ETV Bharat / state

ಅನರ್ಹತೆ ಮಾಡುವುದು ಬಿಡುವುದು ಬಿಜೆಪಿಗೆ ಬಿಟ್ಟ ವಿಚಾರ: ಮುಂಡಗೋಡಿನಲ್ಲಿ ಶಾಸಕ ಹೆಬ್ಬಾರ್ ಪ್ರತಿಕ್ರಿಯೆ

author img

By ETV Bharat Karnataka Team

Published : Mar 11, 2024, 9:42 PM IST

MLA Shivaram Hebbar
ಶಾಸಕ ಶಿವರಾಮ ಹೆಬ್ಬಾರ್

ರಾಜ್ಯಸಭಾ ಚುನಾವಣೆಯ ಮತದಾನದ ಗೈರಿನ ಬಗ್ಗೆ ಸಮರ್ಪಕ ಉತ್ತರ ನೀಡಿದ್ದೇನೆ ಎಂದು ಶಾಸಕ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

ಶಾಸಕ ಶಿವರಾಮ ಹೆಬ್ಬಾರ್

ಶಿರಸಿ (ಉತ್ತರ ಕನ್ನಡ): ರಾಜ್ಯಸಭೆಯಲ್ಲಿ ಮತದಾನ ಮಾಡದಿರುವುದಕ್ಕೆ ಸಂಬಂಧಿಸಿದಂತೆ ಶಾಸಕ ಸ್ಥಾನದಿಂದ ಅನರ್ಹ ಮಾಡುವುದು ಬಿಡುವುದು ಪಕ್ಷದ ನಿರ್ಣಯ. ಅದು ಅವರಿಗೆ ಬಿಟ್ಟಿದ್ದು ಎಂದು ಶಾಸಕ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಸಭಾ ಚುನಾವಣೆಯ ಮತದಾನದ ಗೈರಿನ ಬಗ್ಗೆ ಸಮರ್ಪಕ ಉತ್ತರ ನೀಡಿದ್ದೇನೆ ಎಂದರು.

ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರುವುದನ್ನು ಕಾಲ ನಿರ್ಣಯಿಸಲಿದೆ ಎಂದ ಹೆಬ್ಬಾರ್, ಸಂಸದ ಅನಂತಕುಮಾರ್ ಹೇಳಿಕೆಗೆ ಜನರು ಉತ್ತರ ನೀಡುತ್ತಿದ್ದಾರೆ. ಅನಂತಕುಮಾರ ಹೆಗಡೆ ದೊಡ್ಡ ಮನುಷ್ಯ. ಅವರ ಕುರಿತು ಪ್ರತಿಕ್ರಿಯೆ ನೀಡಲಾರೆ ಎಂದರು. ಇದೇ ವೇಳೆ, ನನ್ನ ಕಾರ್ಯಕರ್ತರಿಗೆ ಕಾಲ ಕಾಲಕ್ಕೆ ಯಾವ ಸಂದೇಶ ಕಳಿಸಬೇಕೋ ಅದನ್ನು ಕಳಿಸುತ್ತೇನೆ ಎಂದು ತಿಳಿಸಿದರು.

ಅನಾರೋಗ್ಯದ ಕಾರಣದಿಂದ ರಾಜ್ಯಸಭೆ ಮತದಾನದಲ್ಲಿ ಭಾಗವಹಿಸಿಲ್ಲ : ''ಮಂಗಳವಾರ ಮುಂಜಾನೆಯಿಂದ ತಮ್ಮ ಆರೋಗ್ಯದಲ್ಲಿ ಏರುಪೇರು ಆಗಿತ್ತು. ವೈದ್ಯರ ಸಲಹೆಯ ಮೇರೆಗೆ ನಾನು ಮತದಾನಕ್ಕೆ ಹೋಗಲು ಸಾಧ್ಯವಾಗಲಿಲ್ಲ'' (Feb 28, 2024) ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರು ಸ್ಪಷ್ಟಪಡಿಸಿದ್ದರು.

