸಿದ್ದರಾಮಯ್ಯ - Lok Sabha Election 2024

By ETV Bharat Karnataka Team

Published : Apr 28, 2024, 10:53 PM IST

ಬೆಳಗಾವಿ ಜಿಲ್ಲೆ ಯರಗಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡಿದರು.

ಯರಗಟ್ಟಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಬೆಂಬಲಿಗರು ಸನ್ಮಾನಿಸಿದರು.
ಯರಗಟ್ಟಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಬೆಂಬಲಿಗರು ಸನ್ಮಾನಿಸಿದರು.

ಬೆಳಗಾವಿ:ಲೋಕಸಭೆ ಚುನಾವಣೆ ಮುಗಿದ ಬಳಿಕ ಗ್ಯಾರಂಟಿಗಳನ್ನು ನಿಲ್ಲಿಸುತ್ತಾರೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಜಿಲ್ಲೆ ಯರಗಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಐದು ಗ್ಯಾರಂಟಿ ಯೋಜನೆಗಳಿಗೆ ಬಜೆಟ್​​ನಲ್ಲಿ 1.24 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದ್ದೇನೆ. ಕಾಂಗ್ರೆಸ್ ಖಜಾನೆ ಖಾಲಿಯಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದರೆ ಖಜಾನೆ ಖಾಲಿ ಆಗಲ್ಲ. ಕೇಂದ್ರದಿಂದ ಬರಬೇಕಿರುವ ನಮ್ಮ ಪಾಲು ಬಂದಿಲ್ಲ. 100 ರೂ. ಕೇಳಿದರೆ 19 ರೂ. ಮಾತ್ರ ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಜಗದೀಶ ಶೆಟ್ಟರ್ ಚಂಚಲ ಮನಸ್ಸಿನವರು:ಜಗದೀಶ ಶೆಟ್ಟರ್ ಚಂಚಲ ಮನಸ್ಸಿನವರು, ಅವರಿಗೆ ಯಾವುದೇ ಸಿದ್ಧಾಂತದ ಬಗ್ಗೆ ಬದ್ಧತೆ ಇಲ್ಲ. ಬಿಜೆಪಿಯಲ್ಲಿ ಸೋಲುತ್ತಾರೆಂದು ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ಆಗ ನಮ್ಮ ಪಕ್ಷಕ್ಕೆ ಬಂದು ನಿಂತು ಕೆಟ್ಟದಾಗಿ ಸೋತರು. ಹುಬ್ಬಳ್ಳಿಯಲ್ಲಿ ಸೋತವರನ್ನು ಬೆಳಗಾವಿಯಲ್ಲಿ ನಿಲ್ಲಿಸಿದರೆ ಗೆಲ್ಲಲು ಸಾಧ್ಯವೇ? ಇಲ್ಲಿ ಸೋಲಿಸಿ ಹುಬ್ಬಳ್ಳಿಗೆ ಕಳಿಸಿಕೊಡಬೇಕು. ಇನ್ನು, ಸುರೇಶ ಅಂಗಡಿ ಅಗಲಿಕೆ ಬಳಿಕ ನಡೆದ ಚುನಾವಣೆಯಲ್ಲಿ ಸತೀಶ್​ ಜಾರಕಿಹೊಳಿ‌ ವಿರುದ್ಧ ಕೆಲವೇ ಮತಗಳ ಅಂತರದಿಂದ ಮಂಗಳಾ ಅಂಗಡಿ ಗೆದ್ದಿದ್ದರು. ಅವರ ಬದಲು ಈಗ ಶೆಟ್ಟರ್ ಅವರಿಗೆ ಟಿಕೆಟ್​ ಕೊಟ್ಟಿದ್ದಾರೆ ಎಂದರು.

ನೂರಕ್ಕೂ ಹೆಚ್ಚು ಹಾಲಿ ಸಂಸದರಿಗೆ ಟಿಕೆಟ್ ಕೊಟ್ಟಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಮಗ ಅಭ್ಯರ್ಥಿ ಅಲ್ಲ. ನಾನೇ ಅಭ್ಯರ್ಥಿ ಎಂದು ತಿಳಿದು ಮತ ನೀಡಿ. ನೀವು ಕೊಡುವ ಪ್ರತಿ ವೋಟ್ ನನಗೆ ಕೊಟ್ಟ ಹಾಗೆ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಸುರೇಶ ಅಂಗಡಿ ಎಂಪಿ, ಮಂತ್ರಿ ಆಗಿದ್ದರು. ಆ ಬಳಿಕ ಮಂಗಳಾ ಅಂಗಡಿ ಸಂಸದರಾಗಿದ್ದರು. 26 ಎಂಪಿಗಳು ರಾಜ್ಯಕ್ಕೆ ಅನ್ಯಾಯ ಆದಾಗ ಧ್ವನಿ ಎತ್ತಲಿಲ್ಲ. ಮೋದಿ ಮುಂದೆ ನಿಂತು ಶೆಟ್ಟರ್ ಮಾತನಾಡುತ್ತಾರೆ. ಮೋದಿ ಕಂಡರೆ ಇವ್ರು ಗಡ ಗಡ ನಡುಗುತ್ತಾರೆ. ಇವರು ಬರೀ ಸುಳ್ಳು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಜರಿದರು.

