ETV Bharat / state

ಹವ್ಯಾಸಕ್ಕೆ ಕಲಿತ ವಾಹನ ಚಾಲನೆ ಬದುಕಿಗೆ ಆಸರೆ : ಲಾರಿ ಓಡಿಸುತ್ತ ತಂದೆಯ ಆರೈಕೆ ಮಾಡ್ತಿರುವ ಮಾದರಿ ಮಹಿಳೆ

author img

By ETV Bharat Karnataka Team

Published : Feb 13, 2024, 7:28 PM IST

Updated : Feb 13, 2024, 7:51 PM IST

ಹುಬ್ಬಳ್ಳಿ
ಹುಬ್ಬಳ್ಳಿ

ಬೃಹತ್ ಗಾತ್ರದ ವಾಹನಗಳನ್ನು ಓಡಿಸುವ ಮೂಲಕ ಕುಟುಂಬಕ್ಕೆ ಆಸರೆಯಾಗಿರುವ ಹುಬ್ಬಳ್ಳಿಯ ಮಹಿಳೆಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.

ಶೋಭಾ ತೋಟದ

ಹುಬ್ಬಳ್ಳಿ : ಗ್ರಾಮೀಣ ಭಾಗದಲ್ಲಿ ಮಹಿಳೆಯರು ದ್ವಿಚಕ್ರ ವಾಹನ ಚಾಲನೆ ಮಾಡುವುದು ಸಾಮಾನ್ಯ. ನಗರ ಪ್ರದೇಶದಲ್ಲಿ ಮಹಿಳೆಯರು ಕಾರ್ ಓಡಿಸುವುದನ್ನು ಕಾಣಬಹುದು. ಆದ್ರೆ ಇಲ್ಲೋರ್ವ ಮಹಿಳೆ ಬೃಹತ್ ಗಾತ್ರದ ವಾಹನಗಳನ್ನು ಓಡಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದಾರೆ.

ಬೃಹತ್‌ ಗಾತ್ರದ ಲಾರಿ ಓಡಿಸುವ ಚಾಲಕಿಯ ಹೆಸರು ಶೋಭಾ ತೋಟದ. ಮೂಲತಃ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದವರು. ಸದ್ಯ ಹುಬ್ಬಳ್ಳಿಯ ಸಾಯಿನಗರದಲ್ಲಿ ವಾಸವಾಗಿದ್ದಾರೆ. ನಾಲ್ಕು ಚಕ್ರದ ವಾಹನಗಳಿಂದ ಆರಂಭವಾದ ಶೋಭಾ ಅವರ ಡ್ರೈವಿಂಗ್‌ ಜರ್ನಿ 20 ಚಕ್ರದ ವಾಹನಗಳನ್ನು ಓಡಿಸುವ ಹಂತಕ್ಕೆ ತಲುಪಿದೆ.

ಆರಂಭದಿಂದಲೂ ಚಾಲಕಿಯಾಗಬೇಕು ಎಂಬ ಕನಸು ಹೊಂದಿದ್ದ ಶೋಭಾ ಅವರು ನಾಲ್ಕು ಚಕ್ರದ ಕಾರ್ ಓಡಿಸುವ ಮೂಲಕ ಡ್ರೈವಿಂಗ್​ ವೃತ್ತಿಗೆ ಕಾಲಿಟ್ಟಿದ್ದಾರೆ. ಅಲ್ಲಿಂದ ಆರಂಭವಾದ ಇವರ ಪಯಣ ಇದೀಗ 20 ಚಕ್ರದ ವಾಹನಗಳನ್ನು ಓಡಿಸುವ ಮಟ್ಟಿಗೆ ಬಂದು ನಿಂತಿದೆ. ಸಾರಿಗೆ ಇಲಾಖೆಯಲ್ಲಿ ತರಬೇತಿ ಪಡೆದ ಅವರು, ಇದೀಗ ಹುಬ್ಬಳ್ಳಿಯ ಪ್ರತಿಷ್ಠಿತ ಕಂಪನಿಯಲ್ಲಿ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶೋಭಾ ಅವರು ಭಾರೀ ಗಾತ್ರದ ವಾಹನಗಳನ್ನು ಯಾವುದೇ ಅಳುಕಿಲ್ಲದೆ ಪುರುಷರಿಗೆ ಕಡಿಮೆ ಇಲ್ಲ ಎನ್ನುವಂತೆ ಚಾಲನೆ ಮಾಡುತ್ತಾರೆ. ಪುರುಷರಂತೆ ಭಾರೀ ಗಾತ್ರದ ವಾಹನ ಏರುವ ಶೋಭಾ ಸ್ಟೇರಿಂಗ್ ಹಿಡಿದು ಕುಳಿತರೇ ವಾಹನ ತಲುಪಬೇಕಾದ ಜಾಗಕ್ಕೆ ತಲುಪಿಸಿ, ಅದರಲ್ಲಿ ಇರುವ ಸಾಮಗ್ರಿಗಳನ್ನು ಇಳಿಸಿ ನಂತರ ತಮ್ಮ ಜಾಗಕ್ಕೆ ಮರುಳುತ್ತಾರೆ.

