ಕರ್ನಾಟಕ

karnataka

ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆಗೆ ಶುಭ ಹಾರೈಸಿದ ಮುರುಘಾ ಮಠದ ಶ್ರೀಗಳು..

By

Published : Feb 28, 2022, 5:10 PM IST

ಸ್ವಾಮಿಗಳಾಗಿ ನಮ್ಮ ಮೊದಲ ಕರ್ತವ್ಯ ಎಂದರೆ ಸಮಾಜದಲ್ಲಿ ಸಾಮರಸ್ಯ ಹಾಗೂ ಶಾಂತಿ ಕಾಪಾಡುವುದು. ನೊಂದವರಿಗೆ ಸಾಂತ್ವನ ಹೇಳುವುದು, ಸತ್ಕಾರ್ಯಕ್ಕೆ ಬೆಂಬಲ ನೀಡುವುದು.‌ ಇಲ್ಲಿ ಸತ್ಕಾರ್ಯ ನಡೆಯುತ್ತಿದೆ. ಅದು ಮೇಕೆದಾಟು ಯೋಜನೆ ಆಗಲೇಬೇಕು ಎಂಬ ಹೋರಾಟ. ಇದಕ್ಕೆ ನಾವುಗಳು ಬೆಂಬಲ ನೀಡುತ್ತಿದ್ದೇವೆ..

Murugha Mutt Swamiji   Joins Congress Mekedatu Padayatre in Ramnagara
ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆ ಮುರುಘಾ ಮಠದ ಶ್ರೀ ಸೇರ್ಪಡೆ

ರಾಮನಗರ :ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಶುಭ ಹಾರೈಸಿದರು.

ಬಿಡದಿ ಮತ್ತು ಕೆಂಗೇರಿ ನಡುವೆ ಕೇತಗಾನಹಳ್ಳಿಯ ಬಳಿ ಅನೇಕ ಸ್ವಾಮೀಜಿಗಳ ಜೊತೆ ಸೇರಿಕೊಂಡ ಶ್ರೀಗಳು, ಹೋರಾಟ ಯಶಸ್ವಿಯಾಗಲಿ ಎಂದು ಆಶೀರ್ವಾದ ಮಾಡಿದರು. ಈ ಸಂದರ್ಭದಲ್ಲಿ ಡಿ ಕೆ ಶಿವಕುಮಾರ್ ಸ್ವಾಮೀಜಿಗಳ ಕಾಲಿಗೆರಗಿ ನಮಿಸಿದರು.

ಮುರುಘಾ ಶ್ರೀಗಳ ಆಶೀರ್ವಾದ ಪಡೆದ ಡಿಕೆ ಶಿವಕುಮಾರ್

ಬಳಿಕ ಡಿ.ಕೆ. ಶಿವಕುಮಾರ್ ಮಾತನಾಡಿ, ಮುರುಘಾ ಮಠದ ಶ್ರೀಗಳು ಎಲ್ಲಾ ಧರ್ಮ ಗುರುಗಳ ಜೊತೆಯಲ್ಲಿ ಪಾದಯಾತ್ರೆಗೆ ಆಗಮಿಸಿದ್ದಾರೆ. ಶ್ರೀಗಳ ನೇತೃತ್ವ ರಾಜ್ಯದ ಇತಿಹಾಸ ಪುಟಕ್ಕೆ ಸೇರಲಿದೆ. ಎಲ್ಲಾ ಧರ್ಮ ಪೀಠಗಳನ್ನು ಸ್ಥಾಪಿಸಿದ ಏಕೈಕ ಶ್ರೀಗಳು ಎಂದರೆ ಅದು ನಮ್ಮ ಮುರುಘಾ ಮಠದ ಶ್ರೀಗಳು. ಈ ಯಾತ್ರೆ ಯಾವ ಶುಭ ಗಳಿಗೆಯಲ್ಲಿ ಆರಂಭವಾಗಿದೆ ಎಂದು ಹೇಳಿದರು.

ಕಾಂಗ್ರೆಸ್​​ ಮೇಕೆದಾಟು ಪಾದಯಾತ್ರೆಗೆ ಶುಭ ಹಾರೈಸಿದ ಮುರುಘಾ ಮಠದ ಶ್ರೀ..

ಬುದ್ಧ-ಬಸವನು ಮನೆಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತ ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಮಹಾತ್ಮಾ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಭೀಮಾಭಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ಕೊಟ್ಟ ಗಳಿಗೆಯಲ್ಲಿ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದ ಗಳಿಗೆಯಲ್ಲಿ, ಶ್ರೀಮತಿ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿ ಅದನ್ನು ಮನಮೋಹನ್ ಸಿಂಗ್ ಅವರಿಗೆ ಕೊಟ್ಟ ಗಳಿಗೆಯಲ್ಲಿ ಈ ಪಾದಯಾತ್ರೆ ಆರಂಭವಾಗಿದೆ.

