ETV Bharat / state

ಸಚ್ಚಿದಾನಂದ ಸ್ವಾಮೀಜಿ, ಸುತ್ತೂರು ಶ್ರೀ, ಶ್ರವಣಬೆಳಗೊಳ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳಿಂದ ಮತದಾನ - Swamijis voting

author img

By ETV Bharat Karnataka Team

Published : Apr 26, 2024, 11:30 AM IST

Updated : Apr 26, 2024, 6:48 PM IST

ಸುತ್ತೂರು ಶ್ರೀಗಳು ಹಾಗೂ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ
ಸುತ್ತೂರು ಶ್ರೀಗಳು, ಸಚ್ಚಿದಾನಂದ ಸ್ವಾಮೀಜಿ ಹಾಗೂ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ

ಮೈಸೂರಿನಲ್ಲಿ ಸುತ್ತೂರು ಶ್ರೀಗಳು, ಸಚ್ಚಿದಾನಂದ ಸ್ವಾಮೀಜಿ ಹಾಗೇ ಹಾಸನ ಜಿಲ್ಲೆ ಶ್ರವಣಬೆಳಗೊಳದ ಶ್ರೀಮದ್ ಅಭಿನವ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹಕ್ಕು ಚಲಾಯಿಸಿದರು.

ಸ್ವಾಮೀಜಿಗಳಿಂದ ಮತದಾನ

ಮೈಸೂರು/ಹಾಸನ ಚಿತ್ರದುರ್ಗ: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಅವಧೂತ ವಿದ್ಯಾಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ಮತ ಚಲಾಯಿಸಿದರೆ, ಹಾಸನದಲ್ಲಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು ಹಕ್ಕು ಚಲಾಯಿಸಿದ್ದಾರೆ.

ಶ್ರೀ ಸುತ್ತೂರು ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಶ್ರೀ ಕ್ಷೇತ್ರ ಸುತ್ತೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುತ್ತೂರು ಮತಗಟ್ಟೆಯಲ್ಲಿ ಮತದಾನ ಮಾಡಿ, 'ಪ್ರಜಾಪ್ರಭುತ್ವ ಉಳಿಸಿ ಇದು ನಮ್ಮೆಲ್ಲರ ಹಕ್ಕು' ಎಂದು ಸಾರ್ವಜನಿಕರಿಗೆ ಸಂದೇಶ ಸಾರಿದರು.

ಇನ್ನು ಅವಧೂತ ದತ್ತ ಪೀಠಾಧಿಪತಿ, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಬೂತ್ ನಂಬರ್ 237ರಲ್ಲಿ ತಮ್ಮ ಮತ ಚಲಾಯಿಸಿದರು.

ಮೊದಲ ಮತದಾನ ಮಾಡಿದ ಭಟ್ಟಾರಕ ಸ್ವಾಮೀಜಿ: ಶ್ರವಣಬೆಳಗೊಳದಲ್ಲಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳು 239ನೇ ಮತಗಟ್ಟೆ ಸಂಖ್ಯೆಯಲ್ಲಿ ಮೊದಲ ಮತದಾನ ಮಾಡಿದರು. ಕಳೆದ ಬಾರಿ ಹೆಸರು ಬದಲಾವಣೆ ಆದ ಹಿನ್ನೆಲೆಯಲ್ಲಿ ಮತ ಚಲಾವಣೆ ಮಾಡಲು ಸಾಧ್ಯವಾಗಲಿಲ್ಲ.

