ಕರ್ನಾಟಕ

karnataka

ಅನುದಾನ ಕೊರತೆಯಿಂದ ವಿವಿಗಳ ಮುಚ್ಚಬೇಡಿ : ಸಿಎಂಗೆ ಪತ್ರ ಬರೆದ ಮಾಜಿ ಸಿಎಂ ಬೊಮ್ಮಾಯಿ

By ETV Bharat Karnataka Team

Published : Dec 18, 2023, 7:17 PM IST

ನೂತನ ವಿವಿಗಳನ್ನು ಅನುದಾನದ ನೆಪದಲ್ಲಿ ಮುಚ್ಚುವ ಪ್ರಸ್ತಾಪವನ್ನು ಕೈಬಿಡುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯ ಹಾಗೂ ಬಸವರಾಜ ಬೊಮ್ಮಾಯಿ

ಬೆಂಗಳೂರು : ರಾಜ್ಯ ಸರ್ಕಾರ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ನೂತನ ವಿಶ್ವ ವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪ ಹೇಳಿ ಮುಚ್ಚಲು ಮುಂದಾಗುತ್ತಿರುವುದು ಹಿಂದುಳಿದ ಜಿಲ್ಲೆಗಳು ಮತ್ತು ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ನೂತನ ವಿಶ್ವ ವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪದಲ್ಲಿ ಮುಚ್ಚುವ ಪ್ರಸ್ತಾಪವನ್ನು ಕೈಬಿಡುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಸಿಎಂಗೆ ಪತ್ರ ಬರೆದ ಮಾಜಿ ಸಿಎಂ ಬೊಮ್ಮಾಯಿ

ಹೊಸ ಸರ್ಕಾರ ಬಂದು ಬೆಳಗಾವಿಯಲ್ಲಿ ಪ್ರಥಮ ಅಧಿವೇಶನ ನಡೆಸುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಚರ್ಚೆ ಮತ್ತು ಸಮರ್ಪಕವಾದ ಉತ್ತರವನ್ನು ಉತ್ತರ ಕರ್ನಾಟಕದ ಜನರು ನಿರೀಕ್ಷೆ ಮಾಡಿದ್ದರು. ಆದರೆ, ಯಾವುದೇ ವಿಶೇಷವಾಗಿರುವ ಅಭಿವೃದ್ಧಿ ಪರ ನಿರ್ಣಯಗಳನ್ನು ಸರ್ಕಾರ ಘೋಷಿಸದೇ ಈಗಾಗಲೇ ಇರುವಂತಹ ಕಾರ್ಯಕ್ರಮಗಳನ್ನು ಪುನಃ ಘೋಷಿಸಿ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ.

ಉತ್ತರ ಕರ್ನಾಟಕ ಅಷ್ಟೇ ಅಲ್ಲ, ಇಡೀ ಕರ್ನಾಟಕದಲ್ಲಿ ಯಾವುದೇ ಮೂಲ ಸೌಕರ್ಯಗಳ ಕಾಮಗಾರಿಗಳು ಪ್ರಾರಂಭವಾಗದಿರುವ ಕಟು ಸತ್ಯದ ಅನುಭವ ಜನರಿಗೆ ಬಂದಿದೆ. ಕೃಷ್ಣಾ ಮೇಲ್ದಂಡೆ ಹಂತ 3ರ 130 ಟಿಎಂಸಿ ನೀರು ಬಳಕೆ ಮಾಡಲು ನಮ್ಮ ಸರ್ಕಾರ ಪ್ರಾರಂಭ ಮಾಡಿರುವ ಪುನರ್ ವಸತಿ ಮತ್ತು ಪುನರ್‌ ನಿರ್ಮಾಣಕ್ಕೆ‌ ಈ ವರ್ಷ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡದಿರುವುದು ಉತ್ತರ ಕರ್ನಾಟಕದ ಬಗ್ಗೆ ತಮ್ಮ ಸರ್ಕಾರಕ್ಕೆ ಇರುವ ಅಸಡ್ಡೆ ಭಾವನೆ ಗೊತ್ತಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಿಎಂಗೆ ಪತ್ರ ಬರೆದ ಮಾಜಿ ಸಿಎಂ ಬೊಮ್ಮಾಯಿ

