ಕರ್ನಾಟಕ

karnataka

PM Modi in Egypt: ಈಜಿಪ್ಟ್‌ನ ಐತಿಹಾಸಿಕ ಅಲ್ - ಹಕೀಮ್ ಮಸೀದಿಗೆ ಪ್ರಧಾನಿ ಮೋದಿ ಭೇಟಿ

By

Published : Jun 25, 2023, 4:15 PM IST

ಈಜಿಪ್ಟ್‌ನ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

PM Modi conferred with Egypts highest state honour Order of the Nile award
ಪ್ರಧಾನಿಗೆ ಈಜಿಪ್ಟ್‌ನ ಅತ್ಯುನ್ನತ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿ ಪ್ರದಾನ: ಐತಿಹಾಸಿಕ ಮಸೀದಿಗೆ ಮೋದಿ ಭೇಟಿ

ಕೈರೋ (ಈಜಿಪ್ಟ್​): ಈಜಿಪ್ಟ್​​ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಜಿಪ್ಟ್‌ನ ಅತ್ಯುನ್ನತ ಗೌರವವಾದ ಆರ್ಡರ್ ಆಫ್ ದಿ ನೈಲ್ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ರಾಜಧಾನಿ ಕೈರೋದಲ್ಲಿ ಈಜಿಪ್ಟ್​​ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್​ಸಿಸಿ ಅವರು ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ಗೌರವವನ್ನು ಪ್ರದಾನ ಮಾಡಿದರು.

ಶನಿವಾರದಿಂದ ಪ್ರಧಾನಿ ಮೋದಿ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಇಂದು ಮೋದಿ ಅವರಿಗೆ ಅತ್ಯುನ್ನತ ಪ್ರಶಸ್ತಿ ವಿತರಿಸಲಾಯಿತು. ಆರ್ಡರ್ ಆಫ್ ದಿ ನೈಲ್​ ಪ್ರಶಸ್ತಿಯನ್ನು 1915ರಲ್ಲಿ ಈಜಿಪ್ಟ್‌ನ ಸುಲ್ತಾನ್ ಹುಸೇನ್ ಕಮೆಲ್ ದೇಶಕ್ಕಾಗಿ ಉನ್ನತ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸಲೆಂದು ಸ್ಥಾಪಿಸಿದರು. 1953ರಲ್ಲಿ ರಾಜಪ್ರಭುತ್ವ ಅಂತ್ಯದವವರೆಗೂ ಈಜಿಪ್ಟ್ ಸಾಮ್ರಾಜ್ಯದ ಪ್ರಮುಖ ಪ್ರಶಸ್ತಿಗಳಲ್ಲಿ ಒಂದಾಗಿತ್ತು. 1953ರಲ್ಲಿ ಈಜಿಪ್ಟ್ ಗಣರಾಜ್ಯವಾದ ನಂತರ ಆರ್ಡರ್ ಆಫ್ ದಿ ನೈಲ್​ ಪ್ರಶಸ್ತಿಯು ಈಜಿಪ್ಟ್‌ನ ಅತ್ಯುನ್ನತ ನಾಗರಿಕ ಗೌರವವಾಗಿದೆ.

ಇದನ್ನೂ ಓದಿ:Modi in Egypt: ಭಾರತದ ಕೋಮು ಸೌಹಾರ್ದತೆ, ಮೋದಿ ನಾಯಕತ್ವ, ಸಮಾನ ಹಕ್ಕುಗಳಿಗೆ ಈಜಿಪ್ಟ್‌ನ ಗ್ರ್ಯಾಂಡ್ ಮುಫ್ತಿ ಮೆಚ್ಚುಗೆ

ಇದೇ ವೇಳೆ ಪ್ರಧಾನಿ ಮೋದಿ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್​ಸಿಸಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದರು. ಇದಕ್ಕೂ ಮುನ್ನ ಮೋದಿ ಈಜಿಪ್ಟ್‌ನ 11ನೇ ಶತಮಾನದ ಐತಿಹಾಸಿಕ ಅಲ್-ಹಕೀಮ್ ಮಸೀದಿಗೆ ಭೇಟಿ ನೀಡಿದರು. ಮೋದಿಯವರಿಗೆ ಸಂಪೂರ್ಣ ಮಸೀದಿಯನ್ನು ತೋರಿಸಲಾಯಿತು. 1012ರಲ್ಲಿ ನಿರ್ಮಿಸಲಾದ ಮಸೀದಿಯ ಗೋಡೆಗಳು ಮತ್ತು ದ್ವಾರಗಳ ಮೇಲಿನ ಕೆತ್ತನೆಯ ಶಾಸನಗಳನ್ನು ಮೋದಿ ಶ್ಲಾಘಿಸಿದರು.

ಸಾವಿರ ವರ್ಷಗಳಷ್ಟು ಹಳೆಯದಾದ ಅಲ್-ಹಕೀಮ್ ಮಸೀದಿಯು ಕೈರೋದಲ್ಲಿನ ನಾಲ್ಕನೇ ಅತ್ಯಂತ ಹಳೆಯ ಮಸೀದಿಯಾಗಿದೆ. ಇದನ್ನು ಭಾರತದ ದಾವೂದಿ ಬೊಹ್ರಾ ಸಮುದಾಯದ ಸಹಾಯದಿಂದ ಪುನಃಸ್ಥಾಪಿಸಲಾಗಿದೆ. 1970ರಲ್ಲಿ ಮಸೀದಿಯನ್ನು ನವೀಕರಿಸಿ ಅಂದಿನಿಂದ ಅವರೇ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳಿಂದ ಗುಜರಾತ್‌ನಲ್ಲಿರುವ ಬೊಹ್ರಾ ಸಮುದಾಯದೊಂದಿಗೆ ಪ್ರಧಾನಿ ಮೋದಿ ಅವರು ನಿಕಟ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ಈಜಿಪ್ಟ್‌ನಲ್ಲಿರುವ ಭಾರತದ ರಾಯಭಾರಿ ಅಜಿತ್ ಗುಪ್ತೆ ತಿಳಿಸಿದರು.

ಅಲ್ಲದೇ, ಮೊದಲ ಮಹಾಯುದ್ಧದ ಸಂದರ್ಭದಲ್ಲಿ ಪ್ರಾಣ ತ್ಯಾಗ ಭಾರತೀಯ ಸೈನಿಕರ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. ಬಲಿದಾನ ಮಾಡಿದ ಭಾರತೀಯ ಸೈನಿಕರಿಗೆ ಪ್ರಧಾನಿ ಗೌರವ ಸಲ್ಲಿಸಿದರು. ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ವಲಸಿಗರು ಮತ್ತು ಬೊಹ್ರಾ ಮುಸ್ಲಿಂ ಸಮುದಾಯದ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ:Modi in Egypt: ಈಜಿಪ್ಟ್‌ನಲ್ಲಿ ಬೋಹ್ರಾ ಮುಸ್ಲಿಮರು, ಭಾರತೀಯ ವಲಸಿಗರನ್ನು ಭೇಟಿಯಾದ ಮೋದಿ: ವಿಡಿಯೋ

ABOUT THE AUTHOR

...view details