ಕರ್ನಾಟಕ

karnataka

ಗಬ್ಬಾ ಕೋಟೆ ಭೇದಿಸಿ ಆಸೀಸ್‌ ಬಗ್ಗುಬಡಿದ ಭಾರತ: ಐತಿಹಾಸಿಕ ಗೆಲುವಿಗೆ 3 ವರ್ಷ

By ETV Bharat Karnataka Team

Published : Jan 19, 2024, 1:30 PM IST

Team India Gabba Test win: ಮೂರು ವರ್ಷಗಳ ಹಿಂದೆ ಅಂದರೆ 2021ರಲ್ಲಿ ಬ್ರಿಸ್ಬೇನ್‌ನ ಗಬ್ಬಾ ಮೈದಾನದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿತ್ತು. ಈ ಮೂಲಕ ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲೇ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.

On This Day  India breaches Gabba  historic Test against Australia  ಐತಿಹಾಸಿಕ ಗೆಲುವಿಗೆ ಮೂರು ವರ್ಷ  ಬಿಸಿಸಿಐ ವಿಶೇಷ ಟ್ವೀಟ್
ಬಿಸಿಸಿಐ ವಿಶೇಷ ಟ್ವೀಟ್

ಹೈದರಾಬಾದ್​:ಜನವರಿ 19 (ಇಂದು) ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಿನ. 2021ರ ಇದೇ ದಿನ ಅಜಿಂಕ್ಯ ರಹಾನೆ ನಾಯಕತ್ವದ ಭಾರತ ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮೂರು ವಿಕೆಟ್‌ಗಳಿಂದ ಬಗ್ಗು ಬಡಿದಿತ್ತು. 32 ವರ್ಷಗಳ ನಂತರ ಆಸ್ಟ್ರೇಲಿಯಾ ಗಬ್ಬಾದಲ್ಲಿ ಸೋಲು ಅನುಭವಿಸಿತ್ತು. ಈ ಅವಿಸ್ಮರಣೀಯ ಗೆಲುವಿನೊಂದಿಗೆ ಭಾರತ ಸತತ ಎರಡನೇ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲೇ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಗಬ್ಬಾದಲ್ಲಿ ನಡೆದ ಆ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲು 328 ರನ್‌ಗಳ ಕಠಿಣ ಗುರಿ ಇತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ನಾಲ್ಕು ರನ್ ಗಳಿಸಿತ್ತು. ಅಂದರೆ ಕೊನೆಯ ದಿನ ಗೆಲ್ಲಲು ಇನ್ನೂ 324 ರನ್ ಗಳಿಸಬೇಕಿತ್ತು. ಹೀಗಿರುವಾಗ ಪಂದ್ಯ ಆಸ್ಟ್ರೇಲಿಯಾ ಪರ ಹೋಗುತ್ತದೆ ಅಥವಾ ಡ್ರಾದಲ್ಲಿ ಕೊನೆಗೊಳ್ಳುತ್ತದೆ ಎಂದೇ ಎಲ್ಲರೂ ಊಹಿಸಿದ್ದರು. ಆದರೆ ಐದನೇ ದಿನ ಭಾರತ ಬ್ಯಾಟರ್‌​ಗಳು ಏಕದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಆಸ್ಟ್ರೇಲಿಯಾವನ್ನು ಕಂಗೆಡಿಸಿದರು.

ಐದನೇ ದಿನಾರಂಭದಲ್ಲಿ ತಂಡ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಶುಭಮನ್ ಗಿಲ್ ಮತ್ತು ಚೇತೇಶ್ವರ ಪೂಜಾರ (56 ರನ್) ಕ್ರೀಸ್‌ನಲ್ಲಿ ನೆಲೆಯೂರಿದರು. ಗಿಲ್ ಮತ್ತು ಪೂಜಾರ ಎರಡನೇ ವಿಕೆಟ್‌ಗೆ 114 ರನ್‌ಗಳ ಜೊತೆಯಾಟ ನೀಡಿದರು. ಗಿಲ್ ವಿಶೇಷವಾಗಿ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಬೆಂಡೆತ್ತಿದರು. ಶಾರ್ಟ್ ಪಿಚ್ ಬಾಲ್ ಮತ್ತು ಪುಲ್ ಶಾಟ್‌ಗಳನ್ನು ಹೊಡೆಯುವ ಮೂಲಕ ಗಮನ ಸೆಳೆದರು. ಆಗ ಗಿಲ್‌ಗೆ ಕೇವಲ 21 ವರ್ಷ ವಯಸ್ಸಾಗಿತ್ತು. ಆದರೆ ಆ ಇನ್ನಿಂಗ್ಸ್‌ನಲ್ಲಿ ಅವರ ಹೊಡೆತಗಳು ಓರ್ವ ಅನುಭವಿ ಬ್ಯಾಟರ್‌ ಬ್ಯಾಟಿಂಗ್ ಮಾಡುತ್ತಿರುವಂತೆ ಕಾಣುತ್ತಿತ್ತು.

