ETV Bharat / business

ಕಚ್ಚಾ ತೈಲದ ವಿಂಡ್​ಫಾಲ್ ತೆರಿಗೆ ಕಡಿತ: ಒಎನ್​ಜಿಸಿ, ಆಯಿಲ್​ ಇಂಡಿಯಾಗೆ ಲಾಭ - Windfall Tax

author img

By ETV Bharat Karnataka Team

Published : May 16, 2024, 12:32 PM IST

ಕಚ್ಚಾ ತೈಲದ ಮೇಲಿನ ವಿಂಡ್​ಫಾಲ್ ತೆರಿಗೆಯನ್ನು ಗುರುವಾರದಿಂದ ಜಾರಿಗೆ ಬರುವಂತೆ ಕಡಿತಗೊಳಿಸಲಾಗಿದೆ.

Centre cuts windfall tax on crude oil
ವಿಂಡ್​ಫಾಲ್ ತೆರಿಗೆ ಕಡಿತ (IANS)

ನವದೆಹಲಿ: ಕೇಂದ್ರ ಸರಕಾರವು ಗುರುವಾರದಿಂದ ಜಾರಿಗೆ ಬರುವಂತೆ ಪೆಟ್ರೋಲಿಯಂ ಕಚ್ಚಾ ತೈಲದ ಮೇಲಿನ ವಿಂಡ್​ಫಾಲ್ ತೆರಿಗೆಯನ್ನು ಪ್ರತಿ ಮೆಟ್ರಿಕ್ ಟನ್ ಗೆ 8,400 ರೂ.ಗಳಿಂದ 5,700 ರೂ.ಗಳಿಗೆ (68.34 ಡಾಲರ್) ಕಡಿತಗೊಳಿಸಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳಿಗೆ ಅನುಗುಣವಾಗಿ ಪ್ರತಿ ಹದಿನೈದು ದಿನಕ್ಕೊಮ್ಮೆ ಮಾಡಲಾಗುವ ತೆರಿಗೆ ಪರಿಷ್ಕರಣೆಯ ಭಾಗವಾಗಿ ಕೇಂದ್ರ ಸರ್ಕಾರ ವಿಂಡ್​ ಫಾಲ್ ತೆರಿಗೆಯನ್ನು ಇಳಿಸಿದೆ. ಇದು ಸತತವಾಗಿ ಎರಡನೇ ಬಾರಿಯ ತೆರಿಗೆ ಕಡಿತವಾಗಿದೆ. ಮೇ 1 ರಂದು ವಿಂಡ್​ ಫಾಲ್​ ತೆರಿಗೆಯನ್ನು ಪ್ರತಿ ಮೆಟ್ರಿಕ್ ಟನ್​ಗೆ 9,600 ರೂ.ಗಳಿಂದ 8,400 ರೂ.ಗಳಿಗೆ ಕಡಿತ ಮಾಡಲಾಗಿತ್ತು.

ಇದರಿಂದ ದೇಶದ ಪ್ರಮುಖ ತೈಲ ಪರಿಶೋಧನೆ ಮತ್ತು ಉತ್ಪಾದನಾ ಕಂಪನಿಗಳಾದ ಒಎನ್​ಜಿಸಿ ಮತ್ತು ಆಯಿಲ್ ಇಂಡಿಯಾ ಲಿಮಿಟೆಡ್ ತಾವು ಉತ್ಪಾದಿಸುವ ಕಚ್ಚಾ ತೈಲದ ಮೇಲೆ ಪಾವತಿಸಬೇಕಿರುವ ತೆರಿಗೆ ಪ್ರಮಾಣ ಕಡಿಮೆಯಾಗಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಕುಸಿದಿರುವುದರಿಂದ ಮತ್ತು ತೈಲ ಉತ್ಪಾದಕ ಕಂಪನಿಗಳ ಆದಾಯವೂ ಕುಸಿದಿರುವುದರಿಂದ ವಿಂಡ್​ಫಾಲ್ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಪ್ರಸ್ತುತ ಬ್ಯಾರೆಲ್ ಗೆ 82 ಡಾಲರ್ ಗಿಂತ ಸ್ವಲ್ಪ ಹೆಚ್ಚಾಗಿದೆ.