ಟಿಪ್ಪರ್, ಲಾರಿ, ಬಸ್ ಸೇರಿ ಭಾರಿ ಗಾತ್ರದ ವಾಹನಗಳನ್ನು ಶೋಭಾ ಸುಲಭವಾಗಿ ಓಡಿಸುತ್ತಾರೆ. ಶೋಭಾ ಅವರು ಮೊದಲು ಚಾಲಕಿಯಾಗಬೇಕು ಎನ್ನುವ ಕನಸು ಕಂಡಿದ್ದರು. ಆರಂಭದಲ್ಲಿ ಸಾಕಷ್ಟು ಅಡ್ಡಿ ಆತಂಕಗಳ ನಡುವೆ ಗ್ರಾಮದಿಂದ ನಗರಕ್ಕೆ ಬಂದ ಅವರು ಕಾರ್ ಓಡಿಸುವುದನ್ನ ಕಲಿತರು. ನಂತರ ಪರಿಚಯದ ಚಾಲಕರ ಸಹಾಯದಿಂದ ದೊಡ್ಡ ದೊಡ್ಡ ವಾಹನಗಳನ್ನು ಓಡಿಸುವುದನ್ನ ಕಲಿತಿದ್ದಾರೆ. ತಮ್ಮ ಚಾಲನಾ ನೈಪುಣ್ಯದಿಂದ ಇದೀಗ ಪ್ರತಿಷ್ಠಿತ ಕಂಪನಿಯಲ್ಲಿ ಚಾಲಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಲವು ನಗರಗಳಲ್ಲಿ ಲಾರಿ ಓಡಿಸಿದ ಚಾಲಕಿ: ಇನ್ನು, ತಮ್ಮ ಸಂಪಾದನೆಯಲ್ಲಿಯೇ ತಮ್ಮ ತಂದೆಯನ್ನು ಸಲಹುತ್ತಿರುವ ಶೋಭಾ ಮದುವೆ ಕೂಡ ಆಗಿಲ್ಲ. ಇವರ ಸಾಧನೆಯನ್ನು ನೋಡಿ ಈಗಾಗಲೇ ಹಲವು ಸಂಘ ಸಂಸ್ಥೆಗಳು ಶೋಭಾ ಅವರನ್ನು ಗುರುತಿಸಿ ಸನ್ಮಾನಿಸಿವೆ. ಹುಬ್ಬಳ್ಳಿಯಿಂದ ಈ ಚಾಲಕಿ ಬೆಳಗಾವಿ, ಗದಗ, ಮಂಗಳೂರು, ದಾವಣಗೆರೆ ಸೇರಿ ಹಲವು ನಗರಗಳಿಗೆ ಲಾರಿ ಓಡಿಸಿದ್ದಾರೆ. ಎಸ್ಎಸ್‌ಎಲ್‌ಸಿ ಓದಿರುವ ಶೋಭಾಗೆ ಇದೀಗ ಸಾರಿಗೆ ಇಲಾಖೆಯಲ್ಲಿ ಚಾಲಕಿಯಾಗಬೇಕು ಎನ್ನುವ ಆಸೆ ಇದೆ. ಅದಕ್ಕಾಗಿ ನಿರ್ವಾಹಕಿ ಮತ್ತು ಡ್ರೈವಿಂಗ್​ ಲೈಸೆನ್ಸ್ ಪಡೆದಿದ್ದು, ಕನಸನ್ನು ನನಸು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ.

ಸಾರ್ವಜನಿಕರು ಹಾಗೂ ಸಂಸ್ಥೆಯಿಂದ ಗೌರವ: ಇವರ ಅಣ್ಣನಿಗೆ ಮದುವೆ ಆಗಿದ್ದು, ಆತ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಾನೆ. ಇಬ್ಬರು ಸಹೋದರಿಯರಿಗೆ ಮದುವೆ ಮಾಡಿಕೊಟ್ಟಿರುವ ಶೋಭಾ ಸದ್ಯ ತಮ್ಮ ತಂದೆಯವರ ಪೋಷಣೆಯನ್ನು ಮಾಡುತ್ತಿದ್ದಾರೆ‌. ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿದ್ದ ಅವರ ತಂದೆಗೆ ಅಪಘಾತವಾದ ಕಾರಣ ಅವರ ಆರೈಕೆಯ ಜವಾಬ್ದಾರಿ ಶೋಭಾ ಅವರ ಮೇಲಿದೆ. ಈ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಅವರು, ಬಡತನದ ಕಾರಣದಿಂದ ಚಾಲಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಖುಷಿ ಇದೆ. ಸಾರ್ವಜನಿಕರು ಹಾಗೂ ಸಂಸ್ಥೆಯವರು ಕೂಡ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಮಹಿಳೆಯಾಗಿ ಇಂತಹ ಬೃಹತ್ ವಾಹನಗಳನ್ನು ಚಾಲನೆ ಮಾಡುವುದನ್ನು ನೋಡಿ ಜನರು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ಶೋಭಾ.

ಇದನ್ನೂ ಓದಿ : 'ಭಗೀರಥ ಮಹಿಳೆ' ಗೌರಿಗೆ ಬಾವಿ ತೋಡಲು ಎದುರಾದ ಅಡೆತಡೆ ನಿವಾರಣೆ; ಅಂಗನವಾಡಿ ಮಕ್ಕಳಿಗೆ ಸಿಗಲಿದೆ ಜೀವಜಲ

Last Updated :Feb 13, 2024, 7:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.