ಕರ್ನಾಟಕ

karnataka

ಸಿಎಂ ಆಯ್ಕೆ ಪ್ರಹಸನ ಮುಕ್ತಾಯ: ಡಿಕೆಶಿ, ಸಿದ್ದು ಕೈ ಮೇಲೆತ್ತಿ ಖರ್ಗೆ ಒಗ್ಗಟ್ಟು ಪ್ರದರ್ಶನ

By

Published : May 18, 2023, 12:06 PM IST

Updated : May 18, 2023, 12:34 PM IST

ಸಿಎಂ ಆಯ್ಕೆ ಕಗ್ಗಂಟು ಕೊನೆಗೂ ಕರಗಿದೆ. ಇದಾದ ಬಳಿಕ ಮಲ್ಲಿಕಾರ್ಜುನ್​ ಖರ್ಗೆ ನಿವಾಸದಲ್ಲಿ ಪ್ರಭಾವಿ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಅವರು ಒಗ್ಗಟ್ಟು ಪ್ರದರ್ಶನ ಮಾಡಿದರು.

ಸಿಎಂ ಪ್ರಹಸನ ಮುಕ್ತಾಯ
ಸಿಎಂ ಪ್ರಹಸನ ಮುಕ್ತಾಯ

ನವದೆಹಲಿ:ಕರ್ನಾಟಕದ 'ಮುಂದಿನ ಸಿಎಂ' ಪ್ರಹಸನ ಮುಗಿದಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಡಿಸಿಎಂ ಆಗಿ ಕಾಂಗ್ರೆಸ್​ ಹೈಕಮಾಂಡ್​ ಅಂತಿಮಗೊಳಿಸಿದೆ. ಈ ಕುರಿತ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಇದರ ಬೆನ್ನಲ್ಲೇ ಮುನಿಸಿಕೊಂಡಿದ್ದ ಇಬ್ಬರು ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರ ದೆಹಲಿಯ ನಿವಾಸದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.

ಇಂದು ಬೆಳಗ್ಗೆ ಉಭಯ ನಾಯಕರು ಖರ್ಗೆ ಅವರ ನಿವಾಸಕ್ಕೆ ತೆರಳಿ, ಮಾತುಕತೆಯಲ್ಲಿ ಭಾಗಿಯಾದರು. ಬಳಿಕ ಎಐಸಿಸಿ ಅಧ್ಯಕ್ಷರು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ಕೈಗಳನ್ನು ಮೇಲಕ್ಕೆ ಎತ್ತುವ ಮೂಲಕ ನಮ್ಮಲ್ಲಿ ಯಾವುದೇ ಮುನಿಸು ಇಲ್ಲ ಎಂಬುದನ್ನು ಸೂಚ್ಯವಾಗಿ ಹೇಳಿದರು. ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾದ ಬಳಿಕ ಸಿಎಂ ಸ್ಥಾನಕ್ಕಾಗಿ ಪ್ರಬಲ ವಾದ ಮಂಡಿಸುತ್ತಾ ಹೈಕಮಾಂಡ್​ಗೆ ಸವಾಲಾಗಿದ್ದ ನಾಯಕರ ಮೊಗದಲ್ಲಿ ಈಗ ಮಂದಹಾಸ ನಲಿದಾಡುತ್ತಿದೆ.

ಡಿ.ಕೆ.ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಅವರ ಜೊತೆಗಿರುವ ಚಿತ್ರವನ್ನು ಖರ್ಗೆ ಅವರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, "ಕರ್ನಾಟಕದ ಜನತೆಗೆ ಪ್ರಗತಿ, ಕಲ್ಯಾಣ ಮತ್ತು ಸಾಮಾಜಿಕ ನ್ಯಾಯ ಒದಗಿಸಲು ಟೀಂ ಕಾಂಗ್ರೆಸ್ ಬದ್ಧವಾಗಿದೆ. 6.5 ಕೋಟಿ ಕನ್ನಡಿಗರಿಗೆ ನೀಡಿದ 5 ಭರವಸೆಗಳನ್ನು ನಾವು ಜಾರಿಗೊಳಿಸುತ್ತೇವೆ" ಎಂದು ಬರೆದುಕೊಂಡಿದ್ದಾರೆ.

ಮುನಿಸು ಮರೆತರಾ ಟಗರು- ಬಂಡೆ?:ಚುನಾವಣೆ ಘೋಷಣೆಯಾದ ಬಳಿಕ ಡಿ.ಕೆ.ಶಿವಕುಮಾರ್​ ಮತ್ತು ಸಿದ್ದರಾಮಯ್ಯ ಅವರು ಒಬ್ಬರನ್ನೊಬ್ಬರೂ ಈವರೆಗೂ ಭೇಟಿಯಾಗಿರಲಿಲ್ಲ. ಚುನಾವಣಾ ಪ್ರಚಾರದ ವೇಳೆ ಕುಚುಕು ಗೆಳೆಯರಂತಿದ್ದ ಇಬ್ಬರೂ, ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಕ್ಕ ಬಳಿಕ ದೂರವಾಗಿದ್ದರು. ಸಿಎಂ ಸ್ಥಾನಕ್ಕಾಗಿ ಪ್ರಬಲ ವಾದ ಮಂಡಿಸುತ್ತಾ ತಾವೇ ಪೂರ್ಣಾವಧಿಗೆ ಸಿಎಂ ಆಗಬೇಕು ಎಂದು ಹಟ ಹಿಡಿದಿದ್ದರು.

