ಕರ್ನಾಟಕ

karnataka

ಪ್ರತೀಕಾರದ ಬಜೆಟ್ ಎಂದು ನಳಿನ್‍ ಕುಮಾರ್ ಕಟೀಲ್ ಟೀಕೆ.. ಬಜೆಟ್​ ಬಗ್ಗೆ ಸಿಟಿ ರವಿ ಮಾತನಾಡಿದ್ದೇನು?

By

Published : Jul 7, 2023, 7:13 PM IST

ಚುನಾವಣಾ ಗ್ಯಾರಂಟಿ ಅನುಷ್ಠಾನಕ್ಕಾಗಿ ಸಾಲ ಮಾಡುವಂತಹ ದಯನೀಯ ಸ್ಥಿತಿಗೆ ಸರ್ಕಾರ ತೆಗೆದುಕೊಂಡು ಹೋಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

bjp-leaders-reaction-on-cm-siddaramaiah-budget
ಪ್ರತೀಕಾರದ ಬಜೆಟ್ ಎಂದು ನಳಿನ್‍ ಕುಮಾರ್ ಕಟೀಲ್ ಟೀಕೆ.. ಬಜೆಟ್​ ಬಗ್ಗೆ ಇನ್ನಿತರ ನಾಯಕರು ಹೇಳಿದ್ದೇನು?

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಒಂದು ರೀತಿ ಪ್ರತೀಕಾರದ ಬಜೆಟ್. ಈ ಬಜೆಟ್ ರಾಜ್ಯ ಸರ್ಕಾರದ್ದೇ ಆದರೂ ಕೇಂದ್ರ ಬಿಜೆಪಿ ಸರ್ಕಾರವನ್ನು ಗುರಿ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಕಟೀಲ್, ಇದೊಂದು ನಿರಾಶಾದಾಯಕ, ಪ್ರಗತಿಹೀನ ಬಜೆಟ್ ಎಂದಿದ್ದಾರೆ.

ಮುಂದಿನ ಚುನಾವಣೆ ದೃಷ್ಟಿಯಿಂದ ರಾಜಕೀಯ ಸಂಘರ್ಷದ ವೇದಿಕೆಯಾಗಿ ಈ ಬಜೆಟ್​​ ಅನ್ನು ಬಳಸಿಕೊಂಡಿರುವುದು ಕಾಣಿಸಿದೆ. ರಾಜ್ಯದ ಪ್ರಗತಿಗೆ ಪೂರಕ ಅಂಶಗಳು ಈ ಬಜೆಟ್‍ನಲ್ಲಿ ಇಲ್ಲವೇ ಇಲ್ಲ. ತಮ್ಮ ಚುನಾವಣಾ ಗೆಲುವಿಗೆ ಬೇಕಾದ ಗ್ಯಾರಂಟಿ ಮೂಲಕ ಏನೇನು ವಾಗ್ದಾನ ನೀಡಿದ್ದರೋ ಅದರ ಅನುಷ್ಠಾನಕ್ಕೆ ಕರ್ನಾಟಕದ ಗರಿಷ್ಠ ತೆರಿಗೆ ಹಣ ಮೀಸಲಿಡುವ ಥರ ಆಗಿದೆ ಎಂದು ವಿಶ್ಲೇಷಿಸಿದ್ದಾರೆ.

ಕರ್ನಾಟಕವು ಹಿಂದೊಮ್ಮೆ ಕೋವಿಡ್ ನಿರ್ವಹಣೆ ಸೇರಿ ಅಭಿವೃದ್ಧಿಗಾಗಿ ಹೂಡಿಕೆಗೆ ಸಾಲ ತೆಗೆದುಕೊಂಡದಿದ್ದಿದೆ. ಆದರೆ, ಇಲ್ಲಿ ಚುನಾವಣಾ ಗ್ಯಾರಂಟಿ ಅನುಷ್ಠಾನಕ್ಕಾಗಿ ಸಾಲ ಮಾಡುವಂತಹ ದಯನೀಯ ಸ್ಥಿತಿಗೆ ಸರ್ಕಾರ ತೆಗೆದುಕೊಂಡು ಹೋಗಿದೆ. ಇದರಡಿ ಅಭಿವೃದ್ಧಿಯ ಯಾವುದೇ ಮುನ್ನೋಟಗಳು ಕಾಣುತ್ತಿಲ್ಲ. ಭವಿಷ್ಯದ ಭಾರತ ನಿರ್ಮಾಣದ ಯಾವ ಭೂಮಿಕೆಯೂ ಈ ಬಜೆಟ್‍ನಲ್ಲಿ ಕಾಣುತ್ತಿಲ್ಲ ಎಂದು ವಿವರಿಸಿದ್ದಾರೆ.

