ಕರ್ನಾಟಕ

karnataka

ನರೇಗಾ ಯೋಜನೆಯಲ್ಲಿ ಮಾನವ ದಿನಗಳನ್ನ ಹೆಚ್ಚಿಸಲು ಕೇಂದ್ರಕ್ಕೆ ಮನವಿ: ಡಿಸಿಎಂ ಡಿ ಕೆ ಶಿವಕುಮಾರ್

By ETV Bharat Karnataka Team

Published : Nov 17, 2023, 6:52 PM IST

Updated : Nov 17, 2023, 7:50 PM IST

ಕೇಂದ್ರ ಸರ್ಕಾರಕ್ಕೆ ಹೇಳಿ ನರೇಗಾದ ಮಾನವ ದಿನಗಳನ್ನು ಹೆಚ್ಚಿಸಬೇಕು ಎಂದು ರಾಜ್ಯದ ಎಲ್ಲ ಸಂಸದರ ಬಳಿ ಕೈ ಮುಗಿದು ಕೇಳುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

Etv Bharatdcm-dk-sivakumar-reaction-on-nrega-scheme-work-days-increase
ನರೇಗಾ ಯೋಜನೆಯ ಮಾನವ ದಿನಗಳ ಹೆಚ್ಚಳಕ್ಕೆ ಕೇಂದ್ರಕ್ಕೆ ಮನವಿ: ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ

ಬೆಂಗಳೂರು: "ಬರಗಾಲವಿರುವ ಕಾರಣ ನರೇಗಾ ಯೋಜನೆಯ ಮಾನವ ದಿನಗಳನ್ನು 100 ದಿನಗಳ ಬದಲು 150 ದಿನಗಳಿಗೆ ಏರಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು. ಜಿಕೆವಿಕೆ ಆವರಣದಲ್ಲಿ ನಡೆದ ಕೃಷಿಮೇಳ- 2023ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಕನಕಪುರ ತಾಲೂಕಿನಲ್ಲಿ ಪ್ರತಿ ರೈತರಿಗೂ ನರೇಗಾ ಯೋಜನೆಯ ಲಾಭ ದೊರೆಯುವಂತೆ ಮಾಡಿದ್ದೇನೆ. ಸಾಕಷ್ಟು ಜನ ರೈತರು ಕೊಟ್ಟಿಗೆ ಸೇರಿದಂತೆ ಸಾಕಷ್ಟು ಅನುಕೂಲ ಮಾಡಿಕೊಂಡಿದ್ದಾರೆ. ಇದರಿಂದ ಬಿಜೆಪಿ ಸರ್ಕಾರ ನಮ್ಮ ತಾಲೂಕಿಗೆ ಉತ್ತಮವಾಗಿ ನರೇಗಾ ಯೋಜನೆ ಬಳಸಿಕೊಂಡ ತಾಲೂಕು ಎಂದು ವಿಧಿಯಿಲ್ಲದೇ ಪ್ರಶಸ್ತಿ ನೀಡಬೇಕಾಯಿತು" ಎಂದರು.

ಹೊಸ ಬೆಳೆ ತಳಿಗಳನ್ನು ಪರಿಶೀಲಿಸಿದ ಡಿಸಿಎಂ ಡಿ ಕೆ ಶಿವಕುಮಾರ್​

"ನಾನು ರಾಜ್ಯದ ಎಲ್ಲ ಸಂಸದರಿಗೆ ಮತ್ತು ರೈತರ ಮಕ್ಕಳು ಎಂದು ಹೇಳಿಕೊಂಡು ಬಿಜೆಪಿ ಜೊತೆ ಸೇರಿರುವವರ ಬಳಿ ಕೈ ಮುಗಿದು ಕೇಳುತ್ತೇನೆ, ಇಡೀ ರಾಜ್ಯದ ಇತಿಹಾಸದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿವೆ. ನರೇಗಾ ಯೋಜನೆ ಪ್ರಕಾರ ಬರಗಾಲ ಬಂದಾಗ ಮಾನವ ದಿನಗಳನ್ನು ಹೆಚ್ಚು ಮಾಡಬೇಕು ಎನ್ನುವ ಕಾನೂನಿದೆ. ಇದನ್ನು ಕೇಂದ್ರ ಸರ್ಕಾರಕ್ಕೆ ನೆನಪಿಸಿ, ನಮ್ಮ ರೈತರ ಬದುಕನ್ನು ಹಸನು ಮಾಡಬೇಕು" ಎಂದು ಹೇಳಿದರು.

