ETV Bharat / state

ನಾನು ಯಾವುದೇ ಕಾರಣಕ್ಕೂ‌ ಬಿಜೆಪಿ ತೊರೆಯಲ್ಲ: ಶಂಕರ್​ ಪಾಟೀಲ್​ ಮುನೇನಕೊಪ್ಪ

author img

By ETV Bharat Karnataka Team

Published : Jan 29, 2024, 6:08 PM IST

Updated : Jan 29, 2024, 6:26 PM IST

i-will-not-leave-bjp-for-any-reason-says-shankar-patil-munenakoppa
ನಾನು ಯಾವದೇ ಕಾರಣಕ್ಕೂ‌ ಬಿಜೆಪಿ ಪಕ್ಷ ಬಿಡಲ್ಲ: ಶಂಕರ್​ ಪಾಟೀಲ್​ ಮುನೇನಕೊಪ್ಪ

ನಾನು ಬಿಜೆಪಿಯಲ್ಲಿಯೇ ಮುಂದುವರೆಯಲು ನಿರ್ಧರಿಸಿದ್ದೇನೆ ಎಂದು ಮಾಜಿ ಸಚಿವ ಶಂಕರ್​ ಪಾಟೀಲ್​ ಮುನೇನಕೊಪ್ಪ ಸ್ಪಷ್ಟಪಡಿಸಿದ್ದಾರೆ.

ಶಂಕರ್​ ಪಾಟೀಲ್​ ಮುನೇನಕೊಪ್ಪ

ಹುಬ್ಬಳ್ಳಿ: "ನಾನು ಮೊದಲಿನಿಂದಲೂ ಕಾಂಗ್ರೆಸ್ ವಿರೋಧಿ‌, ಅದಾಗ್ಯೂ ಕಾಂಗ್ರೆಸ್ ಪಕ್ಷದಲ್ಲಿ ನನ್ನ ಆತ್ಮೀಯರಿದ್ದಾರೆ. ಶೆಟ್ಟರ್​ ಬಿಜೆಪಿ ತೊರೆದ ಬಳಿಕ, ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಹಲವರು ನನಗೂ ಸಲಹೆ ನೀಡಿದ್ದರು. ಆದರೆ, ನಾನು ಬಿಜೆಪಿಯಲ್ಲೇ ಇರುವುದಾಗಿ ಹೇಳಿದ್ದೆ" ಎಂದು ಮಾಜಿ ಸಚಿವ ಶಂಕರ್​ ಪಾಟೀಲ್​ ಮುನೇನಕೊಪ್ಪ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಬಿಜೆಪಿ ನಾಯಕರಾದ ಜೆ ಪಿ ನಡ್ಡಾ, ಅಮಿತ್ ಶಾ, ಬಿ ಎಸ್ ಯಡಿಯೂರಪ್ಪ, ವಿಜಯೇಂದ್ರ ಹಾಗೂ ಪ್ರಹ್ಲಾದ್​ ಜೋಶಿ ಅವರು ಜಗದೀಶ ಶೆಟ್ಟರ್​ ಅವರನ್ನು ಮತ್ತೆ ಪಕ್ಷಕ್ಕೆ ಕರೆತಂದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಶೆಟ್ಟರ್​ ಬಿಜೆಪಿಗೆ ವಾಪಸಾಗಿರುವುದರಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಂತಾಗಿದೆ" ಎಂದರು.

ನಾನು ಕಾಂಗ್ರೆಸ್ ವಿರೋಧ ಮಾಡ್ತಾನೇ ಬೆಳೆದು ಬಂದಿದ್ದೇನೆ - ಮುನೇನಕೊಪ್ಪ: "ಕಳೆದ ಆಗಸ್ಟ್​ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಜನವರಿಯಲ್ಲಿ ನನ್ನ ರಾಜಕೀಯದ ಮುಂದಿನ ನಡೆ ತಿಳಿಸುತ್ತೇನೆ ಎಂದಿದ್ದೆ. ಹೀಗಾಗಿ ಇವತ್ತು ನಾನು ಮಾತನಾಡುತ್ತಿದ್ದೇನೆ. ಎಲ್ಲವೂ ಸುಖಾಂತ್ಯವಾಗಿದೆ. ಅನೇಕ ನಾಯಕರು ನನ್ನ ಜೊತೆ ಮಾತಾಡಿದ್ದರು. ಹೀಗಾಗಿ ನಾನು ಬಿಜೆಪಿಯಲ್ಲಿ ಮುಂದುವರೆಯುತ್ತೇನೆ‌. ಯಡಿಯೂರಪ್ಪ, ವಿಜಯೇಂದ್ರ, ಜೋಶಿ‌ ಎಲ್ಲರೂ ಮಾತನಾಡಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರು. ವಿಜಯೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷರಾದ ಮೇಲೆ ದೊಡ್ಡ ಮಟ್ಟದಲ್ಲಿ ಬದಲಾವಣೆಯಾಗಿದೆ. ಶೆಟ್ಟರ್ ವಾಪಸ್ ಬಂದಿರೋದರಿಂದ ನಮಗೆ ದೊಡ್ಡ ಶಕ್ತಿ ಬಂದಿದೆ. ನಾನು ಯಾವುದೇ ಕಾರಣಕ್ಕೂ‌ ಬಿಜೆಪಿ ಬಿಡಲ್ಲ. ಬಿಜೆಪಿ ಬಿಟ್ಟು ಹೋದವರನ್ನು ವಾಪಸ್ ಕರೆ ತರುವ ಪ್ರಯತ್ನ ಆಗುತ್ತಿದೆ. ನಾನು ಕಾಂಗ್ರೆಸ್​ಗೆ ಹೋಗೋ ವಿಚಾರ ಇಲ್ಲ. ನಾನು ಕಾಂಗ್ರೆಸ್ ವಿರೋಧ ಮಾಡ್ತಾನೆ ಬೆಳೆದು ಬಂದಿದ್ದೇನೆ" ಎಂದರು.

