ಕರ್ನಾಟಕ

karnataka

ಮೋದಿಯಂತೆ ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ; ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ:ಈಶ್ವರಪ್ಪ - Former DCM KS Eshwarappa

By ETV Bharat Karnataka Team

Published : Mar 21, 2024, 4:07 PM IST

ನಾನು ಚುನಾವಣೆಯಲ್ಲಿ ವಿಜಯೇಂದ್ರ ಹಣ ಖರ್ಚು‌ ಮಾಡಿ ಗೆದ್ದರು ಎಂದು ಹೇಳಿಲ್ಲ. ಚುನಾವಣೆಯಲ್ಲಿ ಹಣ, ಜಾತಿ ಕೆಲಸ ಮಾಡುತ್ತದೆ ಎಂದಿದ್ದೇನೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ತಿಳಿಸಿದ್ದಾರೆ.

Former DCM KS Eshwarappa
ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ

ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ

ಶಿವಮೊಗ್ಗ :ಮೋದಿಯಂತೆ ಕುಟುಂಬ ರಾಜಕಾರಣದ ವಿರುದ್ದ ನಾನು ಹೋರಾಟ ನಡೆಸುತ್ತೇನೆ ಮತ್ತು ಪಕ್ಷೇತರನಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಅವರು ಸ್ಪಷ್ಟಪಡಿಸಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರ ನಗರದ ತಮ್ಮ‌ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ನಾನು ಬಿಜೆಪಿ ಬಂಡಾಯವಲ್ಲ. ನಾನು ಪಕ್ಷೇತರವಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದೇನೆ. ನಾನು ಸಿದ್ಧಾಂತಕ್ಕೋಸ್ಕರ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ಹಿಂದೂತ್ವ ಉಳಿಸಲು ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.‌ ಪಕ್ಷದ ಪರವಾಗಿ ಹಿಂದೆ ಕೆಲಸ ಮಾಡಿದವರಿಗೆ, ಈಗ ಕೆಲಸ ಮಾಡುತ್ತಿರುವವರಿಗೆ ನೋವಿದೆ. ಆ ನೋವು ಹೋಗಲಾಡಿಸುವುದಕ್ಕೋಸ್ಕರ ಚುನಾವಣೆಗೆ ನಿಂತಿದ್ದೇನೆ. ನೀವು ಕೇಂದ್ರಿಯ ಚುನಾವಣಾ ಸಮಿತಿ ಸದಸ್ಯರು, ನಿಮ್ಮ ಮಗ ಸಂಸದ, ಇನ್ನೊಬ್ಬ ಮಗ ಶಾಸಕ, ರಾಜ್ಯಾಧ್ಯಕ್ಷ, ಕುಟುಂಬ ರಾಜಕಾರಣದ ವಿರುದ್ದ ಮೋದಿ ಏನ್ ಪ್ರಯತ್ನ ಮಾಡುತ್ತಿದ್ದಾರೆ. ಅದೇ ಪ್ರಯತ್ನವನ್ನು ನಾನು ಕರ್ನಾಟಕದಲ್ಲಿ ಮಾಡುತ್ತಿದ್ದೇನೆ. ಅದಕೋಸ್ಕರ ನಾನು ಚುನಾವಣೆಗೆ ನಿಲ್ಲುತ್ತಿದ್ದೇನೆ. ಇದು ಯಡಿಯೂರಪ್ಪ ಅವರಿಗೆ ಅರ್ಥವಾಗಲಿ ಎಂದರು.

