ETV Bharat / state

ರೇವಣ್ಣ ಜೈಲಿಗೆ ಕಳುಹಿಸಲೇಬೇಕು ಎಂದು ಕಾಂಗ್ರೆಸ್ ಕುತಂತ್ರ ಮಾಡಿದೆ; ಪಿತೂರಿ, ಸಂಚು ಸ್ಪಷ್ಟವಾಗಿದೆ- ಆರ್ ಅಶೋಕ್ - R Ashok

author img

By ETV Bharat Karnataka Team

Published : May 13, 2024, 10:37 PM IST

ಕಿಡ್ನಾಪ್​ ಪ್ರಕರಣದಲ್ಲಿ ಹೆಚ್​ಡಿ ರೇವಣ್ಣ ಅವರಿಗೆ ಜಾಮೀನು ಸಿಕ್ಕಿರುವ ಬಗ್ಗೆ ಪ್ರತಿಪಕ್ಷ ನಾಯಕ ಆರ್ ಅಶೋಕ್​​​ ಮಾತನಾಡಿದ್ದಾರೆ.

opposition-leader-r-ashok
ಪ್ರತಿಪಕ್ಷ ನಾಯಕ ಆರ್ ಅಶೋಕ್ (ETV Bharat)

ಪ್ರತಿಪಕ್ಷ ನಾಯಕ ಆರ್ ಅಶೋಕ್ (ETV Bharat)

ಬೆಂಗಳೂರು : ಹಾಸನ ಪ್ರಕರಣವನ್ನು ಕಾಂಗ್ರೆಸ್ ನಾಯಕರು ಮಾನಿಟರ್ ಮಾಡುತ್ತಿದ್ದಾರೆ. ರೇವಣ್ಣ ಅವರನ್ನು ಜೈಲಿಗೆ ಕಳುಹಿಸಲೇಬೇಕು ಎಂದು ಕುತಂತ್ರ ಮಾಡಿದ್ದಾರೆ. ಈ ಪ್ರಕರಣವನ್ನು ಪಶ್ಚಿಮ ಬಂಗಾಳದ ಘಟನೆಗೆ ಟ್ಯಾಗ್ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶ ಇದರ ಹಿಂದಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ನಾಯಕ ಹೆಚ್. ಡಿ ರೇವಣ್ಣ ಅವರಿಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಪ್ರಕರಣದಲ್ಲಿ ರಾಜ್ಯ ಸರ್ಕಾರ ಬಹಳ ಆತುರ ತೋರಿದೆ ಎಂದು ನನಗೆ ಅನ್ನಿಸುತ್ತಿದೆ. ಎಫ್​ಐಆರ್​ನಲ್ಲಿ ತಪ್ಪು ಮಾಹಿತಿ ನೀಡಿರುವುದು ಎಲ್ಲವೂ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದರು.

ಕಾಂಗ್ರೆಸ್ ರೇವಣ್ಣ ಅವರನ್ನು ಜೈಲಿಗೆ ಕಳುಹಿಸಲೇಬೇಕು ಅಂತ ಕುತಂತ್ರ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ನನ್ನನ್ನು ಯಾರೂ ಕಿಡ್ನ್ಯಾಪ್ ಮಾಡಿಲ್ಲ ಎಂದು ಸಂತ್ರಸ್ತೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ನಿತ್ಯ ಪ್ರಕರಣವನ್ನು ಮಾನಿಟರ್ ಮಾಡುತ್ತಿದ್ದಾರೆ. ಸುರ್ಜೇವಾಲಾ, ಸಿದ್ದರಾಮಯ್ಯ, ಡಿ. ಕೆ ಶಿವಕುಮಾರ್ ಎಲ್ಲರೂ ದಿನವೂ ಮಾನಿಟರ್ ಮಾಡುತ್ತಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಪಶ್ಚಿಮ ಬಂಗಾಳದ ಘಟನೆಗೆ ಟ್ಯಾಗ್ ಮಾಡಬೇಕು. ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಬೇಗ ಬೇಗ ಇಷ್ಟೆಲ್ಲ ಮಾಡಿದ್ದಾರೆ. ಎಸ್​ಐಟಿಯವರು ಸ್ಥಳ ಮಹಜರು ಎಲ್ಲ ನಿಧಾನವಾಗಿ ಮಾಡಬಹುದಾಗಿತ್ತು. ಚುನಾವಣೆಗೋಸ್ಕರ ಪೂರ್ತಿ ನಾಟಕ ಮಾಡಿದಂತೆ ಕಾಣುತ್ತಿದೆ ಎಂದು ಆರೋಪಿಸಿದರು.

ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಬೇಕು ಎಂಬುದು ಬಿಜೆಪಿ ನಿಲುವು. ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ಆಗಬೇಕು. ಅದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಪ್ರಧಾನಿ, ಅಮಿತ್ ಶಾ ಅವರೂ ಇದನ್ನೇ ಹೇಳಿದ್ದಾರೆ. ಆದರೆ, ರಾಜಕೀಯವಾಗಿ ಪ್ರಕರಣವನ್ನು ದುರುಪಯೋಗ ಮಾಡಿಕೊಂಡು, ಸಂಬಂಧ ಇಲ್ಲದವರನ್ನೂ ಅರೆಸ್ಟ್ ಮಾಡುತ್ತಿದ್ದಾರೆ. ಇದರಲ್ಲಿ ಕಾಂಗ್ರೆಸ್ ಕೈವಾಡ ಇದೆ ಎಂಬುದು ಜನರಿಗೆ ಗೊತ್ತಾಗಿದೆ ಎಂದರು.

ಕಾಂಗ್ರೆಸ್ ಕೈವಾಡ ಇಲ್ಲ ಅಂತಾ ತೋರಿಸಿಕೊಳ್ಳಲು ಹಲವಾರು ಜನರನ್ನು ಬಂಧನ ಮಾಡಿದ್ದಾರೆ. ಪ್ರೀತಂ ಗೌಡ ಹಿಂಬಾಲಕರು, ರೇವಣ್ಣ, ಲಾಯರ್ ದೇವರಾಜೇಗೌಡರ ಬಂಧಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಇದನ್ನು ಹ್ಯಾಂಡಲ್ ಮಾಡುತ್ತಿದೆ. ಕಾಂಗ್ರೆಸ್​ನ ಕೇಂದ್ರದ ಮತ್ತು ರಾಜ್ಯದ ನಾಯಕರು ವ್ಯವಸ್ಥಿತ ಪಿತೂರಿ ಮತ್ತು ಸಂಚು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪೊಲೀಸರು ನ್ಯಾಯ ಸ್ಥಾನದಲ್ಲಿದ್ದು, ಪರಿಶೀಲನೆ ಮಾಡದೇ ಏಕಾಏಕಿ ದೇವೇಗೌಡರ ಮನೆಗೆ ಹೋಗಿ ರೇವಣ್ಣ ಅವರನ್ನು ಎಳೆದುಕೊಂಡು ಬಂದು ಬಂಧಿಸುವ ಅವಶ್ಯಕತೆ ಏನಿತ್ತು?. ಉಪ್ಪು ತಿಂದವರು ನೀರು ಕುಡಿಯಲೇಬೇಕು, ಕುಡಿಯಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದರು.

ಇದನ್ನೂ ಓದಿ : ಪೆನ್ ಡ್ರೈವ್ ಪ್ರಕರಣ; 2ನೇ ಹಂತದ ಲೋಕಸಭೆ ಚುನಾವಣೆಗೆ ಡ್ಯಾಮೇಜ್ ಆಗಿಲ್ಲ: ಆರ್​​ ಅಶೋಕ್ - Lok Sabha Election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.