ಕರ್ನಾಟಕ

karnataka

ಮತದಾರರಿಗೆ ಬೆದರಿಕೆ, ಆಮಿಷ ಆರೋಪ: ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋದ ಡಿಕೆಶಿ - D K Shivakumar

By ETV Bharat Karnataka Team

Published : Apr 23, 2024, 9:40 PM IST

ಮತದಾರರಿಗೆ ಬೆದರಿಕೆ ಮತ್ತು ಆಮಿಷವೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದು ಕೋರಿ ಡಿಸಿಎಂ ಡಿಕೆಶಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ALLEGATION OF THREATENING VOTERS  DCM DK SHIVAKUMAR  HIGH COURT  BENGALURU
ಮತದಾರರಿಗೆ ಬೆದರಿಕೆ, ಆಮಿಷ ಆರೋಪ

ಬೆಂಗಳೂರು: ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದಡಿ ತಮ್ಮ ವಿರುದ್ಧ ನಗರದ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮತ್ತು ಪ್ರಕರಣ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಖಾಸಗಿ ದೂರು ಸಲ್ಲಿಸಿದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸಂಚಾರಿ ವಿಚಕ್ಷಣಾ ತಂಡದ ಮುಖ್ಯಸ್ಥ ಬಿ.ಕೆ.ದಿನೇಶ್ ಕುಮಾರ್ ಅವರನ್ನು ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಈ ದೂರಿನ ಕುರಿತು ಅರ್ಜಿಯಲ್ಲಿ ವಿವರಿಸಿರುವ ಅವರು, ಕಾವೇರಿ ನೀರು ಸರಬರಾಜು ಮತ್ತು ಸಿಎ ನಿವೇಶನ ಮಂಜೂರಾತಿಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಕೇಳಿದ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರೆ, ಅವರು ನಿಮ್ಮ ಬೇಡಿಕೆ ಪರಿಗಣಿಸುತ್ತಾರೆ. ನಿಮ್ಮ ಬೇಡಿಕೆಗಳ ಈಡೇರಿಕೆಗೆ ಸಂಸದರ ನಿಧಿಯಿಂದ ಅನುದಾನ ಕೊಡಿಸಿ, ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಾರೆ ಎಂದಷ್ಟೇ ಹೇಳಿದ್ದೇನೆ. ಅದು ಯಾವುದೇ ರೀತಿಯಲ್ಲೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಅಲ್ಲದೆ, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ/ಮಾಲೀಕರಿಗೆ ನಾನು ಬೆದರಿಕೆ ಹಾಕಿಲ್ಲ ಹಾಗೂ ಆಮಿಷವೊಡ್ಡಿಲ್ಲ. ನನ್ನನ್ನು ಗುರಿಯಾಗಿಸಿಕೊಂಡು ದೂರು ದಾಖಲಿಸಲಾಗಿದೆ. ಅದನ್ನು ಪರಿಶೀಲಿಸದೆ ಮ್ಯಾಜಿಸ್ಟ್ರೇಟ್ ಕೋರ್ಟ್ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿದೆ. ಪ್ರಕರಣ ಸಂಬಂಧ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ನೋಟಿಸ್ ನೀಡಿ ವಿವರಣೆ ಕೇಳಿದ್ದರು. ನಾನು ವಿವರಣೆ ನೀಡುವ ಮುನ್ನವೇ ದೂರು ಸಲ್ಲಿಕೆಯಾಗಿ, ಎಫ್‌ಐಆರ್ ದಾಖಲಿಸಲಾಗಿದೆ. ಆದ್ದರಿಂದ ಎಫ್‌ಐಆರ್ ಹಾಗೂ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಪ್ರಕರಣದ ಹಿನ್ನಲೆ:ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಚುನಾವಣಾ ಪ್ರಚಾರ ಸಭೆ ನಡೆಸಿದ್ದ ಡಿ.ಕೆ.ಶಿವಕುಮಾರ್, ನಾನು ಬಿಸಿನೆಸ್ ಡೀಲ್‌ಗೆ ಬಂದಿದ್ದೇನೆ. ಅಪಾರ್ಟ್‌ಮೆಂಟ್‌ಗೆ ಸಿಎ ನಿವೇಶನ ನೀಡಬೇಕು ಹಾಗೂ ಕಾವೇರಿ ನೀರು ಒದಗಿಸಬೇಕು ಎಂಬುದಾಗಿ ನಿವಾಸಿಗಳು ಬೇಡಿಕೆಯಿಟ್ಟಿದ್ದಾರೆ. ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ (ಡಿ.ಕೆ.ಸುರೇಶ್‌) ಮತ ನೀಡಿದರೆ ನಿಮ್ಮ ಬೇಡಿಕೆಯನ್ನು ಎರಡು ಮೂರು ತಿಂಗಳಲ್ಲಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದರು.

ಈ ಕುರಿತ ವಿಡಿಯೋ ಸಹ ವೈರಲ್ ಆಗಿತ್ತು. ಅದರ ಬೆನ್ನೆಲ್ಲೇ ದಿನೇಶ್ ಕುಮಾರ್ ಅವರು ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಏ.19ರಂದು ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಆರ್‌ಎಂಸಿ ಯಾರ್ಡ್ ಠಾಣಾ ಪೊಲೀಸರು, ಮತದಾರರಿಗೆ ಬೆದರಿಕೆ ಹಾಕಿದ ಮತ್ತು ಆಮಿಷವೊಡ್ಡಿದ ಆರೋಪದಡಿ ಎಫ್‌ಐಆರ್ ದಾಖಲಿಸಿದ್ದರು.

ಇದನ್ನೂ ಓದಿ:ಮುರುಘಾ ಶರಣರ ಪೋಕ್ಸೊ ಪ್ರಕರಣ: ಹೈಕೋರ್ಟ್​ನಿಂದ ಪಡೆದ ಜಾಮೀನು ಅಮಾನತ್ತಿನಲ್ಲಿಟ್ಟ ಸುಪ್ರೀಂ - Muruga Sharan POCSO case

ABOUT THE AUTHOR

...view details