ಕರ್ನಾಟಕ

karnataka

ಒಲಿಂಪಿಕ್ಸ್, ಏಷಿಯನ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದವರಿಗೆ ಸರ್ಕಾರಿ ನೌಕರಿ: ಸಿಎಂ

By

Published : Dec 6, 2022, 2:44 PM IST

ಒಲಿಂಪಿಕ್ಸ್‌ ಮತ್ತು ಪ್ಯಾರಾ ಒಲಿಂಪಿಕ್ಸ್‌ ಕ್ರೀಡಾಕೂಟಗಳ ಪದಕ ವಿಜೇತರಿಗೆ ಗ್ರೂಪ್ ಎ ಮತ್ತು ಏಷಿಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಗ್ರೂಪ್ ಬಿ ಹಾಗು ನ್ಯಾಷನಲ್ ಗೇಮ್ಸ್‌‌ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಸಿ ಸರ್ಕಾರಿ ಉದ್ಯೋಗ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಸಿಎಂ ಘೋಷಣೆ
ಸಿಎಂ ಘೋಷಣೆ

ಬೆಂಗಳೂರು: ಒಲಿಂಪಿಕ್ಸ್, ಪ್ಯಾರಾ ಒಲಿಂಪಿಕ್ಸ್, ಏಷಿಯನ್ ಗೇಮ್ಸ್ ಹಾಗು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆಲ್ಲುವ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಘೋಷಿಸಿದ್ದಾರೆ. ರಾಜಭವನದಲ್ಲಿ 2021ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಹಾಗೂ 2022 ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಒಲಿಂಪಿಕ್ ಮತ್ತು ಪ್ಯಾರಾ ಒಲಿಂಪಿಕ್‌ನಲ್ಲಿ ಪದಕ ವಿಜೇತರಿಗೆ ಗ್ರೂಪ್ ಎ ಸರ್ಕಾರಿ ಉದ್ಯೋಗ, ಏಷಿಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಬಿ ಗ್ರೂಪ್ ಸರ್ಕಾರಿ ಉದ್ಯೋಗ, ನ್ಯಾಷನಲ್ ಗೇಮ್ಸ್‌‌ನಲ್ಲಿ ಪದಕ ವಿಜೇತರಿಗೆ ಸಿ ಗ್ರೂಪ್ ಉದ್ಯೋಗ ನೀಡುವುದಾಗಿ ಅವರು ಪ್ರಕಟಿಸಿದರು.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಕ್ರೀಡಾ ಸಾಧಕರಿದ್ದಾರೆ. ಆದರೆ ನಾವೇನು ಮಾಡುತ್ತಿದ್ದೇವೆ ಎಂದು ನಮಗೆ ಅನಿಸುತ್ತದೆ. ಕ್ರೀಡಾಪಟುಗಳೇ ನಮಗೆ ಸ್ಪೂರ್ತಿ. ನಮ್ಮ ರಾಜ್ಯಪಾಲರು ಸ್ವತಃ ಕ್ರೀಡಾಪಟುಗಳಾಗಿದ್ದಾರೆ. ಸಾಧನೆಯ ಹಿಂದೆ ದೊಡ್ಡ ಪರಿಶ್ರಮವಿರುತ್ತದೆ. ಸತತ ಪ್ರಯತ್ನದಿಂದ ಯಶಸ್ಸು ಸಿಗುತ್ತದೆ. ಅದಕ್ಕೆ ಕ್ರೀಡಾಪಟುಗಳೇ ಉದಾಹರಣೆ. ಕೇಂದ್ರ ಸರ್ಕಾರ ಕ್ರೀಡೆಗೆ ಪ್ರಾಮುಖ್ಯತೆ ಕೊಡುತ್ತಿದೆ. ದೇಶಗಳು ಕ್ರೀಡಾ ಸಾಧನೆಯಿಂದ ಗುರುತಿಸುವಷ್ಟು ಬದಲಾಗಿವೆ. ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಮೂಲಕ ಭಾರತವನ್ನು ಕ್ರೀಡೆಯಲ್ಲಿ ಗುರುತಿಸುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ:2023ಕ್ಕೆ ನೂರಕ್ಕೆ ನೂರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ‌