ಕೃಷಿಮೇಳ- 2023 ದಲ್ಲಿ ಡಿಸಿಎಂ ಶಿವಕುಮಾರ್​ ಭಾಗಿ

ನಮ್ಮ ರೈತರು ಇಡೀ ದೇಶಕ್ಕೆ ಮಾದರಿ: "ನೀರಿನ ಸದ್ಬಳಕೆ ಮತ್ತು ಭೂಮಿಯ ಫಲವತ್ತತೆ ಕಾಪಾಡುವ ಬಗ್ಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ರೈತರು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ. ನಮ್ಮ ರಾಮನಗರದ ರೈತರಿಗಿಂತ ಈ ಭಾಗದ ರೈತರು ಚೆನ್ನಾಗಿ ಜೀವನ ಕಟ್ಟಿಕೊಂಡಿದ್ದಾರೆ. ಈ ಭಾಗದ ರೈತರು ತರಕಾರಿ, ತೋಟಗಾರಿಕಾ ಬೆಳೆ ಸೇರಿದಂತೆ ಸಿಲ್ಕ್ ಮತ್ತು ಮಿಲ್ಕ್ ಕ್ರಾಂತಿಯನ್ನು ಮಾಡಿದ್ದಾರೆ" ಎಂದರು.

ಕೃಷಿಮೇಳದ ವಸ್ತು ಪ್ರದರ್ಶನ ವೀಕ್ಷಿಸಿದ ಡಿಸಿಎಂ

ರೈತರೊಂದಿಗೆ ಮಾತುಕತೆ ನಡೆಸಿದ ಸಿಎಂ:ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳ ಉದ್ಘಾಟನಾ ಸಮಾರಂಭಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳೆ ಪ್ರಾತ್ಯಕ್ಷಿಕೆ ತಾಕುಗಳು ಹಾಗೂ ವಸ್ತು ಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಕೃಷಿ ವಿವಿ ಕುಲಪತಿ ಎಸ್ .ವಿ. ಸುರೇಶ್ ಹಾಗೂ ಕೃಷಿ ವಿಜ್ಞಾನಿಗಳು ರಾಗಿ, ಸೂರ್ಯಕಾಂತಿ, ಸಾಮೆ ಮತ್ತಿತರ ಹೊಸ ತಳಿಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರ ನೀಡಿದರು. ಈ ವೇಳೆ ಕೃಷಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಮತ್ತಿತರರು ಹಾಜರಿದ್ದರು.

ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ, ದಕ್ಷಿಣಕನ್ನಡ, ಮಂಗಳೂರು, ಮಂಡ್ಯ, ಮೈಸೂರು, ಕೋಲಾರ ಸೇರಿದಂತೆ ಬಹುತೇಕ ಜಿಲ್ಲೆಗಳಿಂದ ರೈತರು ಕೃಷಿ ಮೇಳಕ್ಕೆ ಆಗಮಿಸಿದ್ದಾರೆ.

ಇದನ್ನೂ ಓದಿ:ನಾಲ್ಕು ದಿನಗಳ ಕೃಷಿ ಮೇಳ ಉದ್ಘಾಟಿಸಿದ ಸಿಎಂ: ಈ ಬಾರಿಯ ಆಕರ್ಷಣೆಗಳೇನು?

Last Updated :Nov 17, 2023, 7:50 PM IST

ABOUT THE AUTHOR

...view details