ಅದೇ ರೀತಿ ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರ ಡಿಪಿಆರ್​ಗೆ ಅನುಮೋದನೆ ಕೊಟ್ಟಿದ್ದು, ಅರಣ್ಯ ಇಲಾಖೆಯ ಅನುಮತಿ ಪಡೆಯಲು ತೆಗೆದುಕೊಂಡ ಕ್ರಮದ ಬಗ್ಗೆ ವಿವರಣೆಯನ್ನು ಕೊಡದಿರುವುದು ನೋಡಿದರೆ ತಮ್ಮ ಐದು ವರ್ಷದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ತಮ್ಮ ಆಸಕ್ತಿ ಇಲ್ಲದಂತೆ ಕಾಣಿಸುತ್ತದೆ. ತುಂಗಭದ್ರ ಸಮತೋಲನ ಜಲಾಶಯಕ್ಕೆ ನಮ್ಮ ಸರ್ಕಾರ ಡಿಪಿಆರ್ ಮಾಡಿದೆ. ಕೂಡಲೇ ನೆರೆ ರಾಜ್ಯಗಳೊಂದಿಗೆ ಮಾತನಾಡಿ, ಯೋಜನೆ ಜಾರಿಗೆ ಕ್ರಮ ತೆಗೆದುಕೊಳ್ಳಬೇಕೆಂದು ಪತ್ರದ ಮೂಲಕ ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದ ಸಾಸಲಟ್ಟಿ ಶಿವಲಿಂಗೇಶ್ವರ, ಮಂಟೂರು ಮಹಾಲಕ್ಷ್ಮೀ ಮತ್ತು ಶ್ರೀವೆಂಕಟೇಶ್ವರ ಏತ ನೀರಾವರಿ ಸೇರಿದಂತೆ ಹಲವಾರು ಏತ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ಚಾಲನೆ ನೀಡಿದೆ. ಅವುಗಳನ್ನು ಮುಂದುವರೆಸುವ ಬಗ್ಗೆ ಬಜೆಟ್​ನಲ್ಲಿ ಯಾವುದೇ ಹಣ ಮೀಸಲಿಡದಿರುವುದು ಅಧಿವೇಶನದಲ್ಲಿಯೂ ಪ್ರಸ್ತಾಪಿಸದೇ ಇರುವುದು ಹಲವಾರು ಜಿಲ್ಲೆಗಳ ನೀರಾವರಿಗೆ ಹಿನ್ನಡೆ ಆಗುವುದು ಖಚಿತ.

ಹುಬ್ಬಳ್ಳಿಯಲ್ಲಿ ಎಫ್​ಎಂಸಿಜಿಗೆ ನಮ್ಮ ಸರ್ಕಾರ ಜಮೀನು ಮಂಜೂರು ಮಾಡಿ ವಿಶೇಷ ರಿಯಾಯ್ತಿ ನೀಡಿದೆ. ಸುಮಾರು 1 ಲಕ್ಷ ಜನರಿಗೆ ಉದ್ಯೋಗ ನೀಡುವ ಯೋಜನೆಗೆ ತಮ್ಮ ಸರ್ಕಾರ ಯಾವುದೇ ಮುಂದಿನ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸಿಎಂಗೆ ಪತ್ರ ಬರೆದ ಮಾಜಿ ಸಿಎಂ ಬೊಮ್ಮಾಯಿ