ಹೊಸ ಸಂಪ್ರದಾಯ ಹುಟ್ಟುಹಾಕಿದ ಸಿದ್ದರಾಮಯ್ಯ: ಸಿಎಂ ಸಿದ್ದರಾಮಯ್ಯ ಬಜೆಟ್ ಪುಸ್ತಕದಲ್ಲಿ‌ ಹೊಸ ಸಂಪ್ರದಾಯವನ್ನು ತುರುಕಿದ್ದಾರೆ. ಹಿಂದಿನ‌ ಸರ್ಕಾರ ಹಾಗೂ‌‌ ಕೇಂದ್ರ ಸರ್ಕಾರದ ನಿಂದನೆಗೆ ನೀಡಿದಷ್ಟು ಸ್ಥಳಾವಕಾಶವನ್ನು ಹೊಸ ಯೋಜನೆಗಳ ಪ್ರಕಟಣೆಗೆ ನೀಡಿಲ್ಲ. ಈ ಬಜೆಟ್ ನಲ್ಲಿ ಆರ್ಥಿಕ ಮುನ್ನೋಟಕ್ಕಿಂತ ರಾಜಕೀಯ ಹಿನ್ನೋಟವೇ ಜಾಸ್ತಿ ಇದೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಬಜೆಟ್ ಟೀಕಿಸಿದ್ದಾರೆ.

ತೆರಿಗೆ ಪ್ರಸ್ತಾಪವಂತೂ ಭವಿಷ್ಯದಲ್ಲಿ " ಸಿದ್ದು ಟ್ಯಾಕ್ಸ್ " ಎಂದೇ ಲೋಕವಿಖ್ಯಾತಿಯಾಗುವ ಅಪಾಯ ಇದೆ. ಅಬಕಾರಿಯೊಂದನ್ನು ಹೊರತುಪಡಿಸಿ ಇನ್ಯಾವ ವಿಭಾಗದಲ್ಲೂ ತೆರಿಗೆ ಹೆಚ್ಚಳದ ಪ್ರಮಾಣ ನಮೂದಿಸಿಲ್ಲ. ಭವಿಷ್ಯದಲ್ಲಿ ನಾಗರಿಕರ ಜೇಬಿಗೆ ಕತ್ತರಿಯ ಬದಲು ಗರಗಸವನ್ನೇ ಹಾಕುವ ಸಾಧ್ಯತೆ ಹೆಚ್ಚಿದೆ. ಒಟ್ಟಾರೆ ಸಿದ್ದರಾಮಯ್ಯ ಬೆಳಕೇ ಇಲ್ಲದ ಕನಸು ಕಾಣುವುದಕ್ಕೂ ಅನರ್ಹವಾದ ಕತ್ತಲೆಯ ಹಾದಿಗೆ ರಾಜ್ಯದ ಜನರನ್ನು ಎಳೆದೊಯ್ಯುವ ಪ್ರಯತ್ನವನ್ನು ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ಗ್ಯಾರಂಟಿಗಳು ಐದು ವರ್ಷಗಳಲ್ಲಿ ಜಾರಿಯಾಗುವುದು ಅನುಮಾನ:ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌, ಬಯಲುಸೀಮೆಯ ಜಿಲ್ಲೆಗಳ ವಿಚಾರದಲ್ಲಿ ತೀವ್ರ ಅಸಡ್ಡೆ ಹೊಂದಿದ್ದು, ನಾನು ಕೂಡ ಸೇರಿದಂತೆ ಈ ಭಾಗದ ಜನರಿಗೆ ಬಹಳ ನಿರಾಶೆಯಾಗಿದೆ. ಬಯಲುಸೀಮೆಗೆ ಯಾವುದೇ ಅಭಿವೃದ್ಧಿಯ ಗ್ಯಾರಂಟಿಯನ್ನು ಸರ್ಕಾರ ನೀಡಿಲ್ಲ. ಅಲ್ಲದೆ ಜನರಿಗೆ ಕೊಟ್ಟ ಮಾತಿನಂತೆ ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಲಾಗದೇ ಅಸಹಾಯಕರಾಗಿರುವ ಸಿಎಂ ಸಿದ್ದರಾಮಯ್ಯ ತಮ್ಮ ವೈಫಲ್ಯವನ್ನು ಮರೆಮಾಚಲು ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಬಜೆಟ್‌ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸುಧಾಕರ್, ಚಿಕ್ಕಬಳ್ಳಾಪುರ ಹಾಗೂ ಕೋಲಾರದ ನೀರಿನ ಬವಣೆ ನೀಗಿಸಲು ಎತ್ತಿನಹೊಳೆ ಯೋಜನೆ ಜಾರಿಗೆ ಜನರು ಕಾಯುತ್ತಿದ್ದಾರೆ. ಈ ಯೋಜನೆಯ ಭೂ ಸ್ವಾಧೀನದ ಬಗ್ಗೆ ಹೇಳಿದ್ದಾರೆಯೇ ಹೊರತು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಆದ್ದರಿಂದ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಈ ಯೋಜನೆ ಎರಡು ವರ್ಷಗಳಲ್ಲಿ ಅಲ್ಲ, ಐದು ವರ್ಷಗಳಲ್ಲೂ ಜಾರಿಯಾಗುವುದು ಅನುಮಾನ ಎಂದರು.

