ETV Bharat / state

ಹಾವೇರಿ: ಮತ್ತೆ ದುರಸ್ತಿಗೆ ಬಂದ ಈಜುಕೊಳ

author img

By ETV Bharat Karnataka Team

Published : Feb 23, 2024, 4:20 PM IST

ಹಾವೇರಿ
ಹಾವೇರಿ

ಹಾವೇರಿ ನಗರದಲ್ಲಿರುವ ಈಜುಕೊಳ ಇದೀಗ ಮತ್ತೆ ದುರಸ್ತಿಗೆ ಬಂದಿದೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಲತಾ

ಹಾವೇರಿ: ಸಿಎಂ ಬಿ ಎಸ್ ಯಡಿಯೂರಪ್ಪ ಕಾಲಾವಧಿಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿಯೇ ನಿರ್ಮಿಸಲಾಗಿದ್ದ ಈಜುಗೊಳ ಇದೀಗ ಮತ್ತೆ ದುರಸ್ತಿಗೆ ಬಂದಿದೆ. 1997ರಲ್ಲಿ ಹಾವೇರಿ ಪ್ರತ್ಯೇಕ ಜಿಲ್ಲೆಯಾದ ನಂತರ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಅಭಿವೃದ್ಧಿ ಮಂತ್ರ ಜಪಿಸಲಾರಂಭಿಸಿತು. ಅದರಂತೆಯೇ 2010ರಲ್ಲಿ ನಗರದಲ್ಲಿ ಸರ್ಕಾರಿ ಈಜುಗೊಳ ನಿರ್ಮಿಸಲಾಯಿತು.

ಈಜುಕೊಳಕ್ಕೆ ಸಿಎಂ ಬಿ ಎಸ್ ಯಡಿಯೂರಪ್ಪ 25-10-2010 ರಂದು ವಿದ್ಯುಕ್ತವಾಗಿ ಚಾಲನೆ ನೀಡಿದ್ದರು. ಹಲವು ಇಲ್ಲಗಳ ನಡುವೆಯೇ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸುಪರ್ದಿಯಲ್ಲಿ ಈಜುಗೊಳ ಆರಂಭವಾಯಿತು. ಯುವಜನ ಸೇವಾ ಕ್ರೀಡಾ ಇಲಾಖೆ ಆರಂಭದಲ್ಲಿ ಈಜುಗೊಳ ನಿರ್ವಹಣೆ ಮಾಡಿತು. ಆದರೆ ನೀರು ಸೋರಿಕೆ ಸೇರಿದಂತೆ ವಿವಿಧ ಕಾರಣಗಳಿಂದ ಈಜುಗೊಳ ಕಾರ್ಯನಿರ್ವಹಿಸಿದ್ದಕ್ಕಿಂತ ಬಂದ್ ಆಗಿದ್ದೇ ಹೆಚ್ಚು. ಇನ್ನೇನು ಈಜುಗೊಳ ಸಿದ್ಧವಾಯಿತು ಎನ್ನುವಷ್ಟರಲ್ಲಿ ಒಂದೊಂದು ಸಮಸ್ಯೆ ಕಾಣಿಸಲಾರಂಭಿಸಿದವು. ನಂತರ ಈಜುಕೊಳವನ್ನ ಖಾಸಗಿ ಸಂಸ್ಥೆಗೆ ನಿರ್ವಹಣೆ ನೀಡಿದ್ದರಿಂದ ಸ್ವಲ್ಪಮಟ್ಟಿಗೆ ಸುಧಾರಣೆಯಾಯಿತು.

ಅದಾದ ನಂತರ ಈಜುಗೊಳದಲ್ಲಿ ಪಾಚಿಕಟ್ಟಿದೆ, ನೀರು ಸರಿಯಾಗಿ ಸ್ವಚ್ಛವಾಗುತ್ತಿಲ್ಲ ಎಂದು ಈಜುಗೊಳ ನವೀಕರಣ ಕೈಗೊಳ್ಳಲಾಯಿತು. ಈ ರೀತಿ ನವೀಕರಣ ಕಾರ್ಯಕ್ಕೆ 2018ರಲ್ಲಿ ಚಾಲನೆ ನೀಡಲಾಯಿತು. ಮತ್ತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈಜುಗೊಳ ನವೀಕರಣ ಕೈಗೊಳ್ಳಲಾಯಿತು. 22-10-2018ರಲ್ಲಿ ನವೀಕರಣ ಮುಗಿದ ನಂತರ ಈಜುಗೊಳ ಮತ್ತೆ ಆರಂಭವಾಯಿತು.

