ಕರ್ನಾಟಕ

karnataka

ನೂತನ ಇಂಧನ ಭವನ ಉದ್ಘಾಟಿಸಿದ ಸಚಿವ ಸುನೀಲ್​ ಕುಮಾರ್ ..

By

Published : Mar 28, 2023, 8:08 PM IST

ಬೆಂಗಳೂರಿನಲ್ಲಿ 177 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಇಂಧನ ಭವನವನ್ನು ಮಂಗಳವಾರ ಇಂಧನ ಸಚಿವ ಸುನೀಲ್​ ಕುಮಾರ್ ಉದ್ಘಾಟನೆ ಮಾಡಿದ್ದಾರೆ.

power-minister-sunil-kumar-inaugurate-indana-bhavan
ಬೆಂಗಳೂರು: ನೂತನ ಇಂಧನ ಭವನ ಉದ್ಘಾಟಿಸಿದ ಸಚಿವ ಸುನೀಲ್​ ಕುಮಾರ್

ಬೆಂಗಳೂರು: ನಗರದಲ್ಲಿ 177 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಇಂಧನ ಭವನವನ್ನು ಮಂಗಳವಾರ ಇಂಧನ ಸಚಿವ ಸುನೀಲ್​ ಕುಮಾರ್ ಉದ್ಘಾಟನೆ ಮಾಡಿದರು. ಕೋವಿಡ್ ನಂತರದ ದಿನಗಳಲ್ಲಿ ಕೊಂಚ ವೇಗ ಪಡೆದ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದೆ. ಇನ್ನೇನು 2023ರ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಇದಕ್ಕೂ ಮುನ್ನ ಕಟ್ಟಡ ಉದ್ಘಾಟಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ.

ಇಂಧನ ಸಚಿವ ಸುನೀಲ್​ ಕುಮಾರ್ ವಿಶೇಷ ಕಾಳಜಿ ವಹಿಸಿ ಕಳೆದ ಒಂದೆರಡು ವರ್ಷದಲ್ಲಿ ಕಾಮಗಾರಿಯನ್ನು ತ್ವರಿತಗೊಳಿಸಿ, ನಿರ್ಮಾಣ ಕಾಮಗಾರಿಗೆ ಚುರುಕು ನೀಡಿದ್ದರು. ಬೆಂಗಳೂರು ಕೇಂದ್ರ ಭಾಗದಲ್ಲಿರುವ ರೇಸ್​ಕೋರ್ಸ್ ರಸ್ತೆ ಸಮೀಪ ತಲೆ ಎತ್ತಿರುವ ಈ ಬೃಹತ್ ಕಟ್ಟಡದಲ್ಲಿಯೇ ಮುಂದಿನ ದಿನಗಳಲ್ಲಿ ಮೈಸೂರು ಬ್ಯಾಂಕ್ ವೃತ್ತ ಸಮೀಪ ಇರುವ ಕಾವೇರಿ ಭವನ ಸ್ಥಳಾಂತರಗೊಳ್ಳಲಿದೆ.

ಇಂಧನ ಇಲಾಖೆಯ ಪ್ರಮುಖ ವಿಭಾಗಗಳು, ಕೇಂದ್ರ ಕಚೇರಿ ಹಾಗೂ ಇತರೆ ಸರ್ಕಾರಿ ಕಚೇರಿಗಳು ಇಲ್ಲಿಗೆ ಸ್ಥಳಾಂತರಗೊಳ್ಳಲಿವೆ ಎಂಬ ಮಾಹಿತಿ ಇದೆ. ಅತ್ಯಂತ ವಿಶಾಲ ಸ್ಥಳಾವಕಾಶ ಹೊಂದಿರುವ ಈ ಕಟ್ಟಡದಲ್ಲಿ ಅಂತಿಮ ಹಂತದಲ್ಲಿ ಇನ್ನಷ್ಟು ಕೆಲಸ ಆಗಬೇಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಈ ಕಟ್ಟಡವನ್ನು ಉದ್ಘಾಟಿಸಬೇಕಿತ್ತು. ಆದರೆ ಕಲಬುರುಗಿ ಪ್ರವಾಸ ಜೊತೆಗೆ ವಿವಿಧ ವಿಶ್ವವಿದ್ಯಾಲಯಗಳನ್ನು ಉದ್ಘಾಟಿಸಬೇಕಿದ್ದ ಹಿನ್ನೆಲೆ ಅನುಪಸ್ಥಿತರಾಗಿದ್ದಾರೆ.

ಒಟ್ಟು 177 ಕೋಟಿ ರೂ. ವೆಚ್ಚದ ಈ ಕಟ್ಟಡ ಅತ್ಯಂತ ವ್ಯವಸ್ಥಿತವಾಗಿ ತಲೆ ಎತ್ತಿದೆ. ವಾಹನ ನಿಲುಗಡೆ, ಕಚೇರಿ ಸ್ಥಳಾವಕಾಶವನ್ನು ಹೊಂದಿದೆ. ಆದರೆ ಇಲ್ಲಿಗೆ ವಿವಿಧ ಕಚೇರಿಗಳು ಸ್ಥಳಾಂತರಗೊಳ್ಳಲು ಕೆಲ ದಿನ ಹಿಡಿಯಬಹುದು. ಸರ್ಕಾರ ಬದಲಾದರೆ ತಮ್ಮ ಕೆಲಸಕ್ಕೆ ಬೆಲೆ ಸಿಗುವುದಿಲ್ಲ ಎನ್ನುವ ಉದ್ದೇಶದಿಂದ ಇಂಧನ ಸಚಿವರು ಇಂದು ತರಾತುರಿಯಲ್ಲಿ ಕಟ್ಟಡ ಉದ್ಘಾಟಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿಶೇಷ ಪೂಜೆ ಸಹ ಕಟ್ಟಡದ ಒಳಗೆ ನಡೆಸಲಾಗಿದೆ. ವಿಶೇಷ ಹೋಮ ಹವನವನ್ನು ಸಹ ನಡೆಸಿ ಕಟ್ಟಡ ಉದ್ಘಾಟಿಸಲಾಗಿದೆ. 2017ರ ಅಕ್ಟೋಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಇದನ್ನೂ ಓದಿ:ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್​ ಹೆಸರು ಮರುನಾಮಕರಣ: ರೆಬೆಲ್ ಸ್ಟಾರ್ ಪ್ರತಿಮೆ ಹಾಗು ಸ್ಮಾರಕ ಲೋಕಾರ್ಪಣೆ ಮಾಡಿದ ಸಿಎಂ

ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಚಾಲನೆ ನಿಡಿದ್ದ ಸಿಎಂ:ಸೋಮವಾರ ರಾಮನಗರ ಜಿಲ್ಲೆಯ ಅರ್ಚಕರಹಳ್ಳಿ ಬಳಿಯ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕ್ಯಾಂಪಸ್ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ನಂತರ ಮಾತನಾಡಿದ್ದ ಅವರು, ಕಳೆದ 16 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕ್ಯಾಂಪಸ್ ನಿರ್ಮಾಣವವೇ ಗೊಂದಲದ ಗೂಡಾಗಿತ್ತು. ಎಲ್ಲಾ ಸಮಸ್ಯೆಗಳನ್ನು ಎದುರಿಸಿ, ಪರಿಹಾರ ಒದಗಿಸುವ ಕೆಲಸ ಮಾಡಲಾಗಿದೆ. ನೆನೆಗುದಿಗೆ ಬಿದ್ದಿದ್ದ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದ್ದರು.

ABOUT THE AUTHOR

...view details