ಮಧ್ಯಮ ವರ್ಗದವರನ್ನು ಶೋಷಿಸುವ ಬಜೆಟ್ ಇದೆಂಬಂತೆ ಕಾಣುತ್ತಿದೆ:ಸುಂಕಗಳನ್ನು ಹೆಚ್ಚಿಸುವ ಮೂಲಕ ಮಧ್ಯಮ ವರ್ಗದವರನ್ನು ಶೋಷಿಸುವ ಬಜೆಟ್ ಇದೆಂಬಂತೆ ಕಾಣುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀಡುವವರನ್ನು ಬೇಡುವಂತೆ ಮಾಡುವುದು ಇವರ ಉದ್ದೇಶ ಇದ್ದಂತಿದೆ. ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಸಾಲ ಮಾಡಿಯಾದರೂ ತುಪ್ಪ ತಿನ್ನು ಎಂಬಂತೆ, ನಾಳೆ ಬಗ್ಗೆ, ಕರ್ನಾಟಕದ ಭವಿಷ್ಯದ ಬಗ್ಗೆ ಯಾವುದೇ ದೂರದೃಷ್ಟಿಯ ಚಿಂತನೆ ಇಲ್ಲದ, ಸಂಸತ್ ಚುನಾವಣೆಯಲ್ಲಿ ಏನಾದರೂ ಮಾಡಿ ಗೆಲ್ಲಬೇಕೆಂಬ ಯೋಚನೆಯ ಬಜೆಟ್ ಮಂಡಿಸಿದ್ದಾರೆ ಎಂದು ವಿಶ್ಲೇಷಿಸಿದರು.

ಸಿದ್ದರಾಮಯ್ಯ ಬಜೆಟ್ ಈವರೆಗಿನ ಅತ್ಯಂತ ದುರ್ಬಲ ಬಜೆಟ್: ’’ಇದ್ದ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲಾಗದೇ ವಿಲವಿಲ ಒದ್ದಾಡುತ್ತಿರುವ ಕಾಂಗ್ರೆಸ್, ತೆರಿಗೆ ಭಾರವನ್ನು ರಾಜ್ಯದ ಜನರ ಮೇಲೆ ಹಾಕುವುದರ ಮೂಲಕ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ಮಾಜಿ ಸಚಿವ ಪ್ರಭು ಚವ್ಹಾಣ್​ ಹೇಳಿದ್ದಾರೆ. 14ನೇ ಬಾರಿಗೆ ದಾಖಲೆಯ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಬಜೆಟ್ ಈವರೆಗಿನ ಅತ್ಯಂತ ದುರ್ಬಲ ಬಜೆಟ್ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ:ಸಿದ್ದು ಮಂಡಿಸಿದ್ದು ರಿವರ್ಸ್ ಗೇರ್ ಬಜೆಟ್, ಜನವಿರೋಧಿ ಎಂದ ಬಸವರಾಜ ಬೊಮ್ಮಾಯಿ..!

ABOUT THE AUTHOR

...view details