ಕಚ್ಚಾ ತೈಲ ಬೆಲೆಗಳು ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ಏಪ್ರಿಲ್ 16 ರಂದು ಸರ್ಕಾರವು ಪೆಟ್ರೋಲಿಯಂ ಕಚ್ಚಾ ತೈಲದ ಮೇಲಿನ ವಿಂಡ್​ಫಾಲ್ ತೆರಿಗೆಯನ್ನು ಮೆಟ್ರಿಕ್ ಟನ್​ಗೆ 6,800 ರೂ.ಗಳಿಂದ 9,600 ರೂ.ಗೆ ಹೆಚ್ಚಿಸಿತ್ತು.

ವಿಂಡ್​ಫಾಲ್ ತೆರಿಗೆ ಎಂದರೇನು?: ತೈಲ ಬೆಲೆಗಳಲ್ಲಿನ ಹಠಾತ್ ಏರಿಕೆಯಿಂದ ತೈಲ ಕಂಪನಿಗಳ ಆದಾಯ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದರಿಂದ ಮತ್ತು ವಿತ್ತೀಯ ಕೊರತೆಯನ್ನು ಕಡಿಮೆ ಮಾಡುವ ಸಲುವಾಗಿ ಈ ಲಾಭದ ಒಂದು ಭಾಗವನ್ನು ಬಳಸಿಕೊಳ್ಳಲು ಸರ್ಕಾರ ಬಯಸಿದ್ದರಿಂದ ಕಳೆದ ವರ್ಷ ಜುಲೈನಲ್ಲಿ ಕಚ್ಚಾ ತೈಲದ ಮೇಲೆ ಪ್ರಥಮ ಬಾರಿಗೆ ವಿಂಡ್​ಫಾಲ್ ತೆರಿಗೆ ವಿಧಿಸಲು ಆರಂಭಿಸಲಾಗಿತ್ತು.

ಖಾಸಗಿ ಸಂಸ್ಕರಣಾಗಾರಗಳು ದೇಶೀಯ ಮಾರುಕಟ್ಟೆಯಲ್ಲಿ ಇಂಧನಗಳನ್ನು ಮಾರಾಟ ಮಾಡುವ ಬದಲು ಹೆಚ್ಚಿನ ಲಾಭಕ್ಕಾಗಿ ಸಾಗರೋತ್ತರ ಮಾರುಕಟ್ಟೆಗಳಿಗೆ ಇಂಧನ ಮಾರಾಟ ಮಾಡಲು ಪ್ರಾರಂಭಿಸಿದ್ದರಿಂದ ಪೆಟ್ರೋಲ್, ಡೀಸೆಲ್ ಮತ್ತು ವಾಯುಯಾನ ಇಂಧನದ ರಫ್ತುಗಳಿಗೆ ಕೂಡ ವಿಂಡ್​ಫಾಲ್ ತೆರಿಗೆಯನ್ನು ವಿಸ್ತರಿಸಲಾಯಿತು. ಪ್ರಸ್ತುತ ಸುತ್ತಿನಲ್ಲಿ ಸರ್ಕಾರವು ಈ ಇಂಧನಗಳ ಮೇಲಿನ ವಿಂಡ್​ಫಾಲ್ ತೆರಿಗೆಯನ್ನು ಬದಲಾವಣೆ ಮಾಡಿಲ್ಲ.

ಇದನ್ನೂ ಓದಿ : ಭಾರ್ತಿ ಏರ್ಟೆಲ್ ನಿವ್ವಳ ಲಾಭ ಶೇ 31ರಷ್ಟು ಕುಸಿತ: ಪ್ರತಿ ಷೇರಿಗೆ 8 ರೂ. ಲಾಭಾಂಶ ಘೋಷಣೆ - Airtel Net Profit

ETV Bharat Logo

Copyright © 2024 Ushodaya Enterprises Pvt. Ltd., All Rights Reserved.