ETV Bharat / state

ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಪರಿಷತ್​ನಲ್ಲಿ ಅಂಗೀಕಾರ

author img

By ETV Bharat Karnataka Team

Published : Feb 21, 2024, 4:04 PM IST

Etv Bharatರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಪರಿಷತ್​ನಲ್ಲಿ ಅಂಗೀಕಾರ
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಪರಿಷತ್​ನಲ್ಲಿ ಅಂಗೀಕಾರ

ಪ್ರತಿಪಕ್ಷಗಳ ಸಭಾತ್ಯಾಗದ ನಡುವೆಯೇ ರಾಜ್ಯಪಾಲರ ವಂದನಾರ್ಪಣಾ ಪ್ರಸ್ತಾವ ಪರಿಷತ್​ನಲ್ಲಿ ಅಂಗೀಕಾರಗೊಂಡಿತು.

ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವವನ್ನು ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಸಭಾತ್ಯಾಗದ ನಡುವೆ ವಿಧಾನ ಪರಿಷತ್ ಅಂಗೀಕಾರ ನೀಡಿತು. ಉತ್ತರದ ನಡುವಿನ ಪ್ರಶ್ನೆಗಳಿಗೆ ಉತ್ತರಿಸಲು ಸಿಎಂ ನಿರಾಕರಣೆ ಖಂಡಿಸಿ ಪ್ರತಿಪಕ್ಷಗಳ ಸಭಾತ್ಯಾಗದೊಂದಿಗೆ ಪ್ರಸ್ತಾವವನ್ನು ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ, ಪ್ರತಿಪಕ್ಷದ ನಾಯಕರು ಎರಡು ಮೂರು ಬಾರಿ ಎದ್ದರೆ ಸರಿ, ಪ್ರತಿ ವಾಕ್ಯಕ್ಕೂ ಎದ್ದರೆ ಹೇಗೆ? ಸರ್ಕಾರ ಇರುವುದೇ ಪ್ರತಿ ಪಕ್ಷಗಳ ಪ್ರಶ್ನೆಗೆ ಉತ್ತರ ನೀಡಲು, ಯಾವುದೇ ಪ್ರಶ್ನೆ ಕೇಳಿ ಉತ್ತರ ಹೇಳುತ್ತೇನೆ. ಆದರೆ ನಾನು ಉತ್ತರ ಕೊಡಬಾರದು ಎನ್ನುವ ಕಾರಣಕ್ಕಾಗಿ ಪದೇ ಪದೇ ಅಡ್ಡಿಪಡಿಸಲಾಗುತ್ತಿದೆ ಎಂದು ಸಿಎಂ ಅಸಮಾಧಾನ ಹೊರಹಾಕಿದರು.

ನಾನು ಪ್ರಧಾನಿ ಮತ್ತು ಕೇಂದ್ರ ಸರ್ಕಾರವನ್ನು ಟೀಕೆ ಮಾಡಲ್ಲ, ಆಗಿರುವ ಅನ್ಯಾಯವನ್ನು ಹೇಳಿದ್ದೇನೆ ಅಷ್ಟೇ. 15ನೇ ಮಧ್ಯಂತರ ವರದಿಯ ಅನುದಾನ ಶಿಫಾರಸು ಅಂತಿಮ ವರದಿಯಲ್ಲಿ ಇಲ್ಲದಂತೆ ಮಾಡಿದ್ದೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಪ್ರಕಟಿಸಿ ವರ್ಷವಾದರೂ ಒಂದು ರೂ.ಕೊಟ್ಟಿಲ್ಲ, ಬೊಮ್ಮಾಯಿ ಬಜೆಟ್​ನಲ್ಲಿ ಇದನ್ನು ಪ್ರಸ್ತಾಪಿಸಿ ಕೇಂದ್ರಕ್ಕೆ ಧನ್ಯವಾದ ಸಲ್ಲಿಸಿದ್ದರು ಎಂದರು.

ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ನಿರ್ಮಲಾ ಸೀತಾರಾಮನ್ ಏನು ಹೇಳಿದ್ದರು ಎನ್ನುವುದನ್ನೂ ಹೇಳಿ ಎಂದು ಕೋಟ ಶ್ರೀನಿವಾಸ ಪೂಜಾರಿ,‌ ರವಿಕುಮಾರ್ ಆಗ್ರಹಿಸಿದರು. ಒನ್ ಸೈಡ್ ಭಾಷಣ ಆಗಬಾರದು, ಸೂಕ್ತ ಪ್ರಸ್ತಾವನೆ ಸಲ್ಲಿಸದೇ ಇರುವುದು ಹಾಗು ಅಗತ್ಯ ಅನುದಾನ ಇಡದೇ ಇರುವ ಕಾರಣ ಅನುದಾನ ಬಿಡುಗಡೆ ಆಗಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಈ ವೇಳೆ ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಪಾಯಿಂಟ್ ಆಫ್ ಆರ್ಡರ್ ಎತ್ತಿದರು. ಬರ, ನೆರೆ, ಕುಡಿಯುವ ನೀರು, ನೀತಿಗಳು ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದೇವೆ, ನಮ್ಮ ಪ್ರಸ್ತಾಪಗಳಿಗೆ ವಿವರಣೆ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ರಾಜ್ಯಕ್ಕೆ ಆಗಿರುವ ಅನ್ಯಾಯ ಕುರಿತು ರಾಜ್ಯಪಾಲರ ಭಾಷಣದಲ್ಲಿದೆ ಹೇಳುತ್ತಿದ್ದೇನೆ, ನಿಮ್ಮ ನಾಯಕತ್ವದಲ್ಲೇ ಕೇಂದ್ರಕ್ಕೆ ನಿಯೋಗ ಹೋಗೋಣ, ಪಿಎಂ ಹಾಗೂ ನಿರ್ಮಲಾ ಅವರ ಅಪಾಯಿಂಟ್​ಮೆಂಟ್ ಕೊಡಿಸಿ. ಭದ್ರಾ ಮೇಲ್ದಂಡೆ ಸೇರಿ ಬಾಕಿ ಇರುವ ಅನುದಾನ ಕೇಳೋಣ ಎಂದರು.

