ETV Bharat / state

ಲೋಕಸಭಾ ಚುನಾವಣೆ, ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ಧತೆ : ಡಿಸಿ ನಿತೇಶ್ ಪಾಟೀಲ್​​ - DC Nitesh Patil

author img

By ETV Bharat Karnataka Team

Published : May 5, 2024, 10:10 PM IST

ಲೋಕಸಭೆ ಚುನಾವಣೆಯ ಕುರಿತು ಡಿಸಿ ನಿತೇಶ್​ ಪಾಟೀಲ್ ಅವರು ಮಾಹಿತಿ ನೀಡಿದರು.

DC Nitesh Patil
ಡಿಸಿ ನಿತೇಶ್​ ಪಾಟೀಲ್ (ETV Bharat)

ಡಿಸಿ ನಿತೇಶ್​ ಪಾಟೀಲ್ (ETV Bharat)

ಬೆಳಗಾವಿ : ಲೋಕಸಭಾ ಚುನಾವಣೆ ಮೇ 7 ರಂದು ನಡೆಯಲಿದ್ದು, ಸುಗಮ‌ ಮತ್ತು ಶಾಂತಿಯುತ ಮತದಾನ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನು‌ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ನಿತೇಶ್ ಪಾಟೀಲ್ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಭಾನುವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ 9,57,559 ಪುರುಷ ಮತದಾರರು, 9,66,134 ಮಹಿಳೆಯರು, 95 ಇತರೆ ಸೇರಿದಂತೆ 19,23,788 ಮತದಾರರಿದ್ದಾರೆ.

ಅದೇ ರೀತಿಯಲ್ಲಿ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದಲ್ಲಿ 8,85,200 ಪುರುಷರು, 8,76,414 ಮಹಿಳೆಯರು ಹಾಗೂ 80 ಇತರೆ ಮತದಾರರು ಸೇರಿದಂತೆ ಒಟ್ಟು 17,61,694 ಮತದಾರರಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 20,55,870 ಪುರುಷ ಮತದಾರರು, 20,49,169 ಮಹಿಳಾ ಮತದಾರರು ಹಾಗೂ 186 ಇತರೆ ಮತದಾರರು ಸೇರಿದಂತೆ ಒಟ್ಟು 41,05,225 ಮತದಾರರಿದ್ದಾರೆ ಎಂದು ತಿಳಿಸಿದರು.

ಭಾರತ ಚುನಾವಣಾ ಆಯೋಗ ಅನುಮೋದಿಸಿರುವಂತೆ ಮತದಾರರು ತಮ್ಮ ಮತ ಚಲಾಯಿಸುವ ಮೊದಲು ಮತದಾನ ಕೇಂದ್ರಗಳಲ್ಲಿ ಅವರ ಗುರುತಿಗಾಗಿ ಮತದಾರರ ಗುರುತಿಸಿ, ಚೀಟಿ ತೋರಿಸಿ, ಮತದಾನ ಮಾಡಬಹುದಾಗಿದೆ. ಮತದಾನದ ದಿನದಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿ, ಮತ ಚಲಾಯಿಸುವಂತೆ ಈ ವೇಳೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಮತಗಟ್ಟೆಗಳಲ್ಲಿ ಬಿಸಿಲಿನ ತಾಪವನ್ನು ನೀಗಿಸಲು ಕ್ರಮ : ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ಪೀಠೋಪಕರಣಗಳು, ಪುರುಷರು ಮತ್ತು ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮತ್ತು ಮತದಾರರಿಗೆ ಸಹಾಯವಾಗಲು ಸಂಕೇತ ಫಲಕಗಳನ್ನು ಅಳವಡಿಸಲಾಗಿದೆ. ಮತಗಟ್ಟೆಯ ಅಕ್ಕಪಕ್ಕದ ಕೊಠಡಿಗಳನ್ನು ವಿಶ್ರಾಂತಿ ಕೊಠಡಿಗಳನ್ನಾಗಿ ಸಿದ್ಧವಿರಿಸಲಾಗಿದೆ. ಮತಗಟ್ಟೆ ಆವರಣದಲ್ಲಿ ಶುಶ್ರೂಷಕರು/ಆಶಾ ಕಾರ್ಯಕರ್ತರೊಂದಿಗೆ ವೈದ್ಯಕೀಯ ಕಿಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆ ಸೌಲಭ್ಯವಿರುತ್ತದೆ.

ಸಾರ್ವತ್ರಿಕ ರಜೆ ಘೋಷಣೆ : ಲೋಕಸಭಾ ಕ್ಷೇತ್ರಗಳ ಅಡಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಕಾಲೇಜುಗಳು (ಅನುದಾನಿತ ಶಿಕ್ಷಣ ಸಂಸ್ಥೆಗಳು ಸೇರಿದಂತೆ) ಮತ್ತು ಸಾರ್ವಜನಿಕ ವಲಯದ ಉದ್ಯಮಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಅಲ್ಲದೇ ಕಾನೂನುಬಾಹಿರ ಸಭೆಗಳನ್ನು ನಿಷೇಧಿಸಲಾಗಿದೆ ಮತ್ತು ಮತದಾನದ ಮುಕ್ತಾಯಕ್ಕೆ ನಿಗದಿಪಡಿಸಿದ ಗಂಟೆಯೊಂದಿಗೆ ಕೊನೆಗೊಳ್ಳುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸುವುದನ್ನು ನಿಷೇಧಿಸುವ ಬಗ್ಗೆ ಆದೇಶಗಳನ್ನು ನೀಡಲಾಗಿದೆ.

ಮಧ್ಯಪಾನ ಮಾರಾಟವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ರಾಜಕೀಯ ಪ್ರಚಾರಕ್ಕಾಗಿ ಮತದಾನದ ಮುಕ್ತಾಯದ ಸಮಯದೊಂದಿಗೆ ಕೊನೆಗೊಳ್ಳುವ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಧ್ವನಿವರ್ಧಕವನ್ನು ಬಳಸಲು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಮಾಧ್ಯಮಗೋಷ್ಟಿಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಶುಭಂ ಶುಕ್ಲಾ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಇದ್ದರು.

ಇದನ್ನೂ ಓದಿ : ಶಿವಮೊಗ್ಗ ಜಿಲ್ಲೆಯಲ್ಲಿ 87 ಅತಿಸೂಕ್ಷ್ಮ ಮತಗಟ್ಟೆಗಳು; ಡಿಸಿ ಗುರುದತ್ತ ಹೆಗಡೆ - SHIVAMOGGA LOK SABHA CONSTIUENCY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.