ಕರ್ನಾಟಕ

karnataka

ನಾಳೆಯಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ.. ಕೋವಿಡ್ ನಿರ್ಬಂಧವಿದ್ದರೂ ಪಾದಯಾತ್ರೆಗಿಲ್ಲ ಅಡಚಣೆ

By

Published : Feb 26, 2022, 8:53 PM IST

ಫೆ.27ರಿಂದ ರಾಮನಗರದಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭವಾಗಲಿದ್ದು, ಫೆ.28ಕ್ಕೆ ಬಿಡದಿಯಿಂದ ಕೆಂಗೇರಿಗೆ ಬರಲಿದೆ. ಮಾ.1ರಿಂದ 3ರವರೆಗೆ ಬೆಂಗಳೂರು ಭಾಗದಲ್ಲಿ ಸಾಗಲಿದೆ. ಮಾ.3ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಬೃಹತ್ ಸಮಾವೇಶದೊಂದಿಗೆ ಸಮಾರೋಪವಾಗಲಿದೆ.

congress-mekedatu-padayatra-from-tomorrow
ನಾಳೆಯಿಂದ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ

ಬೆಂಗಳೂರು:ಮೇಕೆದಾಟು ಯೋಜನೆ ಜಾರಿಗಾಗಿ ನಾಳೆಯಿಂದ ಕಾಂಗ್ರೆಸ್ ಪಾದಯಾತ್ರೆ ಪುನರಾರಂಭಿಸಲಿದ್ದು, ಐದು ದಿನಗಳ ಕಾಲ ನಡೆಯಲಿದೆ. ಈ ಹಿಂದೆ ಕೋವಿಡ್ ನಿರ್ಬಂಧಗಳ ಮಧ್ಯೆ ನಡೆಸುತ್ತಿದ್ದ ಪಾದಯಾತ್ರೆಯು ಕೋರ್ಟ್ ಆದೇಶದಂತೆ ಮೊಟಕುಗೊಂಡಿತ್ತು. ಆದರೆ, ಇದೀಗ ಕಾಂಗ್ರೆಸ್ ಅದೇ ಕೋವಿಡ್ ನಿರ್ಬಂಧಗಳ ನಡುವೆಯೇ ಮತ್ತೆ ಪಾದಯಾತ್ರೆ ನಡೆಸುತ್ತಿದೆ.

ಜನವರಿಯಲ್ಲಿ ಕೋವಿಡ್ ಅಬ್ಬರದ ಮಧ್ಯೆ ಪಾದಯಾತ್ರೆ ನಡೆಸಿ ಸಾರ್ವಜನಿಕವಾಗಿ ಹಾಗೂ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮೊಟಕುಗೊಳಿಸಿತ್ತು. ಇದೀಗ ಕೋವಿಡ್ ಅಬ್ಬರ ಕಡಿಮೆಯಾಗಿದ್ದು, ಯಾವ ಸ್ಥಳದಿಂದ ಪಾದಯಾತ್ರೆ ಮೊಟಕುಗೊಂಡಿತ್ತೋ ಅಲ್ಲಿಂದಲೇ ಕಾಂಗ್ರೆಸ್ ಪಾದಯಾತ್ರೆಯನ್ನು ಮತ್ತೆ ಆರಂಭಿಸಲಿದೆ.

ಫೆ.27ರಿಂದ ರಾಮನಗರದಿಂದ ಪಾದಯಾತ್ರೆ ಆರಂಭವಾಗಲಿದ್ದು, ಫೆ.28ಕ್ಕೆ ಬಿಡದಿಯಿಂದ ಕೆಂಗೇರಿಗೆ ಬರಲಿದೆ. ಮಾ.1ರಿಂದ 3ರವರೆಗೆ ಬೆಂಗಳೂರು ಭಾಗದಲ್ಲಿ ಸಾಗಲಿದೆ. ಮಾ.3ಕ್ಕೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪಾದಯಾತ್ರೆ ಬೃಹತ್ ಸಮಾವೇಶದೊಂದಿಗೆ ಸಮಾರೋಪವಾಗಲಿದೆ.