"ಕಾಂಗ್ರೆಸ್ ನಾಯಕರು ನನಗೆ ಪಕ್ಷಕ್ಕೆ ಬರುವಂತೆ ಆಹ್ವಾನ ಕೊಟ್ಟಿದ್ದು ನಿಜ. ನನ್ನನ್ನು ಕಾಂಗ್ರೆಸ್​ಗೆ ಕರಿಯೋ ಕೆಲಸವನ್ನು ಬಹಳ ಜನ ಮಾಡಿದ್ದರು. ನಾನು ಯಾರ ಮನೆಗೆ ಹೋಗಿರಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದರು. ಅವರಿಗೆ ಧನ್ಯವಾದ. ಶೆಟ್ಟರ್ ಜನ ಸಂಘದಿಂದ ಬಂದವರು, ಹೀಗಾಗಿ ಶೆಟ್ಟರ್ ವಾಪಸ್ ಅವರ ಮನೆಗೆ ಬಂದಿದ್ದಾರೆ. ನಾನು‌ ಜೋಶಿ, ಮಹೇಶ್​ ಟೆಂಗಿನಕಾಯಿ ಅವರ ಜೊತೆ ಮಾತನಾಡಿದ್ದೇನೆ. ಧಾರವಾಡ ಜಿಲ್ಲೆಯಲ್ಲಿ‌ ಸಣ್ಣಪುಟ್ಟ ಸಮಸ್ಯೆ ಇದೆ. ಜೋಶಿ ಅವರ ಮಾರ್ಗದರ್ಶನದಲ್ಲಿ ಎಲ್ಲವೂ ಸರಿಯಾಗಲಿದೆ‌" ಎಂದು ಹೇಳಿದರು.

"ಧಾರವಾಡ ಲೋಕಸಭೆ ಅಭ್ಯರ್ಥಿ ಬದಲಾವಣೆಯ ಪ್ರಶ್ನೆಯೇ ಇಲ್ಲ. ಪ್ರಹ್ಲಾದ್ ಜೋಶಿ ಅವರೇ ಬಿಜೆಪಿ ಅಭ್ಯರ್ಥಿ ಆಗ್ತಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುತ್ತೇವೆ. ನಾನು ಲೋಕಸಭೆಗೆ ಸ್ಪರ್ಧಿಸಲ್ಲ. ಲೋಕಸಭಾ ಚುನಾವಣೆ ಜವಾಬ್ದಾರಿ ಕೊಟ್ಟರೆ ಮಾಡುತ್ತೇನೆ. ಹೈಕಮಾಂಡ್ ಏನು ತೀರ್ಮಾನ ಕೈಗೊಳ್ಳುತ್ತೋ ಅದಕ್ಕೆ ನಾವು ಬದ್ಧ. ಶೆಟ್ಟರ್ ಬೆಳಗಾವಿಗೆ ಹೋಗ್ತಾರೋ, ಧಾರವಾಡದಲ್ಲೇ ಇರುತ್ತಾರೋ ನಮಗೆ ಗೊತ್ತಿಲ್ಲ" ಎಂದರು.

ಇದನ್ನೂ ಓದಿ: ಮಂಡ್ಯದಲ್ಲಿ ನೆಲೆ ಕಂಡುಕೊಳ್ಳಲು ಬಿಜೆಪಿಯಿಂದ ಪ್ರಚೋದನೆ: ಸಿಎಂ, ಡಿಸಿಎಂ ವಾಗ್ದಾಳಿ

Last Updated :Jan 29, 2024, 6:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.