ಕರ್ನಾಟಕ

karnataka

ಕಾರವಾರ ನಗರದಲ್ಲಿದೆ ಆಧುನಿಕತೆಯ ಸ್ಪರ್ಶವಿರದ ಅದ್ಭುತ ಗ್ರಾಮ: ಹಳ್ಳಿ ಸೊಗಡು ಪರಿಚಯಿಸುತ್ತಿದೆ ರಾಕ್​ ಗಾರ್ಡನ್​

By

Published : May 18, 2021, 6:03 AM IST

A beautiful village near Karwar City without modern touch
ಹಳ್ಳಿ ಸೊಗಡನ್ನು ಪರಿಚಯಿಸುತ್ತಿದೆ ರಾಕ್​ ಗಾರ್ಡನ್​

ಹುಲ್ಲು ಹೊದೆಸಿದ ಮನೆಗಳು, ಮಣ್ಣಿನ ಗೋಡೆಗಳು, ಚಿಮಣಿ ಬೆಳಕಿನ ಮುಂದೆ ಕುಳಿತ ನಾಲ್ಕಾರು ಅಜ್ಜಿಯರು. ಜಾನಪದ ಹಾಡಿನೊಂದಿಗೆ ಒನಕೆಯಲ್ಲಿ ಭತ್ತ ಕುಟ್ಟುತ್ತಿರುವ ಮಹಿಳೆಯರು. ಹಾಲಕ್ಕಿ ಗೌಡರು, ಮೀನುಗಾರರು, ಸಿದ್ಧಿ, ಗೌಳಿ ಮುಂತಾದ ಸಮುದಾಯಗಳ ಜನಪದ ಶೈಲಿಯ ಸಾಂಪ್ರದಾಯಿಕ ಜೀವನ ಪದ್ಧತಿ ಹಾಗೂ ಕಲಾ ಪ್ರಕಾರಗಳನ್ನ ಇಲ್ಲಿ ಕಣ್ತುಂಬಿಕೊಳ್ಳಬಹುದು.

ಕಾರವಾರ:ವಾಹ್! ಎಷ್ಟೊಂದು ಸುಂದರ ತಾಣ. ಕಾರವಾರ ನಗರದ ರಾಕ್​ ಗಾರ್ಡನ್​ನಲ್ಲಿ ಹಳ್ಳಿಗಳ ಜೀವನ ಶೈಲಿಯನ್ನ ಕಣ್ಣಿಗೆ ಕಟ್ಟುವಂತೆ ಮೂರ್ತಿಗಳ ರೂಪದಲ್ಲಿ ಕೆತ್ತಿಡಲಾಗಿದೆ. ಇವೇ ಈಗ ಪ್ರವಾಸಿಗರನ್ನ ತನ್ನತ್ತ ಚುಂಬಕದಂತೆ ಆಕರ್ಷಿಸುತ್ತಿವೆ. ಹಾಲಕ್ಕಿ ಗೌಡರು, ಮೀನುಗಾರರು, ಸಿದ್ದಿ, ಗೌಳಿ ಸಮುದಾಯಗಳ ಹಳ್ಳಿ ಸೊಗಡಿನ ಮನೆ,ಗದ್ದೆ, ತೋಟ,ನೀರಾವರಿ ಬಾವಿ, ಪಶುಪಾಲನೆ,ಮೀನುಗಾರಿಕೆ ಮುಂತಾದ ಕಸಬುಗಳ ಪರಿಕಲ್ಪನೆ ಇಲ್ಲಿ ರೂಪಿಸಲಾಗಿದೆ. ಇಲ್ಲಿನ ಮನುಷ್ಯ,ಪ್ರಾಣಿ,ಪ್ರಕೃತಿ ಸೊಬಗಿನ ಚಿತ್ರಣಗಳು ನೈಜ ಭಾವ ಮೂಡಿಸುವಂತಿವೆ.