ಮೋದಿ ಹೇಳಿದ್ದೆಲ್ಲ ಹಸಿ ಸುಳ್ಳು :ಇಂದಿನ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಶಿವಾಜಿ ಮಹಾರಾಜ, ಕಿತ್ತೂರು ರಾಣಿ ಚೆನ್ನಮ್ಮನಿಗೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದಿದ್ದಾರೆ. ಇದು ಹಸಿ ಸುಳ್ಳು. ನಮ್ಮ ಸರ್ಕಾರ ಶಿವಾಜಿ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತದೆ. ಚೆನ್ನಮ್ಮನ ಜಯಂತ್ಯುತ್ಸವ ಮಾಡಿದ್ದು, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು, ಸವದತ್ತಿ ಯಲ್ಲಮ್ಮದೇವಿ ಪ್ರಾಧಿಕಾರ ಮಾಡಿ, ಅನುದಾನ ಘೋಷಿಸಿದ್ದೇವೆ. ಆ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಿದ್ದೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ಡಿಸಿಎಂ ಡಿ.ಕೆ. ಶಿವಕುಮಾರ ಮಾತನಾಡಿ, ಮಗ ಬೇಕಾ, ಬೀಗರು ಬೇಕಾ ಎಂದು ಹೆಬ್ಬಾಳ್ಕರ್ ಕೇಳಿದ್ದಾರೆ. ನಿಮ್ಮ ಹಸ್ತದಲ್ಲಿ ನಿಮ್ಮ ಜವಾಬ್ದಾರಿ ಇದೆ. ಅದನ್ನು ನಿರ್ಧರಿಸಬೇಕು. ಏನು ಕೊಟ್ಟರು, ಬಿಟ್ಟರು ಅವರಿಗೆ ಬಿಟ್ಟಿದ್ದು. ಮಹದಾಯಿ ವಿಚಾರದಲ್ಲಿ ನ್ಯಾಯ ಕೊಡಸಲಿಲ್ಲ. ಜನರ ಅಕೌಂಟ್ ಗೆ ಹಣ ಬರಲಿಲ್ಲ. ಎಂಎಲ್‌ಸಿ ಆಗಿದ್ದರೂ ಅದಕ್ಕೆ ರಾಜೀನಾಮೆ ನೀಡಿ ಬಿಜೆಪಿ‌ ಸೇರಿದ್ದು ಶೆಟ್ಟರ್ ಸಾಧನೆ. ನಿಮ್ಮ ಸಂಸದರಾಗೋಕೆ ಜಗದೀಶ್ ಶೆಟ್ಟರ್ ಅರ್ಹರಲ್ಲ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದೇ ಬೆಳಗಾವಿಯಿಂದ. ರಾಹುಲ್ ಗಾಂಧಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ನಾವು 24 ಸಾವಿರ ಕೊಟ್ಟರೆ, ರಾಹುಲ್ ಗಾಂಧಿ ಒಂದು ಲಕ್ಷ ರೂ. ಕೊಡುವುದಾಗಿ ಹೇಳಿದ್ದಾರೆ. ಮಹಾಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಒಂದು ಲಕ್ಷ ಹಣ ನೀಡುತ್ತೇವೆ. ಭಾಗ್ಯದ ಲಕ್ಷ್ಮಿ ಬಾರಮ್ಮ, ನಮ್ಮಮ್ಮ ನೀ ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಡಿಕೆಶಿ ಹಾಡು ಹಾಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80 ವರ್ಷ ಆಯ್ತು. ಆದರೆ ಬಿಜೆಪಿಯವರು 10 ವರ್ಷದ ಹಿಂದೆ ದೇಶ ಹುಟ್ಟಿದಂತೆ ಮಾತಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಸಚಿವರಾದ ಸತೀಶ್ ಜಾರಕಿಹೊಳಿ, ಭೈರತಿ ಸುರೇಶ, ಶಾಸಕ ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ, ವಿನಯ ಕುಲಕರ್ಣಿ, ಬಾಬಾಸಾಹೇಬ ಪಾಟೀಲ, ವಿಶ್ವಾಸ ವೈದ್ಯ ಸೇರಿ ಹಲವು ಮುಖಂಡರು, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಇದನ್ನೂಓದಿ:ರಂಗೇರಿದ ಚುನಾವಣೆ ಕಣ, ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಶಿವಮೊಗ್ಗದತ್ತ ಹಿರಿಯ ನಾಯಕರ ದಂಡು - SHIVAMOGGA LOK SABHA CONSTITUENCY

ABOUT THE AUTHOR

...view details