ಅದೇ ರೀತಿ ಕಲಬುರ್ಗಿಯಲ್ಲಿ ಕೇಂದ್ರ ಸರ್ಕಾರ ಪಿಎಂ ಮಿತ್ರ ಯೋಜನೆ ಅಡಿ ಟೆಕ್ಸ್​ಟೈಲ್ ಪಾರ್ಕ್​ಗೆ ಅನುಮೋದನೆ ನೀಡಿದ್ದು, ನಮ್ಮ ಸರ್ಕಾರ‌ ಅದಕ್ಕಾಗಿ ಒಂದು ಸಾವಿರ ಎಕರೆ ಜಮೀನು ಮೀಸಲಿಟ್ಟಿದೆ. ಅದರ ಬಗ್ಗೆ ಕಳೆದ 8 ತಿಂಗಳಲ್ಲಿ ಯಾವುದೇ ಕ್ರಮ ಜರುಗಿಸಿಲ್ಲ. ರಾಯಚೂರಿನಲ್ಲಿ‌ ಉದ್ದೇಶಿತ ಫಾರ್ಮಾ ಪಾರ್ಕ್ ಬಗ್ಗೆಯೂ ಕೂಡ ತಮ್ಮ ಉತ್ತರದಲ್ಲಿ ತಾವು ಪ್ರಸ್ತಾಪಿಸಲಿಲ್ಲ. ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಯ ಸಂಸ್ಕರಣ ಮತ್ತು ಶೀತಲ ಘಟಕ ಸ್ಥಾಪನೆಗೆ ನಮ್ಮ ಸರ್ಕಾರ ಇದ್ದಾಗ 100 ಕೋಟಿ ರೂ. ಮಂಜೂರು ಮಾಡಿದ್ದು, ಈ ಬಗ್ಗೆ ಯಾವುದೇ ಭರವಸೆ ನೀಡದಿರುವುದು ನಿರಾಸೆಯಾಗಿದೆ.

ವಿಜಯಪುರ ವಿಮಾನ ನಿಲ್ದಾಣ ಪೂರ್ಣಗೊಳ್ಳುವ ಹಂತದಲ್ಲಿದ್ದರೂ ಕೂಡ ಈ ವರ್ಷದ ಬಜೆಟ್​ನಲ್ಲಿ ಹಣ ಮೀಸಲಿಡದಿರುವುದು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಾರಕವಾಗುತ್ತದೆ. ಅದೇ ರೀತಿ ಕೊಪ್ಪಳ ಮತ್ತು ರಾಯಚೂರು ವಿಮಾನ‌ನಿಲ್ದಾಣಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಇಟ್ಟ ಹಣ ಪ್ರಯೋಜನ ಪಡೆಯಲು ತಮ್ಮ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕೂಡಲೇ ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಮಾಡುವುದಾಗಿ ತಮ್ಮ ನಾಯಕ ರಾಹುಲ್ ಗಾಂಧಿಯವರು ಘೋಷಣೆ ಮಾಡಿದ್ದರೂ, ತಮ್ಮ ಭಾಷಣದಲ್ಲಿ ಈ ಬಗ್ಗೆ ಹೇಳದಿರುವುದು ತಮ್ಮ ನಾಯಕರ ಹೇಳಿಕೆ ಚುನಾವಣೆಗೆ ಸೀಮಿತವಾದಂತಹ ಘೋಷಣೆ ಮಾತ್ರ ಎಂಬುವ ತೀರ್ಮಾನಕ್ಕೆ ಬಳ್ಳಾರಿ ಜನ ಬರಬೇಕಾಗಿದೆ.

ಉತ್ತರ ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳಾದ ಧಾರವಾಡ- ಬೆಳಗಾವಿ, ಬಾಗಲಕೋಟೆ- ಕುಡಚಿ, ಮುಮಿರಾಬಾದ್ -ಗಿಣಿಗೆರಾ-ರಾಯಚೂರು, ಗದಗ- ವಾಡಿ ಯೋಜನೆಗಳನ್ನು ಮಾಡುವ ಮುಖಾಂತರ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಲು ಸಾಧ್ಯ. ಆದರೆ, ತಮ್ಮ ಸರ್ಕಾರದ ಯಾವುದೇ ಕ್ರಮ ಈ ದಿಕ್ಕಿನಲ್ಲಿ‌ ಕಾಣಿಸುತ್ತಿಲ್ಲ. ಪ್ರವಾಸೋದ್ಯಮಕ್ಕಾಗಿ ಕಲಬುರಗಿ ಹಾಗೂ ಬೀದರ್ ಕೋಟೆ ಅಭಿವೃದ್ಧಿಗೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಇಟ್ಟಂತಹ ಹಣ ತಾವು ಬಳಕೆ ಮಾಡಲು ಸಾಧ್ಯವಾಗಿಲ್ಲ.

ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದ್ದು, ಈ ಬಗ್ಗೆ ನಿಮ್ಮ ಸರ್ಕಾರ ಆಲೋಚನೆ ಮಾಡದಿರುವುದು, ಈ ಭಾಗದ ಪ್ರವಾಸೋದ್ಯಮದ ಅಭಿವೃದ್ಧಿಗೆ ತೋರಿಸುತ್ತಿರುವ ದಿವ್ಯ ನಿರ್ಲಕ್ಷ್ಯವಾಗಿದೆ. ಈಗಾಗಲೇ ನಮ್ಮ ಸರ್ಕಾರದ ಅವಧಿಯಲ್ಲಿ ಹುಬ್ಬಳ್ಳಿ ಪ್ರಾರಂಭವಾಗಿರುವ ಜಯದೇವ ಹೃದ್ರೋಗ ಸಂಸ್ಥೆ ಹಾಗೂ ಬೆಳಗಾವಿಯಲ್ಲಿ ಕಿದ್ವಾಯಿ ಸಂಸ್ಥೆಗಳಿಗೆ ಅನುದಾನ ಘೋಷಣೆ ಮಾಡುತ್ತಾರೆನ್ನುವ ನಿರೀಕ್ಷೆ ಹುಸಿಯಾಗಿದೆ.

ಮಿನಿ ಟೆಕ್ಸ್ ಟೈಲ್ ಪಾರ್ಕ್ ಆರಂಭಿಸಬೇಕು:ಹಾವೇರಿಯಲ್ಲಿ ಮೆಡಿಕಲ್ ಕಾಲೇಜ್ ಆರಂಭಿಸಿದ್ದು, ಅಗತ್ಯ ಹಣ ಬಿಡುಗಡೆ ಮಾಡಬೇಕು. ಹಾವೇರಿ ಮೆಗಾ ಡೈರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ರಾಣೆಬೆನ್ನೂರು ಮಿನಿ ಟೆಕ್ಸ್ ಟೈಲ್ ಪಾರ್ಕ್ ಅನ್ನು ಶೀಘ್ರವೇ ಆರಂಭಿಸಬೇಕು. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ಹಣ ಬಿಡುಗಡೆ ಮಾಡಬೇಕು. ಹಾನಗಲ್ ಬ್ಯಾಡಗಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ಬರುವ ಮುಂಗಾರಿನಲ್ಲಿ ಚಾಲನೆ ನೀಡಬೇಕು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 5000 ಕೋಟಿ ರೂ. ನೀಡುವುದಾಗಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದೀರಿ. ಆದರೆ, ಇದುವರೆಗೂ ಆ ಭಾಗದ ಯಾವುದೇ ಯೋಜನೆಗಳಿಗೆ ಅನುಮೋದನೆ ನೀಡದಿರುವುದು ಹಿಂದುಳಿದ ಭಾಗದ ಬಗ್ಗೆ ನಿಮಗಿರುವ ನಿರ್ಲಕ್ಷ್ಯದ ಧೋರಣೆ ಎತ್ತಿ ತೋರಿಸುತ್ತದೆ.‌

ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ರೀತಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ‌ಮಂಡಳಿ ಸ್ಥಾಪನೆ ಮಾಡಲು ನಮ್ಮ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿತ್ತು. ಈ ಅಧಿವೇಶನದಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ‌ಮಂಡಳಿ ಘೋಷಣೆ ಮಾಡುತ್ತೀರೆಂಬ ನಿರೀಕ್ಷೆಯನ್ನು ಕಿತ್ತೂರು ಕರ್ನಾಟಕ ಭಾಗದ ಜನರು ಹೊಂದಿದ್ದರು. ಈ ವಿಷಯದ ಬಗ್ಗೆಯೂ ತಾವು ದಿವ್ಯ ನಿರ್ಲಕ್ಷ್ಯ ತೋರಿರುವುದು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ನಿಮ್ಮ ಸರ್ಕಾರ ಹೇಗೆ ನಿರ್ಲಕ್ಷ್ಯ ಮಾಡುತ್ತಿದೆ ಎನ್ನುವುದಕ್ಕೆ ತಾಜಾ ಉದಾಹರಣೆಯಾಗಿದೆ ಎಂದು ಟೀಕಿಸಿದ್ದಾರೆ.

ಬಳ್ಳಾರಿ, ರಾಯಚೂರು, ವಿಜಯನಗರ, ಚಿತ್ರದುರ್ಗದ ಗಣಿ ಭಾದಿತ ಜಿಲ್ಲೆಗಳ ಪರಿಸರ ಪುನಶ್ಚೇತನಕ್ಕೆ ಡಿಎಂಎಫ್ (ಡಿಸ್ಟ್ರಿಕ್ಟ್ ಮೈನಿಂಗ್ ಫೌಂಡೇಶನ್‌) ಹಣ ಬಳಕೆ ಮಾಡಲು ಯಾವುದೇ ಯೋಜನೆ ರೂಪಿಸಿಲ್ಲ. ಇದರಿಂದ ಗಣಿ ಭಾದಿತ ನಾಲ್ಕು ಜಿಲ್ಲೆಗಳ ಅಭಿವೃದ್ಧಿಗೆ ಹಿನ್ನಡೆಯಾದಂತಾಗಿದೆ.

ನಮ್ಮ ಅವಧಿಯಲ್ಲಿ ರಾಜ್ಯದಲ್ಲಿ ಹೊಸದಾಗಿ ಏಳು ವಿಶ್ವ ವಿದ್ಯಾಲಯಗಳ ಸ್ಥಾಪನೆ ಮಾಡಲಾಗಿದ್ದು, ಚಾಮರಾಜನಗರ, ಕೊಡಗು, ಹಾಸನ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬೀದರ್, ಹಾವೇರಿ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ನೂತನ ವಿಶ್ವ ವಿದ್ಯಾಲಯಗಳು ಕಾರ್ಯಾರಂಭ ಮಾಡಿವೆ.

ಬಡ ವಿದ್ಯಾರ್ಥಿಗಳಿಗೆ ಅನ್ಯಾಯ : ಆದರೆ, ರಾಜ್ಯ ಸರ್ಕಾರ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ನೂತನ ವಿಶ್ವ ವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪ ಹೇಳಿ ವಿಶ್ವ ವಿದ್ಯಾಲಯಗಳನ್ನು ಮುಚ್ಚಲು ಮುಂದಾಗುತ್ತಿರುವುದು ಹಿಂದುಳಿದ ಜಿಲ್ಲೆಗಳು ಮತ್ತು ಬಡ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ನೂತನ ವಿಶ್ವ ವಿದ್ಯಾಲಯಗಳನ್ನು ಅನುದಾನದ ಕೊರತೆ ನೆಪದಲ್ಲಿ ಮುಚ್ಚುವ ಪ್ರಸ್ತಾಪವನ್ನು ಕೈಬಿಡುವಂತೆ ಪತ್ರದ ಮೂಲಕ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ :ಉದ್ಘಾಟನೆ ಭಾಗ್ಯ ಕಾಣದ ವಿಜಯಪುರ ಮಹಿಳಾ ವಿವಿ ವಸ್ತು ಸಂಗ್ರಹಾಲಯ

ABOUT THE AUTHOR

...view details