ಫೆ.28ವರೆಗೆ ಕೋವಿಡ್ ನಿರ್ಬಂಧ ಮುಂದುವರಿಕೆ: ಬೆಂಗಳೂರು ಸೇರಿ ರಾಜ್ಯದಲ್ಲಿ ಕೋವಿಡ್ ಅಬ್ಬರ ಕಡಿಮೆಯಾಗಿದೆ. ಆದರೆ, ಕೋವಿಡ್ ಮಾರ್ಗಸೂಚಿ ಮಾತ್ರ ಮುಂದುವರೆದಿದೆ. ಫೆ.28ರವರೆಗೆ ಕೋವಿಡ್ ಮಾರ್ಗಸೂಚಿಯನ್ನು ವಿಸ್ತರಿಸಿ ಈಗಾಗಲೇ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಫೆ.15ರಂದು ಕೋವಿಡ್ ನಿರ್ಬಂಧ ಮಾರ್ಗಸೂಚಿ ವಿಸ್ತರಣೆ ಸಂಬಂಧ ಆದೇಶ ಹೊರಡಿಸಿದೆ.

ಅದರಂತೆ ಈಗಲೂ ಎಲ್ಲ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ರ‍್ಯಾಲಿ, ಧರಣಿ, ಸಮಾವೇಶ, ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಕೋವಿಡ್ ಮಾರ್ಗಸೂಚಿಯಲ್ಲಿ ಸಮಾವೇಶ, ಪ್ರತಿಭಟನೆ, ರ‍್ಯಾಲಿಗೆ ನಿರ್ಬಂಧ ಹೇರಲಾಗಿದೆ. ತೆರೆದ ಸ್ಥಳದಲ್ಲಿ 300 ಜನರಿಗೆ ಹಾಗೂ ಮುಚ್ಚಿದ ಸ್ಥಳಗಳಲ್ಲಿ 200 ಜನರಿಗೆ ಮಾತ್ರ ಅವಕಾಶ ಇದೆ. ಈ ನಿರ್ಬಂಧ ಫೆ. 28ರವರೆಗೆ ಮುಂದುವರೆಯಲಿದೆ.

ಇದನ್ನೂ ಓದಿ:ಕಲಬುರಗಿ ಜಿಲ್ಲೆಗೆ ಪ್ರಮೋದ್ ಮುತಾಲಿಕ್‌, ಚೈತ್ರಾ ಕುಂದಾಪುರಗೆ ಪ್ರವೇಶ ನಿರ್ಬಂಧ

ಈ ನಿರ್ಬಂಧದ ಮಧ್ಯೆಯೂ ಕಾಂಗ್ರೆಸ್ ಪಾದಯಾತ್ರೆ ಪುನಾರಂಭಿಸಲಿದೆ. ಜನವರಿಯಲ್ಲಿ ಆರಂಭಿಸಿದ ಪಾದಯಾತ್ರೆ ವೇಳೆ ಕೋವಿಡ್ ಅಬ್ಬರ ಉಲ್ಬಣಿಸಿತ್ತು. ಜೊತೆಗೆ ಕಠಿಣ ಕೋವಿಡ್ ನಿರ್ಬಂಧ ಹೇರಲಾಗಿತ್ತು. ಈ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾವಿರಾರು ಸಂಖ್ಯೆ ಜನ ಜಮಾವಣೆಯೊಂದಿಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಿತ್ತು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇತ್ತ ಸರ್ಕಾರವೂ ಪಾದಯಾತ್ರೆಗೆ ಕಡಿವಾಣ ಹಾಕದೇ ಕೈಕಟ್ಟಿ ಕೂತಿತ್ತು. ಕೊನೆಗೆ ಹೈಕೋರ್ಟ್ ತರಾಟೆ ತೆಗೆದುಕೊಂಡಿತ್ತು. ಬಳಿಕ ಕಾಂಗ್ರೆಸ್ ಪಾದಯಾತ್ರೆ ಅನಿವಾರ್ಯವಾಗಿ ಮೊಟಕುಗೊಳಿಸಿತ್ತು‌.

ಕೋವಿಡ್​ ಮಾರ್ಗಸೂಚಿ ವಿಸ್ತರಣೆ ಪ್ರತಿ

ಈಗ ಕೋವಿಡ್ ಚಿತ್ರಣ ಬದಲಾಗಿದೆ‌. ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆಯಾಗಿದೆ. ಕೋವಿಡ್ ನಿರ್ವಂಧಗಳನ್ನೂ ಸಡಿಲಿಕೆ ಮಾಡಲಾಗಿದೆ. ಆದರೆ, ಸಭೆ ಸಮಾರಂಭ, ಸಮಾವೇಶ, ರ‍್ಯಾಲಿ, ಜಾತ್ರೆಗಳ ಮೇಲಿನ ನಿಷೇಧ ಮುಂದುವರೆದಿದೆ.