ಕಳೆದ 5 ದಿನಗಳಿಂದ ದೆಹಲಿಯಲ್ಲಿ ರಾಹುಲ್​ ಗಾಂಧಿ, ಮಲ್ಲಿಕಾರ್ಜುನ್​ ಖರ್ಗೆ, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸುರ್ಜೇವಾಲಾ, ವೇಣುಗೋಪಾಲ್​ ನೇತೃತ್ವದಲ್ಲಿ ಸರಣಿ ಸಭೆಗಳನ್ನು ನಡೆಸಲಾಗಿತ್ತು. ಇಷ್ಟಾದರೂ ರಾಜ್ಯದ ಪ್ರಭಾವಿ ನಾಯಕರು ಮಾತ್ರ ತಮ್ಮ ಪಟ್ಟು ಸಡಿಲ ಮಾಡಿರಲಿಲ್ಲ. ಕಡೆಗೂ ಡಿ.ಕೆ.ಶಿವಕುಮಾರ್ ಅವರ ಮನವೊಲಿಸುವಲ್ಲಿ ಹೈಕಮಾಂಡ್​ ಯಶ ಕಂಡಿದೆ.

ಹೀಗಾಗಿ ಸಿದ್ದರಾಮಯ್ಯ ಅವರು ಸಿಎಂ ಆಗಲಿದ್ದು, ಕನಕಪುರದ ಬಂಡೆ ಖ್ಯಾತಿಯ ಡಿ.ಕೆ.ಶಿವಕುಮಾರ್​ ಡಿಸಿಎಂ ಆಗಲಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪಕ್ಷ ಅಧಿಕೃತ ಹೇಳಿಕೆಯಷ್ಟೇ ಬಿಡುಗಡೆ ಮಾಡಬೇಕಿದೆ.

ಸುರ್ಜೇವಾಲಾ ನಿವಾಸದಲ್ಲಿ ಉಪಾಹಾರ ಕೂಟ

ಸುರ್ಜೇವಾಲಾ ನಿವಾಸದಲ್ಲಿ ಉಪಾಹಾರ:ಸಿಎಂ ಪ್ರಹಸನ ಮುಕ್ತವಾಯವಾದ ಬಳಿಕ ಡಿ.ಕೆ.ಶಿವಕುಮಾರ್​, ಸಿದ್ದರಾಮಯ್ಯ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್​ ಅವರು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸುರ್ಜೇವಾಲಾ ನಿವಾಸದಲ್ಲಿ ಉಪಾಹಾರ ಸೇವಿಸಿದರು. ಎಲ್ಲರೂ ನಗುಮೊಗದಿಂದಲೇ ಒಟ್ಟಾಗಿ ಕುಳಿತು ತಿಂಡಿ ತಿಂದು ಮತ್ತೊಮ್ಮೆ ಒಗ್ಗಟ್ಟು ಪ್ರದರ್ಶನ ಮಾಡಿದರು.

ಇದಕ್ಕೂ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ, ಡಿ.ಕೆ.ಶಿವಕುಮಾರ್​ ಅವರ ಸಹೋದರ ಡಿ.ಕೆ.ಸುರೇಶ್​, ಹೈಕಮಾಂಡ್​ ನಿರ್ಧಾರಕ್ಕೆ ನಾವು ತೃಪ್ತರಾಗಿಲ್ಲ. ರಾಜ್ಯದ ಜನರ ಹಿತದೃಷ್ಟಿಯಿಂದಾಗಿ ಇದನ್ನು ಒಪ್ಪಿಕೊಳ್ಳಬೇಕಿದೆ. ಡಿಕೆಶಿ​ ಸಿಎಂ ಆಗುತ್ತಾರೆ ಎಂದು ಭಾವಿಸಿದ್ದೆವು. ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸಲಾಗುವುದು ಎಂದು ಅಸಂತೃಪ್ತಿ ವ್ಯಕ್ತಪಡಿಸಿದ್ದರು.

ಡಿಕೆಶಿ ದೋಸ್ತಿ ಟ್ವೀಟ್​:ಸಿಎಂ ಸ್ಥಾನದಿಂದ ವಂಚಿತರಾಗಿರುವ ಡಿ.ಕೆ.ಶಿವಕುಮಾರ್ ಮುನಿಸು ಮರೆತು "ದೋಸ್ತಿ" ಟ್ವೀಟ್​ ಮಾಡಿದ್ದಾರೆ. 'ಕರ್ನಾಟಕದ ಸುಭದ್ರ ಭವಿಷ್ಯ ಮತ್ತು ಜನಕಲ್ಯಾಣವೇ ನಮ್ಮ ಆದ್ಯತೆಯಾಗಿದೆ. ಅದನ್ನು ಖಾತರಿಪಡಿಸುವಲ್ಲಿ ನಾವು ಒಗ್ಗಟ್ಟಾಗಿದ್ದೇವೆ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಸಿಎಂ ಆಯ್ಕೆ ವಿಚಾರದಲ್ಲಿ ನನಗೆ ಸಂಪೂರ್ಣ ಸಂತೋಷವಿಲ್ಲ: ಡಿ.ಕೆ.ಸುರೇಶ್​

Last Updated :May 18, 2023, 12:34 PM IST

ABOUT THE AUTHOR

...view details