ಗಿಲ್ 146 ಎಸೆತಗಳಲ್ಲಿ 91 ರನ್ ಗಳಿಸಿದರು. ಗಿಲ್ ಇನ್ನಿಂಗ್ಸ್ ಆಸ್ಟ್ರೇಲಿಯಾ ತಂಡವನ್ನು ಹಿಮ್ಮೆಟ್ಟಿಸಿತು. ನಂತರ ರಿಷಬ್ ಪಂತ್ ಜವಾಬ್ದಾರಿ ವಹಿಸಿಕೊಂಡು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಪಂತ್ 138 ಎಸೆತಗಳಲ್ಲಿ ಒಂಬತ್ತು ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ ಅಜೇಯ 89 ರನ್ ಗಳಿಸಿದ್ದರು.

ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರ 108 ರನ್‌ಗಳ ನೆರವಿನಿಂದ 369 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ 336 ರನ್ ಗಳಿಸಿತ್ತು. ಶಾರ್ದೂಲ್ ಠಾಕೂರ್ 67 ರನ್ ಮತ್ತು ವಾಷಿಂಗ್ಟನ್ ಸುಂದರ್ 62 ರನ್ ಗಳಿಸಿದರು. ಈ ವೇಳೆ ಇಬ್ಬರೂ ಏಳನೇ ವಿಕೆಟ್‌ಗೆ 123 ರನ್‌ಗಳ ಜೊತೆಯಾಟವಾಡಿದರು. ನಂತರ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 294 ರನ್ ಗಳಿಸಿತ್ತು. ಸ್ಟೀವ್ ಸ್ಮಿತ್ 55 ಮತ್ತು ಡೇವಿಡ್ ವಾರ್ನರ್ 48 ರನ್ ಗಳಿಸಿದರು. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ 5 ಮತ್ತು ಶಾರ್ದೂಲ್ ಠಾಕೂರ್ 4 ವಿಕೆಟ್ ಪಡೆದರು. ಈ ಮೂಲಕ ಮೊದಲ ಇನಿಂಗ್ಸ್ ಮುನ್ನಡೆ ಆಧಾರದ ಮೇಲೆ ಆಸ್ಟ್ರೇಲಿಯಾ ಭಾರತಕ್ಕೆ 328 ರನ್ ಗಳ ಗೆಲುವಿನ ಗುರಿ ನೀಡಿತ್ತು.

ಭಾರತ ಈಗ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಮತ್ತು ವಿದೇಶದಲ್ಲಿ ಉತ್ತಮವಾಗಿ ಆಡುತ್ತಿದೆ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸತತ ನಾಲ್ಕು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿರುವುದು ಗಮನಾರ್ಹ.

ಕಳೆದ ನಾಲ್ಕು ಬಾರ್ಡರ್-ಗವಾಸ್ಕರ್ ಸರಣಿಯ ಫಲಿತಾಂಶ:

  • 2022/23: ಭಾರತ ತಂಡವು 2-1 ರಿಂದ ಸರಣಿ ಗೆದ್ದುಕೊಂಡಿತು (ಭಾರತದಲ್ಲಿ 4 ಟೆಸ್ಟ್‌ಗಳು)
  • 2020/21: ಭಾರತ ತಂಡವು 2-1 ರಿಂದ ಸರಣಿ ಗೆದ್ದುಕೊಂಡಿತು (4 ಟೆಸ್ಟ್‌, ಆಸ್ಟ್ರೇಲಿಯಾದಲ್ಲಿ)
  • 2018/19: ಭಾರತ ತಂಡ 2-1 ರಿಂದ ಸರಣಿ ಗೆದ್ದುಕೊಂಡಿತು (4 ಟೆಸ್ಟ್, ಆಸ್ಟ್ರೇಲಿಯಾದಲ್ಲಿ)
  • 2016/17: ಭಾರತ ತಂಡವು 2-1 ರಿಂದ ಸರಣಿ ಗೆದ್ದುಕೊಂಡಿತು (4 ಟೆಸ್ಟ್, ಭಾರತದಲ್ಲಿ)

ಇದನ್ನೂ ಓದಿ:ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಭಾರತದ ಬ್ಯಾಟರ್​ ಸೂರ್ಯಕುಮಾರ್​ ಯಾದವ್​

ABOUT THE AUTHOR

...view details