ಈ ಮಧ್ಯೆ ಹಾವೇರಿ ನಗರದಲ್ಲಿ ಕೆಎಲ್ಇ ಸಂಸ್ಥೆ ಖಾಸಗಿಯಾಗಿ ಈಜುಗೊಳ ಆರಂಭಿಸಿದ್ದು, ಸರ್ಕಾರಿ ಈಜುಗೊಳದ ಮೇಲಿನ ಅವಲಂಬನೆ ಕಡಿಮೆ ಮಾಡಿತು. ಅದಾಗ್ಯೂ ಸಹ ಹಾವೇರಿ ನಗರದಲ್ಲಿ ಅತಿಹೆಚ್ಚು ಜನ ಸರ್ಕಾರಿ ಈಜುಕೊಳಕ್ಕೆ ಆಗಮಿಸುತ್ತಿದ್ದ ಕಾರಣ, ಉತ್ತಮ ಆದಾಯದ ಬಂದಿತು. ಖಾಸಗಿ ಸಂಸ್ಥೆ ಸ್ವಚ್ಛತೆ ಮತ್ತು ಸರಿಯಾಗಿ ನಿರ್ವಹಣೆ ಮಾಡಿದ್ದರಿಂದ ಈಜುಗೊಳದಲ್ಲಿ ಈಜುಪಟುಗಳ ಸಂಖ್ಯೆ ಅಧಿಕವಾಯಿತು. ಆದರೆ ಇದೀಗ ಹಾವೇರಿ ಈಜುಗೊಳ ಮತ್ತೆ ದುರಸ್ತಿಗೆ ಬಂದಿದೆ.

ಆದಷ್ಟು ಬೇಗನೆ ಈಜುಗೊಳ ನವೀಕರಣ ಆರಂಭವಾಗಲಿದೆ: ''ಈಜುಕೊಳದಲ್ಲಿ ಎಲ್ಲೆಂದರಲ್ಲಿ ಪಾಚಿಕಟ್ಟಿದೆ. ಈಜುಗೊಳದ ತಳಹದಿಯಲ್ಲಿ ಹಾಕಿದ ಟೈಲ್ಸ್‌ಗಳು ಹಾಳಾಗಿವೆ. ಅಲ್ಲದೆ ಈಜುಗೊಳದಲ್ಲಿನ ನೀರು ಇಂಗುವಿಕೆ ಸಹ ಅಧಿಕವಾಗಿದ್ದು, ಇದೀಗ ಮತ್ತೆ ಈಜುಕೊಳ ನವೀಕರಣಕ್ಕೆ ಬಂದಿದೆ. ಈ ಕಾರ್ಯಕ್ಕೆ ಒಂದು ಕೋಟಿ ರೂಪಾಯಿ ಬಿಡುಗಡೆ ಆಗಿದ್ದು, ಆದಷ್ಟು ಬೇಗನೆ ಈಜುಕೊಳ ನವೀಕರಣ ಆರಂಭವಾಗಲಿದೆ'' ಎನ್ನುತ್ತಾರೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಲತಾ.

ಲ್ಯಾಂಡ್ ಆರ್ಮಿ ಈಗಾಗಲೇ ಈಜುಕೊಳ ನೋಡಿಕೊಂಡು ಹೋಗಿದ್ದಾರೆ. ಈ ವಾರದಲ್ಲಿ ದುರಸ್ತಿ ಕಾರ್ಯ ಆರಂಭವಾಗಲಿದೆ. ಬೇಸಿಗೆ ಕಾಲಕ್ಕೆ ಈಜುಪಟುಗಳಿಗೆ ನೂತನ ಈಜುಗೊಳ ಸಿಗಲಿದೆ ಎಂಬ ವಿಶ್ವಾಸವನ್ನ ಉಪನಿರ್ದೇಶಕಿ ಲತಾ ವ್ಯಕ್ತಪಡಿಸಿದ್ದಾರೆ. ಪದೇ ಪದೇ ಈಜುಗೊಳ ನವೀಕರಣಕ್ಕೆ ದುರಸ್ತಿಗೆ ಅಂತಾ ಕಾರ್ಯನಿರ್ವಹಿಸಿದ್ದಕ್ಕಿಂತ ಬಂದ್
ಆಗಿದ್ದ ದಿನಗಳೇ ಅಧಿಕವಾಗಿವೆ. ಈ ಬಾರಿಯಾದರೂ ಉತ್ತಮ ಈಜುಗೊಳ ನಿರ್ಮಾಣವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ : ಹಾವೇರಿ: ಆದಾಯದ ಕೊರತೆ ಇದ್ದರೂ ಈಜುಕೊಳ ನಡೆಸುತ್ತಿರುವ ಗುತ್ತಿಗೆದಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.