ETV Bharat / state

ಚಿಕ್ಕಮಗಳೂರು - ಮನೆಗೆ ನುಗ್ಗಿ ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

author img

By ETV Bharat Karnataka Team

Published : Feb 24, 2024, 8:52 AM IST

Updated : Feb 24, 2024, 1:50 PM IST

Arrested Accused
ಬಂಧಿತ ಆರೋಪಿಗಳು

ಮನೆಗೆ ನುಗ್ಗಿ, ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ ಹಣ ಹಾಗೂ ಚಿನ್ನಾಭರಣ ದರೋಡೆ ನಡೆಸಿದ್ದ ಆರೋಪಿಗಳಲ್ಲಿ ಐವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ತೋಟದ ಮನೆಯೊಂದಕ್ಕೆ ನುಗ್ಗಿ ಮನೆಯವರ ಮೇಲೆ ಹಲ್ಲೆ ನಡೆಸಿ ಹಣ ಆಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು - ಮನೆಗೆ ನುಗ್ಗಿ ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

ಘಟನೆ ಹಿನ್ನೆಲೆ: ಫೆಬ್ರವರಿ 15 ರಂದು ಮೂಡಿಗೆರೆ ತಾಲೂಕು ಬಾಳೂರು ಹೋಬಳಿ ಜೆ.ಹೊಸಳ್ಳಿ ಗ್ರಾಮದ ಅನಂತರಾಮ್ ಹೆಬ್ಬಾರ್​ ಎಂಬುವವರ ಮನೆಯಲ್ಲಿ ದರೋಡೆ ನಡೆದಿತ್ತು. ಮನೆಗೆ ನುಗ್ಗಿದ್ದ ದರೋಡೆ ಕೋರರು ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ, ಹೆದರಿಸಿ ಬೀರುವಿನಲ್ಲಿದ್ದ 5,25,000 ರೂ. ನಗದು ಮತ್ತು 1,25,000 ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ವೇಳೆ, ತಡೆಯಲು ಹೋಗಿದ್ದ ಶ್ರೀನಿವಾಸ ಮೂರ್ತಿ ಎಂಬ ಕೆಲಸಗಾರರಿಗೆ, ದರೋಡೆಕೋರರು ಚಾಕುವಿನಿಂದ ಹಲ್ಲೆ ಮಾಡಿ, ಟಿವಿ ಒಡೆದು ಹಾಕಿದ್ದರು.

ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ 395, 397, 427, 450 ಐಪಿಸಿ ಸೆಕ್ಷನ್​ ಅಡಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಅನ್ಸರ್ ಅಲಿಯಾಸ್ ಅಂಚು, ಬೆಳ್ತಂಗಡಿ ಮೂಲದ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಮೂಡಿಗೆರೆ ತಾಲೂಕು ಬೆಟ್ಟದಮನೆ ಗ್ರಾಮದ ಶೈನಿಂಗ್ ಕುಮಾರ್ ಅಲಿಯಾಸ್ ಶೈನಿ, ಅಣಜೂರು ಗ್ರಾಮದ ಅಶ್ರಫ್ ಆಲಿಯಾಸ್ ಹಸರಬ್, ಜನ್ನಾಪುರ ಗ್ರಾಮದ ಉಮೇಶ್​ನನ್ನು ಬಂಧಿಸಲಾಗಿದೆ.

Arrested Accused
ಬಂಧಿತ ಆರೋಪಿಗಳು

ಇವರಲ್ಲಿ ಅನ್ಸರ್ ದರೋಡೆ ನಡೆಸಿ ಎಸ್ಕೇಪ್ ಆಗುವ ವೇಳೆ ಕತ್ತಲೆಯಲ್ಲಿ ದಾರಿತಪ್ಪಿ ಸ್ಥಳೀಯರ ಕೈಗೆ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾಗಿದ್ದ, ಉಳಿದವರು ದರೋಡೆ ಮಾಡಿ ಬೇರೆ ಬೇರೆ ದಿಕ್ಕಿಗೆ ತೆರಳಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಒಬ್ಬೊಬ್ಬರೇ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕಾಫಿ ವ್ಯಾಪಾರಕ್ಕೆ ಬಂದು ದರೋಡೆಗೆ ಸ್ಕೆಚ್: ಈ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಟ್ಟದಮನೆ ಮೂಲದ ಶೈನಿಂಗ್ ಕುಮಾರ್ ಕಾಫಿ ವ್ಯಾಪಾರಿಯಾಗಿದ್ದು, ದರೋಡೆ ನಡೆದ ಅನಂತ ಹೆಬ್ಬಾರ್ ಅವರ ಮನೆಯಿಂದ ಕಾಫಿ ಖರೀದಿಸುತ್ತಿದ್ದ ಎಂದು ತಿಳಿದು ಬಂದಿದೆ. ಅವನೇ ಈ ಮನೆಯನ್ನು ದರೋಡೆಗೆ ಟಾರ್ಗೆಟ್ ಮಾಡಿ ಉಳಿದವರನ್ನು ಒಟ್ಟು ಸೇರಿಸಿ ಈ ಕೃತ್ಯಕ್ಕೆ ಮುಂದಾಗಿದ್ದ. ಇವರೆಲ್ಲರೂ ದರೋಡೆ ಮಾಡುವ ಹಿಂದಿನ ದಿನ ಕೊಟ್ಟಿಗೆಹಾರದ ಅನಿಲ್ ಲಾಡ್ಜ್​ನಲ್ಲಿ ತಂಗಿದ್ದರು. ಇಸ್ಪೀಟ್ ಆಟದ ಗ್ಯಾಂಗ್​ನಲ್ಲಿ ಪರಸ್ಪರ ಪರಿಚಯಸ್ಥರಾಗಿದ್ದು, ದರೋಡೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಜಿಲ್ಲಾ ಎಸ್ಪಿ ವಿಕ್ರಂ ಆಮಟೆ, ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ವಿವಿಧ ಆಯಾಮಗಳಿಂದ ಆರೋಪಿಗಳ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಮನೆಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ ಹಣ, ಚಿನ್ನ ದರೋಡೆ

Last Updated :Feb 24, 2024, 1:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.