ಚಿತ್ರದುರ್ಗದಲ್ಲಿ ಸ್ವಾಮೀಜಿಗಳಿಂದ ಹಕ್ಕು ಚಲಾವಣೆ: ಚಿತ್ರದುರ್ಗದ ಮಠದಹಟ್ಚಿ ಮತಗಟ್ಟೆಯಲ್ಲಿ ವಿವಿಧ ಮಠಗಳ ಮಠಾಧೀಶರು ಮತ ಚಲಾಯಿಸಿದರು. ಮತಗಟ್ಟೆ ಸಂಖ್ಯೆ 5ರಲ್ಲಿನ ಕೊಠಡಿ 2ರಲ್ಲಿ ಸ್ವಾಮೀಜಿಗಳು ಮತದಾನ ಮಾಡಿದರು. ಕುಂಚಿಟಿಗ ಮಹಾ ಸಂಸ್ಥಾನದ ಶಾಂತವೀರ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮೀಜಿ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಾದರ ಗುರುಪೀಠದ ಮಾದರ ಚನ್ನಯ ಸ್ವಾಮೀಜಿ, ಮೇದಾರ ಗುರುಪೀಠದ ಶ್ರೀ ಕೇತೇಶ್ವರ ಸ್ವಾಮೀಜಿ ಹಾಗೂ ಬಂಜಾರ ಗುರುಪೀಠದ ಶ್ರೀ ಸೇವಾಲಾಲ್ ಸ್ವಾಮೀಜಿಯವರು ವೋಟ್​ ಮಾಡಿದರು.

voting
ಚಿತ್ರದುರ್ಗದಲ್ಲಿ ಸ್ವಾಮೀಜಿಗಳಿಂದ ಹಕ್ಕು ಚಲಾವಣೆ

ರಾಜಕೀಯ ನಾಯಕರಿಂದ ಮತದಾನ: ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರು ಮೈಸೂರು ನಗರದ ಶಂಕರಮಠ ರಸ್ತೆಯಲ್ಲಿರುವ ಶ್ರೀಕಾಂತ ಶಾಲೆಯಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಹಕ್ಕು ಚಲಾಯಿಸಿದರು. ಇದಕ್ಕೂ ಮುನ್ನ ಕುಲದೇವತೆ ಹಾಗೂ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದರು.

ಶಾಸಕ ಜಿ.ಟಿ.ದೇವೇಗೌಡ ಹಾಗೂ ಕುಟುಂಬಸ್ಥರಿಂದ ಮತದಾನ: ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ತಮ್ಮ ಹುಟ್ಟೂರಾದ ಗುಂಗ್ರಾಲ್ ಛತ್ರದ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಾಸಕರು ಹಾಗೂ ರಾಜ್ಯ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡರು ಹಾಗೂ ಧರ್ಮಪತ್ನಿ ಶ್ರೀ ಕೆ.ಲಲಿತಾ .ಜಿ.ಟಿ. ದೇವೇಗೌಡರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು‌.

ಹಾಗೇ, ಚಾಮರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮೈಸೂರು ನಗರ ಬಿಜೆಪಿ ಅಧ್ಯಕ್ಷರಾದ ಎಲ್ ನಾಗೇಂದ್ರ ಅವರು ಕುಟುಂಬ ಸಮೇತರಾಗಿ ಮತ ಚಲಾಯಿಸಿದರು.

ಮಂಡ್ಯದಲ್ಲಿ ಮತದಾನ: ಚಿನಕುರುಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 138ರಲ್ಲಿ ಪತ್ನಿ ನಾಗಮ್ಮ ಜೊತೆಗೂಡಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮತ ಚಲಾಯಿಸಿದರು. ಹಾಗೇ ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ಪತ್ನಿ ದೇವಿಕಾ, ಮಗಳು ನೇಹಾಗೌಡ ಜೊತೆ ಆಗಮಿಸಿ ಮತಗಟ್ಟೆ ಸಂಖ್ಯೆ137 ರಲ್ಲಿ ಮತದಾನ ಮಾಡಿದರು. ಬಳಿಕ ಮಾತನಾಡಿದ ನಾರಾಯಣಗೌಡ, ಜನರು ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಬಹುಮತ ಕೊಡುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಿಂದ ಕುಮಾರಸ್ವಾಮಿ ಗೆದ್ದು ಮೋದಿ ಸಂಪುಟದಲ್ಲಿ ಸಚಿವರಾಗುವ ಬಗ್ಗೆ ನಾರಾಯಣಗೌಡ ಭವಿಷ್ಯ ನುಡಿದರು.

ಇದನ್ನೂ ಓದಿ: ಚಾಮರಾಜನಗರದಲ್ಲಿ ಮತದಾನ ಚುರುಕು: ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದು ಹಕ್ಕು ಚಲಾಯಿಸಿದ ಕೆಂಡಸಂಪಿಗೆ ನಾಯಕ - Actor Vikky Varun voting

Last Updated :Apr 26, 2024, 6:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.