ಕರ್ನಾಟಕ

karnataka

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ; ಎಸ್​ಟಿ ಸೋಮಶೇಖರ್ ಅಡ್ಡಮತದಾನ, ಶಿವರಾಮ್​ ಹೆಬ್ಬಾರ್​ ಗೈರು

By ETV Bharat Karnataka Team

Published : Feb 27, 2024, 5:13 PM IST

Updated : Feb 27, 2024, 6:43 PM IST

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನ ಮೂವರು ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಒಂದು ಸ್ಥಾನ ಜಯಿಸಿದೆ.

ರಾಜ್ಯಸಭೆ ಚುನಾವಣೆ
ರಾಜ್ಯಸಭೆ ಚುನಾವಣೆ

ಬೆಂಗಳೂರು :ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರಗಾರಿಕೆ ಹಾಗೂ ಜೆಡಿಎಸ್ ಒಗ್ಗಟ್ಟಿನ ಪ್ರದರ್ಶನ ಯಶಸ್ವಿಯಾಗಿದ್ದರೆ, ಪ್ರತಿಪಕ್ಷ ಬಿಜೆಪಿಗೆ ಅಡ್ಡ ಮತದಾನ ಹಾಗೂ ಗೈರಿನ ಬಿಸಿ ಮುಟ್ಟಿದೆ.

ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿದೆ ಅಡ್ಡಮತದಾನದ ಕರಿನೆರಳಿನಲ್ಲಿ ನಡೆದ ಚುನಾವಣೆ ಬಿಜೆಪಿಗೆ ದೊಡ್ಡ ಪೆಟ್ಟು ನೀಡಿದೆ. ಇತ್ತ ಕಾಂಗ್ರೆಸ್ ತನ್ನ ತಂತ್ರಗಾರಿಕೆಯ ಮೂಲಕ ತನ್ನ ಮೂವರೂ ಅಭ್ಯರ್ಥಿಗಳನ್ನು ಹೆಚ್ಚಿನ ಮತಗಳ ಮೂಲಕ ಗೆಲ್ಲಿಸುವಲ್ಲಿ ಸಫಲವಾಗಿದೆ‌. ಇನ್ನು ಜೆಡಿಎಸ್ ತನ್ನ ಒಗ್ಗಟ್ಟು ಪ್ರದರ್ಶಿಸುವಲ್ಲಿ ಯಶಸ್ಸು ಕಂಡಿದೆ.

ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕೇನ್, ಸಯ್ಯದ್ ನಾಸೀರ್ ಹುಸೇನ್ ಹಾಗು ಜಿ.ಸಿ. ಚಂದ್ರಶೇಖರ್ ನಿರಾಯಾಸ ಗೆಲುವು ಸಾಧಿಸಿದರೆ, ಬಿಜೆಪಿಯ ಅಭ್ಯರ್ಥಿ ನಾರಾಯಣಸಾ ಬಾಂಡಗೆ ಗೆಲುವಿನ‌ ನಗೆ ಬೀರಿದರು. ಇತ್ತ ಮೈತ್ರಿ ಪಕ್ಷದ ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ ನಿರೀಕ್ಷೆಯಂತೆ ಸೋಲು ಕಾಣಬೇಕಾಯಿತು.

ಐದನೇ ಅಭ್ಯರ್ಥಿಯ ಸ್ಪರ್ಧೆಯಿಂದ ಆಪರೇಷನ್ ಭೀತಿಯಲ್ಲಿ ತಮ್ಮ ಎಲ್ಲಾ ಶಾಸಕರನ್ನು ಹೋಟೆಲ್​ಗೆ ಕರೆದೊಯ್ದು ತುದಿಗಾಲಲ್ಲಿ ನಿಂತಿದ್ದ ಕಾಂಗ್ರೆಸ್ ಇಂದು ಚುನಾವಣಾ ಆಖಾಡದಲ್ಲಿ ತಂತ್ರಗಾರಿಕೆ ಮೂಲಕ ತಮ್ಮ ತಲೆಬಿಸಿಯನ್ನು ಬಿಜೆಪಿಯತ್ತ ತಿರುಗಿಸುವಲ್ಲಿ ಯಶಸ್ವಿಯಾಯಿತು. ಬಿಜೆಪಿ ಅಭ್ಯರ್ಥಿ ನಿರಾಯಾಸವಾಗಿ ಗೆದ್ದಿದ್ದರೂ, ಒಬ್ಬ ಶಾಸಕನ ಅಡ್ಡಮತದಾನ ಹಾಗೂ ಇನ್ನೊಬ್ಬ ಶಾಸಕನ ಗೈರು ತೀವ್ರ ಮುಜುಗರ ಹಾಗೂ ಆಘಾತ ನೀಡುವಂತೆ ಮಾಡಿತು.

ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟ:ಒಟ್ಟು 222 ಶಾಸಕರು ಮತ ಚಲಾಯಿಸಿದ್ದು, ಎಲ್ಲ ಮತಗಳು ಸಿಂಧುವಾಗಿವೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಕೇನ್​​ 47 ಮತ, ಸಯ್ಯದ್ ನಾಸೀರ್ ಹುಸೇನ್​ 47, ಜಿ.ಸಿ.ಚಂದ್ರಶೇಖರ್​​ಗೆ 45 ಮತ ಗಳಿಸಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ನಾರಾಯಣಸಾ ಬಾಂಡಗೆ 47‌ ಮತ ಪಡೆದು ಜಯಿಸಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿಗೆ 36 ಮತ ಗಳಿಸಿ ಸೋಲನುಭವಿಸಿದ್ದಾರೆ.

ಕಾಂಗ್ರೆಸ್ ತಂತ್ರಗಾರಿಕೆಯ ಮೇಲುಗೈ :ಇತ್ತ ಐದನೇ ಅಭ್ಯರ್ಥಿ ಹಾಕಿದ್ದರಿಂದ ಅತಿ ಹೆಚ್ಚು ಭೀತಿಗೆ ಒಳಗಾಗಿದ್ದು ಕಾಂಗ್ರೆಸ್. ತನ್ನ ಶಾಸಕರನ್ನು ಆಪರೇಷನ್​ಗೆ ಒಳಗಾಗದಂತೆ ಒಟ್ಟಾಗಿ ಹಿಡಿದಿಟ್ಟುಕೊಳ್ಳುವ ಜೊತೆಗೆ ಅಡ್ಡಮತದಾನ ಆಗದಂತೆ ಎಚ್ಚರ ವಹಿಸುವ ಸವಾಲು ಎದುರಾಗಿತ್ತು. ಅದಕ್ಕಾಗಿನೇ ತನ್ನ ಎಲ್ಲಾ ಶಾಸಕರನ್ನು ಹೋಟೆಲ್ ಗೆ ಕರೆದೊಯ್ದು, ಅಣಕು ಮತದಾನ ಮಾಡಿ ಮುನ್ಮಚ್ಚರಿಕೆ ವಹಿಸಿತು.‌ ಇಂದು ಬೆಳಗ್ಗೆ ಬಸ್ ಮೂಲಕ ನೇರವಾಗಿ ವಿಧಾನಸೌಧಕ್ಕೆ ಆಗಮಿಸಿ ಪ್ಲಾನ್ ಪ್ರಕಾರ ಪ್ರಾಶಸ್ತ್ಯದ ಮತವನ್ನು ಮೂರೂ ಅಭ್ಯರ್ಥಿಗಳಿಗೆ ಹಾಕಿದರು‌.

ಅಷ್ಟೇ ಅಲ್ಲ ನಾಲ್ವರು ಪಕ್ಷೇತರ ಶಾಸಕರ ಮತಗಳು ತಮ್ಮ ಅಭ್ಯರ್ಥಿಗಳಿಗೇ ಬೀಳುವಂತೆ ನೋಡಿಕೊಂಡರು. ಸರ್ವೋದಯ ಕರ್ನಾಟಕ‌ ಪಕ್ಷದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ, ಪಕ್ಷೇತರ ಅಭ್ಯರ್ಥಿಗಳಾದ ಲತಾ ಮಲ್ಲಿಕಾರ್ಜುನ, ಗೌರಿಬಿದನೂರು ಶಾಸಕ ಪುಟ್ಟ ಸ್ವಾಮಿಗೌಡ ಅವರ ಮತಗಳನ್ನು ಸಹ ಕಾಂಗ್ರೆಸ್ ಬುಟ್ಟಿಗೇ ಬೀಳಿಸುವಲ್ಲಿ ಸಫಲರಾದರು.

ಮುಖ್ಯವಾಗಿ ಒಂದು ಕಾಲು ಆಗಲೇ ಆಚೆಗೆ ಇಟ್ಟಿರುವ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಮತವನ್ನು ಕೈ ಅಭ್ಯರ್ಥಿಗೆ ಅಡ್ಡ ಮತದಾನ ಮಾಡಿಸುವ ಮೂಲಕ ಬಿಜೆಪಿಗೆ ಆಘಾತ ನೀಡಿತು‌‌. ಇತ್ತ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗುವ ಮೂಲಕ ವಿಪಕ್ಷ ಬಿಜೆಪಿಗೆ ಮತ್ತೊಂದು ಏಟು ನೀಡುವಂತೆ ಮಾಡುವಲ್ಲಿ ಕಾಂಗ್ರೆಸ್ ಸಫಲವಾಯಿತು. ಅಲ್ಲಿಗೆ ತಮ್ಮ ಚುನಾವಣಾ ಕಾರ್ಯತಂತ್ರಗಾರಿಕೆಯಿಂದ ಕಾಂಗ್ರೆಸ್ ಅಜಯ್ ಮಾಕೆನ್, ಸಯ್ಯದ್ ನಸೀರ್ ಹುಸೇನ್​ ಮತ್ತು ಜಿ.ಸಿ ಚಂದ್ರಶೇಖರ್ ಅವರನ್ನು ಗೆಲ್ಲಿಸಿತು.