ಈ ಹಿನ್ನೆಲೆಯಲ್ಲಿ ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತ ಅತಿ‌ ಹೆಚ್ಚು ಪದಕ ಗೆದ್ದಿದೆ. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಕೂಡ ಭಾರತ ಉತ್ತಮ ಸಾಧನೆ ಮಾಡಿದೆ. ಕರ್ನಾಟಕ 75 ಕ್ರೀಡಾಪಟುಗಳನ್ನು ಅಮೃತದತ್ತು ಯೋಜನೆಯಡಿ ದತ್ತು ಪಡೆದುಕೊಂಡಿದೆ. ನಾಲ್ಕು ವರ್ಷಗಳ ಕ್ರೀಡಾ ತರಬೇತಿಗಾಗಿ ಸರ್ಕಾರ ತಲಾ 10 ಲಕ್ಷ ರೂ ನೀಡಿದೆ. ಅವಶ್ಯಕತೆಯಿದ್ದರೆ ಇನ್ನೂ 10 ಲಕ್ಷ ರೂ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಇಲಾಖೆಗಳಲ್ಲಿ ಕ್ರೀಡಾ ನೇಮಕಾತಿ ಮಾಡುವ ವಿಚಾರ ಚರ್ಚಿಸಲಾಗುವುದು. ಎಸಿಎಸ್ ನೇತೃತ್ವದಲ್ಲಿ ಸಮಿತಿ ರಚಿಸಿ, ಆ ಸಮಿತಿಯ ಮೂಲಕ ನೇರ ನೇಮಕಾತಿ ಮಾಡಲಾಗುತ್ತದೆ. ಪದವಿ ಪಡೆದಿರುವ ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ ಎಂದರು.

ರಾಜ್ಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷ ಮತ್ತು ಪರಿಷತ್ ಸದಸ್ಯ ಗೋವಿಂದರಾಜು ಹೆಸರು ಪ್ರಸ್ತಾಪಿಸಿದ ಸಿಎಂ, ನೋಡಪ್ಪ ಗೋವಿಂದರಾಜು ನಿಮ್ಮ ಸರ್ಕಾರ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೀಡುವ ಕೆಲ್ಸ ಮಾಡಿಲ್ಲ, ನಾನು‌ ಮಾಡಿದ್ದೇನೆ ಎಂದು ಟಾಂಗ್ ಕೊಟ್ಟರು. ಕ್ರೀಡಾಪಟುಗಳಿಗೆ ಉದ್ಯೋಗ ನೀಡಬೇಕೆಂದು ಮನವಿ ಮಾಡಿದ್ದ ಗೋವಿಂದರಾಜು ಹೇಳಿಕೆ ಪ್ರಸ್ತಾಪಿಸುತ್ತಾ, ನಿಮ್ಮ ಸರ್ಕಾರ ಇದ್ದಾಗ ಆಗಿಲ್ಲ ಅದನ್ನು ಮಾಡೋಕೆ ನಾನೇ ಬರಬೇಕಾಗಿತ್ತು. ಕ್ರೀಡಾಪಟುಗಳಿಗೆ ಉದ್ಯೋಗ ನೀಡಲು ನಮ್ಮ ಸರ್ಕಾರವೇ ಬರಬೇಕಾಯಿತು. ನೀನು ಕೇವಲ ಬೇಡಿಕೆ ಇಡ್ತಾ ಇರು, ನಾವು ಅದನ್ನು ಜಾರಿ ಮಾಡುತ್ತಿರುತ್ತೇವೆ ಎಂದು ಹಿಂದಿನ ಸರ್ಕಾರಗಳನ್ನು ಸಿಎಂ ಟೀಕಿಸಿದರು.

ABOUT THE AUTHOR

...view details