ನಂತರ ಹಸಿವಿನ ಇಂಡೆಕ್ಸ್ ಕುರಿತು ಮೋದಿ ಅವರ ಆಡಳಿತದಲ್ಲಿ ಭಾರತ ಹಸಿವಿನ ಇಂಡೆಕ್ಸ್​ನಲ್ಲಿ ಬಾಂಗ್ಲಾಗಿಂತ ಕೆಳಗಿದೆ ಎನ್ನುವ ಪ್ರಸ್ತಾಪ ಮಾಡಿದರು. ಇದಕ್ಕೆ ಕಿಡಿಕಾರಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಹಸಿವಿನ ಇಂಡೆಕ್ಸ್ ಸಿಎಂ, ಕಾಂಗ್ರೆಸ್ ಅಂಕಿ ಅಂಶವಲ್ಲ, ಇವರ ಸರ್ಕಾರದಲ್ಲಿ ಕೆಲವರು ಆಯಕಟ್ಟಿನ ಜಾಗಕ್ಕೆ ಬಂದು ಕುಳಿತಿದ್ದಾರೆ, ಅವರು ನೀಡಿರುವ ಮಾಹಿತಿ ಇದು ಎಂದರು.

ಪ್ರತಿಪಕ್ಷ ಸದಸ್ಯರು ಪದೇ ಪದೇ ಎದ್ದು ನಿಂತು ಮಾತನಾಡುತ್ತ ಉತ್ತರಕ್ಕೆ ಅಡ್ಡಿಪಡಿಸುತ್ತಿದ್ದಾರೆಂದು ನಾನು ಯಾವುದೇ ಪ್ರಶ್ನೆಗಳಿಗೆ ಉತ್ತರ ಕೊಡಲ್ಲ ಎಂದು ಸಿಎಂ ಕುಳಿತರು. ಸ್ಪಷ್ಟೀಕರಣಕ್ಕೂ ಮೊದಲೇ ಪ್ರಸ್ತಾವವನ್ನು ಮತಕ್ಕೆ ಹಾಕಲು ಸಭಾಪತಿ ಬಸವರಾಜ ಹೊರಟ್ಟಿ ಮುಂದಾದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ಕಡೆಗೆ ಬಿಜೆಪಿ ಸದಸ್ಯರ ಬೇಡಿಕೆ ಪರಿಗಣಿಸಿದ ಸಭಸಪತಿ ಹೊರಟ್ಟಿ ಸದಸ್ಯರ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಿ ಎಂದು ಸಿಎಂಗೆ ತಿಳಿಸಿದರು. ಆದರೆ ಇದಕ್ಕೆ ನಿರಾಕರಿಸಿದ ಸಿಎಂ ಯಾವುದಕ್ಕೂ ಉತ್ತರ ನೀಡಲ್ಲ ಈಗಾಗಲೇ ಹೇಳಬೇಕಾಗಿರುವದೆಲ್ಲವನ್ನೂ ಹೇಳಿಯಾಗಿದೆ ಎಂದು ಕುಳಿತರು. ಈ ವೇಳೆ ಬಿಜೆಪಿ ಸದಸ್ಯರು ಉತ್ತರಕ್ಕೆ ಪಟ್ಟು ಹಿಡಿದರು. ಹೀಗಾಗಿ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು.

ಈ ವೇಳೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ನಾಲ್ಕು ದಶಕದ ರಾಜಕಾರಣದಲ್ಲಿ ಇಂತಹ ಸದನ ನಾನು ನೋಡಿಲ್ಲ, ಇಡೀ ಸದನಕ್ಕೆ ಈ ಮಾತು ಹೇಳುತ್ತೇನೆ ಎನ್ನುತ್ತಲೇ ಸಿಎಂ ಉತ್ತರ ಕೊಡಬೇಕು ಎನ್ನುವ ಬಿಜೆಪಿ ಬೇಡಿಕೆ ತಳ್ಳಿಹಾಕಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವವನ್ನು ಮತಕ್ಕೆ ಹಾಕಿದರು. ಇದನ್ನು ಖಂಡಿಸಿ ಬಿಜೆಪಿ ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು, ಧಿಕ್ಕಾರ, ಘೋಷಣೆ ಮೊಳಗಿಸಿದರು.

ಆಡಳಿತ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು, ಪ್ರತಿಪಕ್ಷಗಳ ಸಭಾತ್ಯಾಗ, ಗದ್ದಲದ ನಡುವೆ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವವನ್ನು ವಿಧಾನ ಪರಿಷತ್ ಧ್ವನಿಮತದ ಮೂಲಕ ಅಂಗೀಕಾರ ನೀಡಿತು.

ಇದನ್ನೂ ಓದಿ: ಪಿಎಸ್​ಐ ಅಮಾನತುಗೊಳಿಸಿದ್ದೇವೆ, ಸದನಕ್ಕೆ ಮಾಹಿತಿ ನೀಡಿದ ಗೃಹ ಸಚಿವರು: ರಾಮನಗರದಲ್ಲಿ ವಕೀಲರ ವಿಜಯೋತ್ಸವ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.