ETV Bharat / state

ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ರಾಜು ಕಾಗೆ - Congress MLA Raju Kage

author img

By ETV Bharat Karnataka Team

Published : May 1, 2024, 3:03 PM IST

CONGRESS MLA RAJU KAGE  STATEMENT AGAINST MODI  BELAGAVI
ಕಾಂಗ್ರೆಸ್ ಶಾಸಕ ರಾಜು ಕಾಗೆ

ಒಂದು ವೇಳೆ ಮೋದಿ ಸತ್ತರೆ ಮುಂದೆ ಯಾರೂ ದೇಶದ ಪ್ರಧಾನಿ ಆಗುವುದಿಲ್ಲವೇ? ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಕೆ

ಚಿಕ್ಕೋಡಿ(ಬೆಳಗಾವಿ): ನಾನು ವಿದ್ಯಾವಂತ. ಕುರಿ ಅಲ್ಲ. ನನಗೆ ಬುದ್ಧಿ ಇದೆ. ನಾನು ದೇಶವನ್ನು ಸಮರ್ಥ ರೀತಿಯಲ್ಲಿ ನಡೆಸುತ್ತೇನೆ ಎಂಬ ಆತ್ಮವಿಶ್ವಾಸವಿದೆ. ನಾಳೆ ಏನಾದ್ರೂ ಪ್ರಧಾನಮಂತ್ರಿ ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ದೇಶದ ಪ್ರಧಾನಿ ಆಗುವುದಿಲ್ಲವೇ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ರಾಜು ಕಾಗೆ ಪ್ರಶ್ನಿಸಿದ್ದಾರೆ.

ಮದಭಾವಿ ಗ್ರಾಮದಲ್ಲಿ ನಡೆದ ಲೋಕಸಭೆ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 140 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಪ್ರಧಾನಿ ಹುದ್ದೆಗೆ ಯಾರೂ ಸೂಕ್ತ ಅಭ್ಯರ್ಥಿ ಇಲ್ಲವೇನೋ?. ಇವತ್ತಿನ ಯುವಕರು ಮೋದಿ ಮೋದಿ ಎನ್ನುತ್ತಾರೆ. ಮೋದಿ ಅವರನ್ನು ತೆಗೆದುಕೊಂಡು ಏನು ಮಾಡುತ್ತೀರಿ? ಎಂದ ಕೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೇಕು. ಬಿಜೆಪಿ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಯವರ ಮುಖ ನೋಡಿ ಮತ ಹಾಕಿ ಎಂದು ಹೇಳುತ್ತಿದ್ದಾರೆ. ಈ ಭಾಗದ ಸಂಸದರು ಯಾವುದೇ ಅಭಿವೃದ್ಧಿ ಮಾಡಿಲ್ಲ ಎಂದು ಚಿಕ್ಕೋಡಿ ಬಿಜೆಪಿ ಅಭ್ಯರ್ಥಿ ಅಣ್ಣಸಾಬ್ ಜೊಲ್ಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಇಲ್ಲಿ ಏನಾದರೂ ಸಮಸ್ಯೆಯಾದರೆ ನಾನೇ ನಿಮಗೆ ಸಹಾಯ ಮಾಡಬೇಕು. ಮೋದಿ ಇಲ್ಲಿ ಬರಲು ಆಗುವುದಿಲ್ಲ. ಹೀಗಾಗಿ ನೀವು ನಮಗೆ ಮತ ನೀಡಬೇಕು ಎಂದು ಹೇಳಿದರು.

ಆರ್.​ಅಶೋಕ್ ತಿರುಗೇಟು: ನರೇಂದ್ರ ಮೋದಿ ಸಾವು ಬಯಸುವ ನೀಚ ಮನಸ್ಥಿತಿ ಕಾಂಗ್ರೆಸ್​​ನದ್ದು. ಮೋದಿ ನೂರು ವರ್ಷ ಬಾಳಲಿದ್ದಾರೆ. ದೇಶದ ಜನರ ಆಶೀರ್ವಾದ ಅವರ ಮೇಲಿದೆ. ಅವರು ಮತ್ತೆ ಪ್ರಧಾನಿಯಾಗುವುದು ಖಚಿತ. ಕಾಂಗ್ರೆಸ್​ನ ಇಂತಹ ಹೇಳಿಕೆಗಳೇ ಕಾಂಗ್ರೆಸ್‌ಮುಕ್ತ ಭಾರತಕ್ಕೆ ಮುನ್ನುಡಿಯಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜು ಕಾಗೆ ಹೇಳಿಕೆ ಕಾಂಗ್ರೆಸ್ ಪಕ್ಷದ ಹೇಳಿಕೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಕಾಂಗ್ರೆಸ್​ನವರು ಇಂತಹ ನೀಚ ಹೇಳಿಕೆಗಳನ್ನು ಬಹಳ ಸಲ ಕೊಟ್ಟಿದ್ದಾರೆ. ಟೀ ಮಾರುವವ, ಚೌಕಿದಾರ, ಪರಿವಾರ ಇಲ್ಲದವ ಎಂದವರು ಈಗ ಮೋದಿ ಸಾವು ಆಗಬೇಕು ಎನ್ನುತ್ತಿದ್ದಾರೆ. ಇವರಿಗೆ ರಾಜಕೀಯವಾಗಿ ಮೋದಿಯನ್ನು ಎದುರಿಸುವ ದಮ್ಮಿಲ್ಲ, ಧೈರ್ಯವಿಲ್ಲ. ಇವರೆಲ್ಲಾ ದೇಶವನ್ನು ಲೂಟಿ ಹೊಡೆದ ಭ್ರಷ್ಟಾಚಾರಿಗಳು. ಕೂಡಲೇ ರಾಜು ಕಾಗೆ ಅವರನ್ನು ಕಾಂಗ್ರೆಸ್ ಅಮಾನತು ಮಾಡಬೇಕು. ಇಲ್ಲದೇ ಇದ್ದಲ್ಲಿ ಇದು ಕಾಂಗ್ರೆಸ್ ಹೇಳಿಕೆಯಾಗಲಿದೆ. ನಾವು ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದರು.

ಇದನ್ನೂ ಓದಿ: ಶೋಷಿತರ ಬಗ್ಗೆ ಕಾಳಜಿಯಿದ್ದರೆ ಎಸ್‌ಸಿಪಿ- ಎಸ್‌ಟಿಪಿ ಯೋಜನೆ ಜಾರಿ ಮಾಡಿ: ಮೋದಿಗೆ ಸಿಎಂ ಸಿದ್ದರಾಮಯ್ಯ ಆಗ್ರಹ - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.