ಕರ್ನಾಟಕ

karnataka

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಜನರ ಹಿತ ಕಾಯಲಿ, ನಮ್ಮ ಸಹಕಾರವಿದೆ: ಬೊಮ್ಮಾಯಿ

By

Published : Aug 21, 2023, 5:57 PM IST

Updated : Aug 21, 2023, 6:42 PM IST

ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ನಾವು ಪ್ರತಿಪಕ್ಷವಾಗಿ ಎಲ್ಲ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Etv Bharatbasavaraja-bommai-reaction-on-cauvery-issue
ಕಾವೇರಿ ವಿಷಯದಲ್ಲಿ ರಾಜ್ಯ ಸರ್ಕಾರ ಜನರ ಹಿತ ಕಾಯಲಿ, ನಾವು ಸಹಕಾರ ಕೊಡುತ್ತೇವೆ - ಬಸವರಾಜ ಬೊಮ್ಮಾಯಿ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: "ಕಾವೇರಿ ನೀರಿನ ವಿಷಯದಲ್ಲಿ ರಾಜ್ಯ ಸರ್ಕಾರ ರಾಜ್ಯದ ಜನರು ಹಾಗೂ ರೈತರ ಹಿತ ಕಾಪಾಡಲಿ, ನಾವು ಅವರಿಗೆ ಸಹಕಾರ ನೀಡುತ್ತೇವೆ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕಾವೇರಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂ ಕೋರ್ಟ್ ಹೊಸ ಪೀಠ ರಚನೆ ಮಾಡಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದರು.

"ಈಗಾಗಲೇ ಟ್ರಿಬ್ಯುನಲ್ ಆದೇಶ ಬಂದು ಒಂದು ವ್ಯವಸ್ಥೆ ಇರುವ ಸಂದರ್ಭದಲ್ಲಿ ಈಗಿರುವ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಒಂದೆಡೆ ನೀರು ಬಿಡುತ್ತದೆ ಮತ್ತೊಂದೆಡೆ ವಾದ ಮಾಡುತ್ತಾರೆ. ಸುಪ್ರೀಂ ಕೋರ್ಟ್​ನಲ್ಲಿ ಕಾನೂನಾತ್ಮಕವಾಗಿ ಹೋರಾಟ ಮಾಡಲು ಪ್ರಯತ್ನ ಮಾಡಬೇಕು‌. ನಾವು ವಿರೋಧ ಪಕ್ಷವಾಗಿ ಎಲ್ಲ ರೀತಿಯ ಸಹಕಾರ ನೀಡಲು ಸಿದ್ದರಿದ್ದೇವೆ. ಮಂಡ್ಯ, ಮೈಸೂರು ಭಾಗದ ರೈತರು ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಇಡೀ ವರ್ಷ ನೀರಿನ ಕೊರತೆ ನಿರ್ವಹಣೆ ಮಾಡಬೇಕಿದೆ. ರಾಜ್ಯದ ರೈತರ ಕೂಗಿಗೆ ಸ್ಪಂದಿಸುವ ಕೆಲಸ ಮಾಡಬೇಕು" ಎಂದು ಹೇಳಿದರು.

ಬಿಜೆಪಿ, ಜೆಡಿಎಸ್‌ನವರಿಗೆ ಉತ್ತರ ಕೊಡಬೇಕಿಲ್ಲ ಎಂಬ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ನೀರಾವರಿ ಸಚಿವರಾದ ಡಿ‌.ಕೆ.ಶಿವಕುಮಾರ್ ಅವರು, ರಾಜ್ಯದ ಜನತೆಗೆ, ರೈತರಿಗೆ, ಬೆಂಗಳೂರಿನ ಜನತೆಗೆ ಉತ್ತರ ಕೊಡಲಿ. ನಾವು ವಿರೋಧ ಪಕ್ಷವಾಗಿ ನಮ್ಮ ಅಭಿಪ್ರಾಯ ಹೇಳಿದ್ದೇವೆ. ರೈತರನ್ನು ಕೋರ್ಟ್​ಗೆ ಹೋಗಿ ಎಂದರೆ ಹೇಗೆ?. ಅವರು ರಾಜ್ಯದ ಜನರ ಹಿತ ಕಾಯಲಿ ನಾವು ಅವರಿಗೆ ಸಹಕಾರ ನೀಡುತ್ತೇವೆ" ಎಂದು ತಿಳಿಸಿದರು.

