ಕರ್ನಾಟಕ

karnataka

ಕೇಂದ್ರದ ಪ್ರತಿಪಕ್ಷ ನಾಯಕರ ಸ್ವಾಗತಕ್ಕೆ ಶಿಷ್ಟಾಚಾರದ ಪ್ರಕಾರ ಅಧಿಕಾರಿಗಳ ನಿಯೋಜನೆ: ಸಿಎಂ

By

Published : Jul 18, 2023, 10:18 PM IST

ಶಿಷ್ಟಾಚಾರದ ಪ್ರಕಾರವೇ ಗಣ್ಯರ ಸ್ವಾಗತಕ್ಕೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿತ್ತೇ ಹೊರತು ರಾಜಕೀಯ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ಬಳಸಿಕೊಂಡಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಯುನೈಟೆಡ್​ ವಿ ಸ್ಟಾಂಡ್​
ಯುನೈಟೆಡ್​ ವಿ ಸ್ಟಾಂಡ್​

ಬೆಂಗಳೂರು: ಬೆಂಗಳೂರಿಗೆ ಆಗಮಿಸಿದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳನ್ನು ರಾಜ್ಯ ಅತಿಥಿಗಳೆಂದು ಪರಿಗಣಿಸಲಾಗಿದ್ದರಿಂದ ಶಿಷ್ಟಾಚಾರದ ಪ್ರಕಾರ ಆ ಎಲ್ಲ ಅತಿಥಿ ಗಣ್ಯರ ಸ್ವಾಗತಕ್ಕೆ ಮಾತ್ರ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.

ರಾಜಕೀಯ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ ಎನ್ನುವ ಪ್ರತಿ ಪಕ್ಷಗಳ ಟೀಕೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿದ್ದಾರೆ. ರಾಜ್ಯಕ್ಕೆ ಆಗಮಿಸಿದ ನಾನಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರುಗಳು ರಾಜ್ಯದ ಅತಿಥಿಗಳಾಗಿದ್ದರು. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಂತೆಯೇ ನಡೆದಿದೆ. ಇಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಬದಲಿಗೆ ಶಿಷ್ಟಾಚಾರದ ಪ್ರಕಾರವೇ ಗಣ್ಯರ ಸ್ವಾಗತಕ್ಕಷ್ಟೇ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತೇ ಹೊರತು, ರಾಜಕೀಯ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ಬಳಸಿಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎಚ್​ ಡಿ ಕುಮಾರಸ್ವಾಮಿ ಟ್ವೀಟ್:ಮಹಾಘಟಬಂಧನ್ ಸಭೆಗೆ ಆಗಮಿಸಿರುವ ಹೊರರಾಜ್ಯದ ರಾಜಕೀಯ ನಾಯಕರ ಆತಿಥ್ಯಕ್ಕೆ ಐಎಎಸ್ ನಿಯೋಜನೆ ಮಾಡಿದ್ದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಆರೋಪಿಸಿದ್ದರು.

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಐಎಎಸ್ ಜೀತ ಪದ್ಧತಿಯನ್ನು ಜಾರಿಗೆ ತಂದು ಕರ್ನಾಟಕದ ಹೆಮ್ಮೆ, ಪರಂಪರೆಗೆ ಘಟಶ್ರಾದ್ಧ ಮಾಡಿದೆ ಎಂದು ಕಿಡಿಕಾರಿದ್ದರು. ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ, ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಕಾಂಗ್ರೆಸ್ ಸರ್ಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದರು.

ಇದು ರಾಜ್ಯ ಸರ್ಕಾರಿ ಕಾರ್ಯಕ್ರಮ ಅಲ್ಲ. ಹೊಸ ಸರ್ಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ. ಇಂತಹ ಸಭೆಗೆ ಬಂದ ರಾಜಕೀಯ ನಾಯಕರಿಗೆ ಆತಿಥ್ಯ ನೀಡಲು ಜವಾಬ್ದಾರಿಯುತ ಅಧಿಕಾರಿಗಳನ್ನು ಕಳಿಸಿದ್ದು, ಆರೂವರೆ ಕೋಟಿ ಕನ್ನಡಿಗರಿಗೆ ಎಸಗಿದ ಘೋರ ಅಪಚಾರ ಹಾಗೂ ರಾಜ್ಯದ ಪಾಲಿಗೆ ಮಹಾ ದುರಂತ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದ್ದರು. ಈ ಆಕ್ರೋಶ ಕೇಳಿ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಪ್ರತಿಕ್ರಿಯೆ ನೀಡಿದ್ದಾರೆ.

ಇಂಡಿಯಾ ಬಗ್ಗೆ ಸಿದ್ದರಾಮಯ್ಯ ಮೆಚ್ಚುಗೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ದ್ವೇಷ, ದಬ್ಬಾಳಿಕೆ, ಸರ್ವಾಧಿಕಾರಿ ಮನಸ್ಥಿತಿಯ ಆಡಳಿತದಿಂದ ನಲುಗಿರುವ ಭಾರತವನ್ನು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಕಟ್ಟಿ ಬೆಳೆಸಲು ಸಮಾನ ಮನಸ್ಕ ಪಕ್ಷಗಳು INDIA (Indian National Developmental Inclusive Alliance) ಎಂಬ ಹೆಸರಿನೊಂದಿಗೆ ಒಮ್ಮತದಿಂದ ಹೋರಾಡಲು ಸಿದ್ಧವಾಗಿವೆ. ಇಂದು ನಾವೆಲ್ಲ ಕೂಡಿ ಹಚ್ಚಿರುವ ಪರಸ್ಪರ ವಿಶ್ವಾಸ ಮತ್ತು ಭರವಸೆಯ ಹಣತೆ ಮುಂದೆ ಇಡೀ ಭಾರತವನ್ನು ಬೆಳಗಲಿದೆ. ಒಗ್ಗಟ್ಟಿನಲ್ಲಿ ಬಲವಿದೆ, ಸತ್ಯಕ್ಕೆ ಜಯವಿದೆ ಎಂದು ಅಭಿಪ್ರಾಯ ಕೊಟ್ಟಿದೆ ಎಂದು ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟ್ಯಾಗ್ ಮಾಡಿದ್ದಾರೆ.

ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಬದ್ಧವಿದೆ: ರೈತರ ಒಳಿತಿಗಾಗಿ ಕೃಷಿಭಾಗ್ಯ ಸೇರಿದಂತೆ ಜಾರಿಗೊಳಿಸಿದ್ದ ಯೋಜನೆಗಳನ್ನು ಹಿಂದಿನ ಸರ್ಕಾರ ರದ್ದುಗೊಳಿಸಿದ್ದು, ಅವುಗಳನ್ನು ಮತ್ತೆ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದ್ದಾರೆ. ರೈತರ ಹಿತ ಕಾಪಾಡುವಲ್ಲಿ ರಾಜ್ಯ ಸರ್ಕಾರ ಬದ್ಧವಿದೆ ಎಂದಿದ್ದಾರೆ.

ಬಿಜೆಪಿ ಸದಸ್ಯ ಗುರ್ಮೆ ಸುರೇಶ್ ಶೆಟ್ಟಿ, ಕಿಸಾನ್ ಸಮ್ಮಾನ್ ಯೋಜನೆ ಸಂಬಂಧ ಗಮನ ಸೆಳೆದಾಗ ಮುಖ್ಯಮಂತ್ರಿಗಳು ಎಲ್ಲಿಯೂ ಯೋಜನೆ ಬಗ್ಗೆ ಹೆಚ್ಚಾಗಿ ಪ್ರಸ್ತಾಪಿಸಲಿಲ್ಲ. ಬದಲಿಗೆ ಕಾಂಗ್ರೆಸ್ ಸರ್ಕಾರ ರೈತರಿಗೆ ಕೈಗೊಂಡಿರುವ ಕ್ರಮ ಕುರಿತು ಮಾಹಿತಿ ನೀಡಿದರು. ಈ ಮೂಲಕ ಪರೋಕ್ಷವಾಗಿ ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಿರುವ ಸುಳಿವು ನೀಡಿದರು. ರಾಜ್ಯದಲ್ಲಿ 87 ಲಕ್ಷ ರೈತ ಕುಟುಂಬಗಳಿದ್ದು, ಕಿಸಾನ್ ಸಮ್ಮಾನ್ ಯೋಜನೆಯು 51 ಲಕ್ಷ ಕುಟುಂಬಗಳಿಗೆ ಮಾತ್ರ ಉಪಯೋಗವಾಗಿದೆ. ಇನ್ನುಳಿದ ರೈತರಿಗೆ ಕೊಟ್ಟಿಲ್ಲ ಎಂದು ಹೇಳಿದರು.

ಆಗ ಬಿಜೆಪಿ ಸದಸ್ಯ ಸುನಿಲ್ ಕುಮಾರ್, ಪರೋಕ್ಷವಾಗಿ ಯೋಜನೆ ನಿಲ್ಲಿಸಲಾಗಿದೆ ಎನ್ನುವ ಬದಲು ನೇರವಾಗಿ ಹೇಳಿ ಎಂದು ಹೇಳಿದರು. ಇದಕ್ಕೆ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಬಂದಾಗ ಕೇಂದ್ರದ ಯೋಜನೆಗೆ ರಾಜ್ಯವು ನಾಲ್ಕು ಸಾವಿರ ರು. ಸೇರಿಸಿ ನೀಡಿದೆ. ಇದು ಎಲ್ಲಾ ರೈತರಿಗೆ ತಲುಪಲು ಸಾಧ್ಯವಾಗಿಲ್ಲ. ಹೀಗಾಗಿ ಬೇರೆ ಕಾರ್ಯಕ್ರಮಗಳು ಮಾಡಿದ್ದೇವೆ ಎಂದರು.

ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುವ ಸಾಲದ ಪ್ರಮಾಣವನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ವರೆಗೆ ಹೆಚ್ಚಿಸಲಾಗಿದೆ. ಶೇ.3 ರ ಬಡ್ಡಿದರದಲ್ಲಿ 15 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ. ಕೃಷಿ ಉಪಕರಣ, ರಸಗೊಬ್ಬರ ವಿತರಣೆ ಸೇರಿದಂತೆ ರೈತರಿಗೆ ಅನುಕೂಲವಾಗಲು ಹಲವು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಸರ್ಕಾರದ ಯೋಜನೆಗಳಿಂದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಗಿಂತ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ:26 ಪ್ರತಿಪಕ್ಷಗಳ 'ಇಂಡಿಯಾ'ದ ಸಭೆಯಲ್ಲಿ ಮಾಡಿದ ದೃಢ ಸಂಕಲ್ಪವೇನು..?

ABOUT THE AUTHOR

...view details