ETV Bharat / bharat

ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ಎದುರು ಶವವಿಟ್ಟು ವಿಧವೆ ಕುಟುಂಬ ಪ್ರತಿಭಟನೆ: ಕಾರಣ? - WIDOW FAMILY PROTEST

author img

By ETV Bharat Karnataka Team

Published : May 16, 2024, 5:41 PM IST

ಕೇರಳದಲ್ಲಿ ವಿಧವಾ ಮಹಿಳೆಯ ಕುಟುಂಬವೊಂದು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಯ ಎದುರು ಶವವಿಟ್ಟು ಪ್ರತಿಭಟನೆ ನಡೆಸುತ್ತಿದೆ.

ವಿಮಾನಯಾನ ಸಂಸ್ಥೆಯ ಎದುರು ಶವವಿಟ್ಟು ಪ್ರತಿಭಟನೆ
ವಿಮಾನಯಾನ ಸಂಸ್ಥೆಯ ಎದುರು ಶವವಿಟ್ಟು ಪ್ರತಿಭಟನೆ (file Photo ETV Bharat)

ತಿರುವನಂತಪುರಂ: ಏರ್​​ ಇಂಡಿಯಾ ವಿಮಾನ ಸಂಸ್ಥೆಯಿಂದ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಕೇರಳದ ವಿಧವೆಯೊಬ್ಬರು ತನ್ನ ಕುಟುಂಬ ಸಮೇತ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪನಿಯು ತಮಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಕೇರಳದ ಏರ್​ ಇಂಡಿಯಾ ಕಚೇರಿಯ ಮುಂದೆ ಪತಿಯ ಶವವನ್ನು ಇಟ್ಟು ಮಹಿಳೆ ಧರಣಿ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಅವರ ಟಿಕೆಟ್​ ರದ್ದು ಮಾಡಿದ್ದರಿಂದ, ಒಮನ್​ನಲ್ಲಿ ತನ್ನ ಪತಿಯ ಸಾವಿಗೂ ಮುನ್ನ ಕೊನೆಯ ಬಾರಿಗೆ ನೋಡಲು ಸಾಧ್ಯವಾಗಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪ್ರತಿಭಟನೆಗೆ ಕಾರಣವಿದು: ಇತ್ತೀಚೆಗೆ ಏರ್​ ಇಂಡಿಯಾ ಸಿಬ್ಬಂದಿಯು ಮುಷ್ಕರ ಹಮ್ಮಿಕೊಂಡಿದ್ದರು. ಇದೇ ವೇಳೆ ಒಮನ್​ನಲ್ಲಿ ಕೇರಳದ ವ್ಯಕ್ತಿ ಹೃದಯಾಘಾತಕ್ಕೀಡಾಗಿದ್ದರು. ಅವರನ್ನು ಕಾಣಲು ಹೊರಟಿದ್ದ ಪತ್ನಿಯ ಪ್ರಯಾಣವು ಮುಷ್ಕರದಿಂದಾಗಿ ರದ್ದಾಗಿತ್ತು. ಬಳಿಕ ಇನ್ನೊಂದು ಬಾರಿ ಟಿಕೆಟ್​ ಬುಕ್​ ಮಾಡಿದಾಗಲೂ ಮತ್ತೆ ಅದು ರದ್ದಾಗಿತ್ತು. ದುರಂತವೆಂದರೆ ಆ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತಿಯನ್ನು ಕೊನೆಯ ಬಾರಿಗೆ ನೋಡಲು ಬಯಸಿದ್ದ ಪತ್ನಿಯ ಟಿಕೆಟ್​ ಅನ್ನು ಎರಡು ಬಾರಿ ರದ್ದು ಮಾಡಿದ್ದು, ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಟಿಕೆಟ್​ ರದ್ದು ಮಾಡಿದ್ದರಿಂದ ತಾವು ಒಮನ್​ಗೆ ತೆರಳಲು ಸಾಧ್ಯವಾಗಲಿಲ್ಲ. ಇದರಿಂದ ದುರಂತ ಸಂಭವಿಸಿದೆ. ಇದು ವಿಮಾನಯಾನದಿಂದಾದ ಎಡವಟ್ಟು ಎಂದು ಆರೋಪಿಸಿ ಮಹಿಳೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಏರ್‌ಲೈನ್ಸ್‌ನ ಅಸಡ್ಡೆಯಿಂದ ತನ್ನ ಅಳಿಯನನ್ನು ಕಳೆದುಕೊಳ್ಳಬೇಕಾಗಿ ಬಂತು ಎಂದು ಮಹಿಳೆಯ ತಂದೆ ಆರೋಪಿಸಿದ್ದಾರೆ. ಏರ್‌ಲೈನ್ಸ್ ಕಚೇರಿಯ ಮುಖ್ಯ ಬಾಗಿಲಿನ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿರುವ ಅವರು, ಏರ್ ಇಂಡಿಯಾ ನಿರ್ಧಾರ ತೆಗೆದುಕೊಳ್ಳುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ವಿಮಾನಯಾನ ಸಂಸ್ಥೆ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು. ಇಂತಹ ಘಟನೆ ಮುಂದೆ ನಡೆಯಬಾರದು. ನಷ್ಟ ಭರಿಸುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹೃದಯಾಘಾತಕ್ಕೀಡಾಗಿ ತಮ್ಮ ಅಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ. ಮೇ 8 ರಂದು ಒಮನ್​ಗೆ ತೆರಳಲು ಮಗಳು ಏರ್​ ಇಂಡಿಯಾದ ಟಿಕೆಟ್ ಬುಕ್​ ಮಾಡಿದ್ದಳು. ಆದರೆ, ಅದು ರದ್ದಾಯಿತು. ಮರುದಿನ ಮತ್ತೊಂದು ವಿಮಾನದ ಲಭ್ಯತೆಯಿಂದ ಮತ್ತೊಂದು ಟಿಕೆಟ್​ ಬುಕ್​ ಮಾಡಲಾಯಿತು. ಆದರೆ, ಅದನ್ನೂ ರದ್ದು ಮಾಡಲಾಗಿದೆ. ಮೇ 13 ರಂದು ತಮ್ಮ ಅಳಿಯ ಸಾವಿಗೀಡಾಗಿದ್ದಾರೆ. ಪತಿಯನ್ನು ನೋಡಲು ಸಾಧ್ಯವಾಗದಿರುವುದು ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಸಾಮೂಹಿಕ ರಜೆ ಹಾಕಿದ್ದ ಸಿಬ್ಬಂದಿ: ಏರ್​ ಇಂಡಿಯಾ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಸಾಮೂಹಿಕ ಅನಾರೋಗ್ಯ ರಜೆ ಹಾಕಿ ಮುಷ್ಕರ ಹಮ್ಮಿಕೊಂಡಿದ್ದರು. ಇದರಿಂದ 260 ಕ್ಕೂ ಅಧಿಕ ವಿಮಾನ ಪ್ರಯಾಣವನ್ನು ರದ್ದು ಮಾಡಲಾಗಿತ್ತು. ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲು ನಿರ್ಧರಿಸಿದ ಬಳಿಕ ಅವರೆಲ್ಲರೂ ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ.

ಇದನ್ನೂ ಓದಿ: ಏರ್​ ಇಂಡಿಯಾ ವಿರುದ್ಧ ಪ್ರತಿಭಟನೆಗೆ ಮುಂದಾದ ವಿಧವೆ ಕುಟುಂಬ; ಕಾರಣ ಇದು - AIR INDIA EXPRESS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.