ಆದೇಶಕ್ಕೆ ಸೀಮಿತವಾದ ನಿರ್ಬಂಧ:ಈ ಕೋವಿಡ್ ನಿರ್ಬಂಧ ಕೇವಲ ಆದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಅನುಷ್ಠಾನ ಮಾತ್ರ ಸಮರ್ಪಕವಾಗಿ ಆಗಿಲ್ಲ. ಈ ಕೋವಿಡ್ ಮಾರ್ಗಸೂಚಿಗಳ ಪಾಲನೆ ಎಲ್ಲೂ ಕಾಣುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಾದಯಾತ್ರೆಯೂ ಇದಕ್ಕೆ ಹೊರತಾಗಿಲ್ಲ. ನಿರ್ಬಂಧಗಳ ಮಧ್ಯೆಯೂ ಕಾಂಗ್ರೆಸ್ ಪಾದಯಾತ್ರೆ ಸರ್ಕಾರದ ಯಾವುದೇ ಕಠಿಣ ಕ್ರಮಗಳಿಲ್ಲದೇ ಮುಂದುವರೆಯಲಿದೆ.

ಕೋವಿಡ್ ಮಾರ್ಗಸೂಚಿ ಮಧ್ಯೆಯೇ ಬೆಂಗಳೂರಲ್ಲಿ ಹಲವು ರ‍್ಯಾಲಿ, ಸಮಾವೇಶಗಳು ನಡೆದಿವೆ. ಇತ್ತೀಚೆಗೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಬೆಂಗಳೂರಲ್ಲಿ ರೈತರ ರ‍್ಯಾಲಿ ನಡೆದಿತ್ತು. ಫ್ರೀಡಂ ಪಾರ್ಕ್​ನಲ್ಲಿ ಸಮಾವೇಶಗೊಂಡಿದ್ದರು. ಬಳಿಕ ದಲಿತ ಸಮುದಾಯದವರು ಬೃಹತ್ ಪ್ರಮಾಣದಲ್ಲಿ ಬೆಂಗಳೂರಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದ್ದರು. ದಲಿತರ ಆಕ್ರೋಶವನ್ನು ತಣಿಸಲು ಖುದ್ದು ಸಿಎಂ ಬೊಮ್ಮಾಯಿ ಸಮಾವೇಶದ ಸ್ಥಳಕ್ಕೆ ಹೋಗಿದ್ದರು.

ಇದನ್ನೂ ಓದಿ:ಉಕ್ರೇನ್‌ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಕರೆ ತರಲು ಮುಂಜಾಗ್ರತೆ ವಹಿಸದಿರುವುದು ಕೇಂದ್ರ ಸರ್ಕಾರದ ಬೇಜಾವಾಬ್ದಾರಿತನ : ಸಿದ್ದರಾಮಯ್ಯ

ಅಂಗನವಾಡಿ ಕಾರ್ಯಕರ್ತೆಯರೂ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಕೈ ಗುಡ್ ನಿರ್ಬಂಧ ಕೇವಲ ಕಾಗದದ ಮೇಲಿನ ಆದೇಶವಾಗಿಯೇ ಉಳಿದಿದೆ ಹೊರತು ಅದರ ಪಾಲನೆ ಯಾರೂ ಮಾಡುತ್ತಿಲ್ಲ. ಜೊತೆಗೆ ಅದರ ಕಟ್ಟುನಿಟ್ಟಿನ ಜಾರಿಗೆ ಸರ್ಕಾರವೂ ಮನಸ್ಸು ತೋರುತ್ತಿಲ್ಲ‌. ಹೀಗಾಗಿ ಕಾಂಗ್ರೆಸ್​​ನ ಎರಡನೇ ಸುತ್ತಿನ ಪಾದಯಾತ್ರೆಗೂ ಕೋವಿಡ್ ನಿಯಮಗಳ ಯಾವುದೇ ಅಡಚಣೆ ಇರುವುದಿಲ್ಲ.

ABOUT THE AUTHOR

...view details