ಇಂತಹ ಶುಭ ಗಳಿಗೆಯಲ್ಲಿ ಮುರುಘಾ ಮಠದ ಶ್ರೀಗಳು ಬಂದು ನಮಗೆ ಆಶೀರ್ವಾದ ಮಾಡಿದ್ದಾರೆ. ಇದು ನಮ್ಮ ಹೋರಾಟವಲ್ಲ, ನಿಮ್ಮ ಹೋರಾಟ. ಈ ಹೋರಾಟಕ್ಕೆ ಶ್ರೀಗಳನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.

ಬಳಿಕ ಮುರುಘಾ ಶ್ರೀಗಳು ಮಾತನಾಡಿ, ರಾಜ್ಯದಲ್ಲಿ ವಿವಿಧ ನೀರಾವರಿ ಹೋರಾಟಗಳು ನಡೆಯುತ್ತಿವೆ. ಇಲ್ಲಿ ಮೇಕೆದಾಟು ಯೋಜನೆ ಹೋರಾಟ ಆರಂಭವಾಗಿದ್ದು, ಉತ್ತರ ಕರ್ನಾಟಕದಲ್ಲಿ ಮಹಾದಾಯಿ ಯೋಜನೆಗಾಗಿ ಹೋರಾಟ ನಡೆಯುತ್ತಿದೆ. ಈ ಕಾಲಘಟ್ಟದಲ್ಲಿ ನೀರಿಗಾಗಿ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ.

ನೀರು ನಮ್ಮ ಹಕ್ಕು, ಆ ದಿಸೆಯಲ್ಲಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಯಶಸ್ವಿ ಹೋರಾಟ ನಡೆಯುತ್ತಿದೆ. ಇಲ್ಲಿ ನಾವು ಅವರ ಶಕ್ತಿ, ಯುಕ್ತಿ ಹಾಗೂ ಭಕ್ತಿಯನ್ನು ನೋಡಬಹುದು. ನಮಗೂ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂಬ ಅಪೇಕ್ಷೆ, ಒತ್ತಾಯ ಎಲ್ಲವೂ ಇದೆ ಎಂದರು.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರಗೆ ಸಾಥ್​ ನೀಡಿದ ಮುರುಘಾ ಶ್ರೀಗಳು

ಸ್ವಾಮಿಗಳಾಗಿ ನಮ್ಮ ಮೊದಲ ಕರ್ತವ್ಯ ಎಂದರೆ ಸಮಾಜದಲ್ಲಿ ಸಾಮರಸ್ಯ ಹಾಗೂ ಶಾಂತಿ ಕಾಪಾಡುವುದು. ನೊಂದವರಿಗೆ ಸಾಂತ್ವನ ಹೇಳುವುದು, ಸತ್ಕಾರ್ಯಕ್ಕೆ ಬೆಂಬಲ ನೀಡುವುದು.‌ ಇಲ್ಲಿ ಸತ್ಕಾರ್ಯ ನಡೆಯುತ್ತಿದೆ. ಅದು ಮೇಕೆದಾಟು ಯೋಜನೆ ಆಗಲೇಬೇಕು ಎಂಬ ಹೋರಾಟ. ಇದಕ್ಕೆ ನಾವುಗಳು ಬೆಂಬಲ ನೀಡುತ್ತಿದ್ದೇವೆ.

ನಮಗೆ ಯಾವುದೇ ಪ್ರಾದೇಶಿಕ ಭಾವನೆ ಇಲ್ಲ. ಈ ಭಾಗದ ಜನರ ಹಿತಕ್ಕೆ ಮೇಕೆದಾಟು ಯೋಜನೆ ಆಗಲಿ ಎಂದು ಆಗ್ರಹಿಸಿ, ನಿಮ್ಮ ಹೋರಾಟಕ್ಕೆ ಜಯ ಸಿಗಲಿ ಎಂದು ಹಾರೈಸಿದರು. ಹವಾನಿಯಂತ್ರಿತ ಕೊಠಡಿಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯಬಹುದಾಗಿದ್ದರೂ ಜನರ ಹಿತಕ್ಕಾಗಿ ಉರಿ ಬಿಸಿಲಿನಲ್ಲಿ ಶಿವಕುಮಾರ್ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಈ ಹೋರಾಟ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅವರ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದರು.

ಇದನ್ನೂ ಓದಿ: ಬೇಗ ನಮ್ಮನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನ ಮಾಡಿ: ಖಾರ್ಕೀವ್‌ನಲ್ಲಿರುವ ಅಥಣಿ, ದಾವಣಗೆರೆ ವಿದ್ಯಾರ್ಥಿಗಳ ಮನವಿ

ABOUT THE AUTHOR

...view details