ಬಿಜೆಪಿಗೆ ಅಡ್ಡಮತದಾನ ಹಾಗೂ ಗೈರಿನ ಪೆಟ್ಟು :ಇತ್ತ ಬಿಜೆಪಿ ತನ್ನ ಅಭ್ಯರ್ಥಿ ನಾರಾಯಣಸಾ ಬಾಂಡಗೆನ್ನು ನಿರಾಯಾಸವಾಗಿ ಗೆಲ್ಲಿಸಿತು. ಆದರೆ, ಬಿಜೆಪಿಗೆ ಆಘಾತ ನೀಡಿರುವುದು ಎಸ್.ಟಿ ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್. ಎಸ್.ಟಿ. ಸೋಮಶೇಖರ್ ಕೈ ಅಭ್ಯರ್ಥಿಗೆ ಅಡ್ಡ ಮತದಾನ ಮಾಡುವ ಮೂಲಕ ಬಿಜೆಪಿಗಿದ್ದ ಆತಂಕ ಸತ್ಯವಾಯಿತು. ಇನ್ನೊರ್ವ ಶಾಸಕ ಶಿವರಾಂ ಹೆಬ್ಬಾರ್ ಮತದಾನಕ್ಕೆ ಗೈರಾಗುವ ಮೂಲಕ ಬಿಜೆಪಿಗೆ ಡಬಲ್ ಶಾಕ್ ನೀಡಿದರು. ಆ ಮೂಲಕ ಬಿಜೆಪಿ ಗೆಲುವಿನಲ್ಲೂ ನೋವು ಅನುಭವಿಸಿತು.

ಒಗ್ಗಟ್ಟಿನ ಸಂದೇಶ ರವಾನಿಸುವಲ್ಲಿ ಜೆಡಿಎಸ್ ಯಶಸ್ಸು :ರಾಜ್ಯಸಭೆ ಚುನಾವಣೆಯಲ್ಲಿ ತನ್ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋಲಿನ ಕಹಿ ರುಚಿ ಕಂಡರೂ ಜೆಡಿಎಸ್ ಒಗ್ಗಟ್ಟಿನ ಪ್ರದರ್ಶನ ತೋರಿಸುವಲ್ಲಿ ಯಶಸ್ವಿಯಾಯಿತು. ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ. ಆಡಳಿತಾರೂಢ ಪಕ್ಷಕ್ಕೆ ಒಂದು ಸಂದೇಶ ನೀಡಿದೆ. ಆ ಮೂಲಕ ಜೆಡಿಎಸ್ ಸೋಲಿನಲ್ಲೂ ಗೆಲುವಿನ ನಗು ಬೀರಿದೆ.

ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಕಡಿಮೆ ಮತಗಳನ್ನು ಪಡೆಯುವ ಮೂಲಕ ಸೋಲು ಕಂಡರು. ಆದರೆ, ಜೆಡಿಎಸ್ ಶಾಸಕರೂ ನಾವು ಒಂದಾಗಿದ್ದೇವೆ. ಯಾರೂ ಪಕ್ಷ ಬಿಡಲ್ಲ ಎಂಬ ಸಂದೇಶವನ್ನು ರವಾನಿಸುವಲ್ಲಿ ಹೆಚ್​ಡಿಕೆ ಸಫಲರಾದರು. ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ತಮ್ಮ ಕಾರ್ಯತಂತ್ರದ ಮೂಲಕ ಅಡ್ಡಮತದಾನ ಮಾಡದಂತೆ ತಮ್ಮೆಲ್ಲಾ ಶಾಸಕರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಫಲರಾದರು.‌ ಅಸಮಾಧಾನಿತ ಜೆಡಿಎಸ್ ಶಾಸಕ ಶರಣ ಗೌಡ ಕಂದಕೂರ್, ಹನೂರು ಶಾಸಕ ಮಂಜುನಾಥ್ ಹಾಗೂ ಕರೆಮ್ಮ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವ ಮೂಲಕ ಜೆಡಿಎಸ್​ನಲ್ಲಿ ಎಲ್ಲವೂ ಸರಿ ಇದೆ ಎಂಬ ಸಂದೇಶವನ್ನು ರವಾನಿಸಿದರು.

ಇದನ್ನೂ ಓದಿ :ಪಕ್ಷ ಸೂಚಿಸಿದ ಅಭ್ಯರ್ಥಿಗೆ ಮತ ಹಾಕಿದ್ದೇನೆ: ಜೆಡಿಎಸ್ ಶಾಸಕ ಶರಣಗೌಡ ಕಂದಕೂರ

Last Updated :Feb 27, 2024, 6:43 PM IST

ABOUT THE AUTHOR

...view details