ಈ ಕುರಿತು ಯಲ್ಲಾಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದ ಅವರು, ''ಆಸ್ಪತ್ರೆಯಲ್ಲೇ ಸಮಯ ಕಳೆದು ಹೋಯಿತು. ಅದಕ್ಕೆ ರಾಜ್ಯಸಭಾ ಚುನಾವಣೆ ಮತದಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಯಾರಿಗೋ ಹೆದರಿ, ಬೆದರಿ ಮತದಾನದಿಂದ ದೂರ ಉಳಿದಿಲ್ಲ. ಅಲ್ಲದೇ ರಾಜ್ಯ ರಾಜಕಾರಣದಲ್ಲಿ ಎಲ್ಲವನ್ನು ಎದುರಿಸಲು ಸಿದ್ಧ. ಕಾನೂನು ಹೋರಾಟ ಆಗಿರಲಿ ಅಥವಾ ರಾಜಕೀಯ ವಿಷಯ ಆಗಲಿ'' ಎಂದು ಖಡಕ್ ಆಗಿ ಹೇಳಿದ್ದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಚುನಾವಣೆ ಬಂತು ಅಂತ ಸ್ಟೇಟ್​ಮೆಂಟ್ ಕೊಡೋಕೆ ಸ್ಟಾರ್ಟ್ ಮಾಡಿದ್ದಾರೆ: ಅನಂತಕುಮಾರ್ ಸಂವಿಧಾನ ತಿದ್ದುಪಡಿ ಹೇಳಿಕೆ ಹೊಸದಲ್ಲ. ಬಹಳ ಹಿಂದೇನೇ ಹೇಳಿದರು. ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದಾಗ ಸ್ವಲ್ಪ ಆ್ಯಕ್ಟೀವ್ ಆಗಿದ್ರು. ಆಮೇಲೆ ಮಂತ್ರಿ ಮಾಡಿಲ್ಲ ಅಂತ 5 ವರ್ಷದಿಂದ ಅವರ ಸದ್ದು, ಸುದ್ದಿ ಇರ್ಲಿಲ್ಲ. ಚುನಾವಣೆ ಬಂತು ಅಂತ ಸ್ಟೇಟ್​ಮೆಂಟ್ ಕೊಡೋಕೆ ಸ್ಟಾರ್ಟ್ ಮಾಡಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಲೇವಡಿ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ 4 ಕೋಟಿ ವೆಚ್ಚದ ಸಾರಿಗೆ ಘಟಕ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, 400 ಸೀಟ್ ಬಂದರೆ ಸಂವಿಧಾನ ಬದಲಾವಣೆ ಮಾಡ್ತೀವಿ ಅಂತಾರೆ. 400 ಸೀಟ್ ಬಂದರೆ ತಾನೇ? 400 ಸೀಟ್ ಬರಲ್ಲ. ಅದಕ್ಕೆ ತಲೆ ಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ ಎಂದು ಟಾಂಗ್ ನೀಡಿದರು.

ಬಿಜೆಪಿ ಹಾಗೂ ಜೆಡಿಎಸ್​ನವರಿಗೆ ಭಾಗ್ಯಗಳನ್ನ ಸಹಿಸಿಕೊಳ್ಳೋಕೆ ಆಗ್ತಿಲ್ಲ. ಕಾಂಗ್ರೆಸ್ ನೀಡಿದ 5 ಭಾಗ್ಯಗಳೂ ಯಶಸ್ವಿಯಾಗಿವೆ. ಆದ್ದರಿಂದ ಅಪಪ್ರಚಾರ ಮಾಡ್ತಾರೆ ಎಂದರು. ಮೊನ್ನೆ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಯವರು ಏನ್ ಹೇಳ್ತಿದ್ರು?. ನಾವೇ ಗೆಲ್ಲೋದು ಅಂತಿದ್ರು. ಏನಾಯ್ತು ನೋಡಿದ್ರಲ್ಲ? ಬರೀ 65ಕ್ಕೆ ನಿಂತೋಯ್ತು. ಬಿಜೆಪಿ ಬರೋದಿಲ್ಲ, ಅವರ ಬಗ್ಗೆ ಜನರಿಗೆ ವಿಶ್ವಾಸ ಇಲ್ಲ. ಕಾಂಗ್ರೆಸ್ ನುಡಿದಂತೆ ನಡೆಯೋ ಪಕ್ಷ. ಬಿಜೆಪಿಯಲ್ಲಿ ಒಳಜಗಳ, ಕಿತ್ತಾಟ ಜಾಸ್ತಿ. ನೀವು ಹೈಲೈಟ್ ಮಾಡಿದ್ರೆ ಇವರ ಒಳಜಗಳ ಬೀದಿಗೆ ಬರುತ್ತೆ ಎಂದು ಹೇಳಿದರು.

ಇನ್ನು ಹೆಬ್ಬಾರ್ ಕಾಂಗ್ರೆಸ್​ಗೆ ಬರೋ ವಿಚಾರವಾಗಿ ಮಾತನಾಡಿ, ನೀವು ಅವ್ರನ್ನೇ ಕೇಳಿ. ಎಲ್ಲ ಕಾಂಗ್ರೆಸ್​ನಲ್ಲಿ ಇದ್ದೋರೇ. ಕಾಂಗ್ರೆಸ್​ ಜನರ ಪರವಾಗಿ ಇರೋ ಪಕ್ಷ. ಸ್ವತಂತ್ರ ತಂದುಕೊಟ್ಟ, ಜನಪರ ಕಾರ್ಯಕ್ರಮ ಕೊಟ್ಟ ಪಕ್ಷ. ವಿಶೇಷವಾಗಿ ಒಲವು ಇದ್ದೇ ಇರುತ್ತೆ. ಬಂದ್ರೆ ಬೇಡ ಅಂತ ಹೇಳೋಕಾಗುತ್ತಾ? ಎಂದರು. ಅಲ್ಲದೇ ಲೋಕಸಭೆಯಲ್ಲಿ 20 ಸ್ಥಾನಕ್ಕಿಂತ ಹೆಚ್ಚು ಗೆಲ್ಲುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ : ನಾನು ರಾಜೀನಾಮೆ‌ ನೀಡಿದರೆ ಮಾತ್ರ ಉಪಚುನಾವಣೆ: ಶಿರಸಿಯಲ್ಲಿ ಶಾಸಕ ಹೆಬ್ಬಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.