ಇದನ್ನೂ ಓದಿ:ಕಾವೇರಿ ನದಿ ನೀರು ಹಂಚಿಕೆ ವಿವಾದ: ಹೊಸ ಪೀಠ ರಚನೆಗೆ ಸುಪ್ರೀಂಕೋರ್ಟ್​ ಒಪ್ಪಿಗೆ, ಕರ್ನಾಟಕದಿಂದ ಇಂದೇ ಮೇಲ್ಮನವಿ ಸಲ್ಲಿಕೆ

ಕಾವೇರಿ ವಿಚಾರವಾಗಿ ಬಿಜೆಪಿ ರಾಜಕೀಯ:ಮತ್ತೊಂದೆಡೆ, ಕಾವೇರಿ ನದಿ ನೀರಿನ ವಿಚಾರವಾಗಿ ಮೈಸೂರಿನಲ್ಲಿ ಸಚಿವ ಹೆಚ್.​ಸಿ.ಮಹದೇವಪ್ಪ ಮಾತನಾಡಿ, ಕಾವೇರಿ ನದಿ ನೀರಿನ ವಿಚಾರದಲ್ಲಿ ಬಿಜೆಪಿಯವರು ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದ್ದಾರೆ. ಅಧಿಕಾರದಲ್ಲಿದ್ದಾಗ ನೀವು ಸಹ ನೀರನ್ನು ಬಿಟ್ಟಿದ್ದೀರಿ, ಈಗ ನೀವು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಕಾವೇರಿ ಕರ್ನಾಟಕದ ಉಸಿರಾಗಿದೆ. ನೂರಾರು ವರ್ಷಗಳಿಂದ, ಮದ್ರಾಸ್ ಪ್ರಾಂತ್ಯ ಇದ್ದಾಗಿನನಿಂದಲೂ ನಮಗೂ ತಮಿಳುನಾಡಿಗೂ ವ್ಯಾಜ್ಯ ನಡೆಯುತ್ತಲೇ ಇದೆ" ಎಂದರು.

"ಸುಪ್ರೀಂ ಕೋರ್ಟ್​ನ ಆದೇಶದ ಮೇರೆಗೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ. ಯಾರಿಗೆ ಎಷ್ಟೆಷ್ಟು ನೀರು ಹಂಚಿಕೆ ಆಗಬೇಕೆಂಬುದು ತೀರ್ಮಾನ ಮಾದಲೇ ಆಗಿದೆ‌. ಕೋರ್ಟ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಬರದ ಪರಿಸ್ಥಿತಿಯಲ್ಲಿ ಎಲ್ಲರೂ ಸಂಕಷ್ಟವನ್ನು ಹಂಚಿಕೊಳ್ಳಬೇಕಿದೆ. ಈ ಬಾರಿ ಕಡಿಮೆ ಮಳೆ ಬಿದ್ದಿದೆ, ನಮ್ಮ ಜಲಾಶಯಗಳಲ್ಲಿ ನೀರಿನ ಸಂಗ್ರಹ ತೀರಾ ಕಡಿಮೆ ಇದೆ. ಕಟ್ಟು ಮಾದರಿಯಲ್ಲಿ ನೀರು ನೀಡಬೇಕೆಂದು ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ" ಎಂದು ಹೇಳಿದರು.

Last Updated :Aug 21, 2023, 6:42 PM IST

ABOUT THE AUTHOR

...view details