ನಾನು ಚುನಾವಣೆಯಲ್ಲಿ ವಿಜಯೇಂದ್ರ ಹಣ ಖರ್ಚು‌ ಮಾಡಿ ಗೆದ್ದರು ಎಂದು ಹೇಳಿಲ್ಲ. ಚುನಾವಣೆಯಲ್ಲಿ ಹಣ, ಜಾತಿ ಕೆಲಸ ಮಾಡುತ್ತದೆ ಎಂದಿದ್ದೇನೆ. ಇದರ ಬಗ್ಗೆ ಕಾರ್ಯಕರ್ತರು ಗಮನ ನೀಡಬೇಡಿ. ಸಿದ್ದಾಂತದ ಬಗ್ಗೆ ಗಮನ ನೀಡೋಣ ಎಂದು ಹೇಳಿದ್ದೇನೆ. ಪಕ್ಷ ಶುದ್ಧೀಕರಣವಾಗಬೇಕು ಎಂದು ಸದಾನಂದಗೌಡರು ಹೇಳಿದ್ದಾರೆ. ಇದರಿಂದ ಸದ್ಯಕ್ಕೆ ಪಕ್ಷದಿಂದ ಹೊರ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಎರಡೇ ತಿಂಗಳಲ್ಲಿ ಮತ್ತೆ ಬಿಜೆಪಿಗೆ ಬರುತ್ತೇನೆ ಎಂದರು. ಮೋದಿ ಅವರನ್ನ ಮತ್ತೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು‌ ಕ್ಷೇತ್ರದ ಜನರ ಪರವಾಗಿ ಕೈ ಎತ್ತುತ್ತೇನೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯ ನಂತರ ರಾಜ್ಯಾಧ್ಯಕ್ಷರ ಬದಲಾವಣೆ ಆಗುತ್ತದೆ. ಏಕೆಂದರೆ ಇವರು ಸರಿಯಾದ ರಾಜಕಾರಣ ಮಾಡುತ್ತಿಲ್ಲ. ಇವರ ವಿರುದ್ದ ಎಲ್ಲಾ ಕಾರ್ಯಕರ್ತರು ಬೇಸರ ಆಗಿದ್ದಾರೆ. ಇದು ಕೇಂದ್ರದ ನಾಯಕರಿಗೆ ಅರ್ಥವಾಗುತ್ತದೆ ಎಂದರು. ಶಿವಮೊಗ್ಗ, ಶಿವಮೊಗ್ಗ ಗ್ರಾಮಾಂತರ ಹಾಗೂ ಶಿಕಾರಿಪುರದಲ್ಲಿ ನಮಗೆ ಇದುವರೆಗೂ ಉತ್ತಮ ಬೆಂಬಲ ವ್ಯಕ್ತವಾಗಿದೆ. ಇದುವರೆಗೂ ಇಲ್ಲಿ‌ ನಾವೇ ಮುಂದೆ ಇದ್ದೇವೆ. ಮುಂದೆ ಬೇರೆ ಕ್ಷೇತಗಳ‌ ಕಡೆ ಗಮನ ಹರಿಸುತ್ತೇವೆ ಎಂದು ಹೇಳಿದರು.

ನಾನು ಹೋಗಿ ಬಂದ ಮಠಾಧೀಶರು ನನಗೆ ಆಶೀರ್ವಾದ ಮಾಡಿದ್ದರು. ನಂತರ ಕೆಲ‌ ಮಠಾಧೀಶರು ಪೋನ್ ಮಾಡಿ ನಿಮಗೆ ಆಶೀರ್ವಾದ ಮಾಡಿದ್ದೇ ತಪ್ಪೆಂದು ಹೇಳಿದ್ದಾರೆ ಎಂದರು. ಇದಕ್ಕೆ ನಾನು ಸ್ವಾಮೀಜಿಗಳೇ ದಯವಿಟ್ಟು ಕ್ಷಮಿಸಿ, ನಿಮ್ಮ ಆಶೀರ್ವಾದ ಫಲಿಸುತ್ತದೆ. ನಿಮಗೆ ಯಾರು ನೋವುಂಟು ಮಾಡಿದ್ದಾರೆ, ಅವರು ಖಂಡಿತ ಅನುಭವಿಸುತ್ತಾರೆ ಎಂದು ಹೇಳಿದ್ದೇನೆ ಎಂದರು.

28 ನೇ ತಾರೀಖು ಲೋಕಸಭಾ ಕ್ಷೇತ್ರದ ಕಾರ್ಯಾಲಯ ಪ್ರಾರಂಭವಾಗುತ್ತದೆ. ಅನೇಕ ಪ್ರಮುಖರಿಗೆ ಆಹ್ವಾನ ನೀಡಿದ್ದೇನೆ. ಯಾರು ಬರುತ್ತಾರೋ ಗೊತ್ತಿಲ್ಲ. ಮಹಿಳೆಯರಿಂದ ದೀಪ ಬೆಳಗಿಸುವ ಮೂಲಕ ಕಚೇರಿ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಸಿಗಂದೂರು ದೇವಿ, ಮಠಾಧೀಶರ ಆಶೀರ್ವಾದದಿಂದ ಗೆಲವು ನಿಶ್ಚಿತ: ಈಶ್ವರಪ್ಪ ವಿಶ್ವಾಸ

ABOUT THE AUTHOR

...view details