ಕರ್ನಾಟಕ

karnataka

ಹುಬ್ಬಳ್ಳಿ: ಹಟಕಿನಾಳ ಗ್ರಾಮದಲ್ಲಿ ಚಿರತೆ ದಾಳಿಗೆ ಎತ್ತು ಬಲಿ‌

By ETV Bharat Karnataka Team

Published : Nov 2, 2023, 2:09 PM IST

ತಾಯಿ ಚಿರತೆಯೊಂದಿಗೆ ಮರಿಗಳೂ ಸೇರಿ ಕಬ್ಬಿನ ಗದ್ದೆಯಲ್ಲಿ ಎತ್ತನ್ನು ತಿಂದು ಹಾಕಿವೆ.

ಎತ್ತಿನ ಮೇಲೆ ಚಿರತೆಗಳ ದಾಳಿ
ಎತ್ತಿನ ಮೇಲೆ ಚಿರತೆಗಳ ದಾಳಿ

ಹುಬ್ಬಳ್ಳಿ:ಕಲಘಟಗಿ ತಾಲೂಕಿನಲ್ಲಿ ದಿನದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಜೋರಾಗಿದೆ. ತಾಲೂಕಿನ ಹಟಕಿನಾಳ ಗ್ರಾಮದಲ್ಲಿ ಚಿರತೆಗಳ ಗುಂಪು ದಾಳಿ ಮಾಡಿ ಎತ್ತನ್ನು ತಿಂದು ಹಾಕಿರುವ ಘಟನೆ ನಡೆದಿದೆ. ಗ್ರಾಮದ ಮಲ್ಲಯ್ಯ ಶರಣಯ್ಯ ಗೋಡಿಮನಿ ಎಂಬವರು ಎತ್ತು ಕಳೆದುಕೊಂಡಿದ್ದಾರೆ.‌

ರಾತ್ರಿ ಹೊಲದ ಮನೆಯಲ್ಲಿ ಎರಡು ಎತ್ತುಗಳನ್ನು ಕಟ್ಟಿ ಹಾಕಿದ್ದರು. ಈ ಪೈಕಿ ಒಂದು ಕಾಣೆಯಾಗಿತ್ತು. ಬೆಳಿಗ್ಗೆ ತಾನಾಗಿಯೇ ಒಂದು ಎತ್ತು ಮನೆಯತ್ತ ಮರಳಿದೆ. ಆದ್ರೆ ಇನ್ನೊಂದು ಕಾಣದೇ ಇದ್ದಾಗ ರೈತ ಕಬ್ಬಿನ ಗದ್ದೆಯಲ್ಲಿ ಹುಡುಕಾಡಿದ್ದಾರೆ. ಆಗ ಒಂದು ತಾಯಿ ಚಿರತೆ ಹಾಗೂ ಎರಡು ಮರಿ ಚಿರತೆಗಳು ಸೇರಿ ಎತ್ತನ್ನು‌ ಕಬ್ಬಿನ ಗದ್ದೆಗೆ ಎಳೆದುಕೊಂಡು ಹೋಗಿ ತಿನ್ನುವುದನ್ನು ರೈತ ಕಂಡಿದ್ದಾರೆ. ನಂತರ ಪ್ರಾಣಭಯದಿಂದ ಅಲ್ಲಿಂದ ಓಡಿ ಬಂದು ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿರತೆ ದಾಳಿಯಿಂದ ಕಲಘಟಗಿ ತಾಲೂಕಿನ ರೈತರಲ್ಲಿ ಆತಂಕ ಮನೆ ಮಾಡಿದೆ. ಜನರು ತಮ್ಮ ಹೊಲ ಗದ್ದೆಗಳಿಗೆ ಕೆಲಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದು, ಇಲಾಖೆ ಸಿಬ್ಬಂದಿ ಕೂಡಲೇ ಚಿರತೆಗಳನ್ನು ಹಿಡಿಯುವಂತೆ ಒತ್ತಾಯಿಸಿದ್ದಾರೆ.

ಗುಂಡೇಟಿಗೆ ಚಿರತೆ ಬಲಿ:ಕಳೆದ ಕೆಲ ದಿನಗಳಿಂದ ಬೆಂಗಳೂರು ಹೊರವಲಯದ ಕೆಲವೆಡೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಚಿರತೆ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಗುಂಡೇಟಿಗೆ ಬಲಿಯಾಗಿದೆ. ಮೂರು ದಿನಗಳ ಕಾರ್ಯಾಚರಣೆ ಬಳಿಕ ಬುಧವಾರ ಬೊಮ್ಮನಹಳ್ಳಿ ಬಳಿಯ ಕುಡ್ಲುಗೇಟ್​ ಬಳಿ ಚಿರತೆ ಸೆರೆ ಹಿಡಿಯಲಾಗಿತ್ತು. ಆದರೆ ಕಾರ್ಯಾಚರಣೆ ವೇಳೆ ಗುಂಡು ತಗುಲಿದ್ದ ಪರಿಣಾಮ ಮೃತಪಟ್ಟಿದೆ.

ಸೆರೆ ಹಿಡಿಯುವಾಗ ಚಿರತೆಯು ಅರಣ್ಯ ಇಲಾಖೆ ಸಿಬ್ಬಂದಿ, ಪಶು ವೈದ್ಯರು ಸೇರಿದಂತೆ ಮೂವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಈ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರಿಂದ ಚಿರತೆಯ ಕತ್ತಿನ ಭಾಗಕ್ಕೆ ಗಾಯವಾಗಿದೆ. ಬಳಿಕ ರಕ್ಷಿಸಿ ಚಿರತೆಯನ್ನು ಉಳಿಸಿಕೊಳ್ಳಲು ಯತ್ನಿಸಿದರೂ ಕೂಡ ಚಿಕಿತ್ಸೆ ಫಲಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಅರಣ್ಯ ಸಿಬ್ಬಂದಿ ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ ಕೊನೆಗೂ ಸೆರೆ

ABOUT THE AUTHOR

...view details