ಹಳ್ಳಿ ಸೊಗಡನ್ನು ಪರಿಚಯಿಸುತ್ತಿದೆ ರಾಕ್​ ಗಾರ್ಡನ್​

ಮೀನುಗಾರರ 30 ಅಡಿ ಎತ್ತರದ ಪುತ್ಥಳಿಗಳು ಪ್ರಮುಖ ಆಕರ್ಷಣೆ. ಮಕ್ಕಳ ಆಟಕ್ಕೋಸ್ಕರ ಹಳೆಯ ಕಾಲದ ಬಿದಿರು ಮತ್ತು ಕಟ್ಟಿಗೆಗಳಿಂದ ಜೋಕಾಲಿ,ತಿರುಗಣಿ,ಅಟ್ಟಣಿಕೆ, ಮರಗಳ ಆಸರೆಯಲ್ಲಿ ಕೆನೊಪಿ ವಾಕ್‌ ಸೇತುವೆ ಮುಂತಾದವುಗಳನ್ನು ರಚಿಸಲಾಗಿದೆ. ಹಾಲಕ್ಕಿ ಗೌಡರ ಜೀವನ ಪದ್ಧತಿ ಸಾರುವ ಚಿತ್ರಣವೇ ರಾಕ್‌ ಗಾರ್ಡ್‌ನ್‌ನಲ್ಲಿ ತಲೆ ಎತ್ತಿದೆ. ವಾಸ್ತವ್ಯ ಕುಟೀರ, ಅಂಗಳದಲ್ಲಿನ ತುಳಸಿಕಟ್ಟೆ, ಕಟ್ಟಿ ಹಾಕಿರುವ ಆಕಳು,ಎತ್ತು,ಎಮ್ಮೆ,ನಾಯಿ ಹಾಗೂ ಅಂಗಳದಲ್ಲಿ ಮರಿಯೊಂದಿಗೆ ಧಾನ್ಯ ಹೆಕ್ಕಿ ತಿನ್ನುವ ಕೋಳಿ ನೋಡುಗರ ಗಮನ ಸೆಳೆಯುತ್ತಿವೆ.

ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ರವೀಂದ್ರನಾಥ್‌ ಕಡಲತೀರದ ಮೇಲಿನ ಹನುಮಾನ್‌ ಮೂರ್ತಿ ಬಳಿ ಸುಮಾರು 5 ಎಕರೆ ಜಮೀನಿನಲ್ಲಿ ರಾಕ್‌ ಗಾರ್ಡನ್‌ ನಿರ್ಮಿಸಲಾಗಿದೆ. ಇದರ ಸುತ್ತಮುತ್ತ ಬೃಹತ್‌ ಗಾತ್ರದ ಬಂಡೆಗಲ್ಲಿನಿಂದ ಆವರಣಗೋಡೆ ಕಟ್ಟಲಾಗಿದೆ. ಅರಣ್ಯ ಪ್ರದೇಶವೇ ಹೆಚ್ಚಾಗಿರುವ ಜಿಲ್ಲೆಯಲ್ಲಿ ಸಿದ್ದಿ, ಕುಣಬಿ, ಮುಕ್ರಿ, ಸಿದ್ದಿ, ಗೌಳಿ, ಹಾಲಕ್ಕಿ, ಹಸಲ, ಗೊಂಡಾ ಸೇರಿ ನಾನಾ ಬುಡಕಟ್ಟು ಜನಾಂಗಗಳು ವಾಸವಾಗಿದ್ದವು. ಆ ಸಮುದಾಯಗಳ ಆಚಾರ-ವಿಚಾರ, ಉಡುಗೆ ತೊಡುಗೆ ಬಿಂಬಿಸಲೆಂದೇ ಗಾರ್ಡನ್‌ ರೂಪಿಸಲಾಗಿದೆ.

ಕಾರವಾರದಲ್ಲಿ ಕಡಲತೀರ ಹಾಗೂ ಜಲಸಾಹಸ ಕ್ರೀಡೆಗಳ ಜತೆ ಪ್ರವಾಸಿಗರನ್ನು ರಾಕ್ ಗಾರ್ಡನ್‌ ಆಕರ್ಷಿಸುತ್ತಿದೆ. ಎಲ್ಲೂ ಸಿಗದ ಅಪರೂಪದ ಕಲಾಕೃತಿಗಳು ಹಾಗೂ ಹಳ್ಳಿ ಸೊಬಗಿನ ಚಿತ್ರಣ ಇಲ್ಲಿದೆ.

ABOUT THE AUTHOR

...view details