ETV Bharat / state

ಬಿ.ವೈ. ರಾಘವೇಂದ್ರ ಪುನರಾಯ್ಕೆ ವಿಚಾರ: ಶಾಮನೂರು ಹೇಳಿಕೆ ಸ್ವಾಗತಿಸಿದ ಯಡಿಯೂರಪ್ಪ

author img

By ETV Bharat Karnataka Team

Published : Jan 27, 2024, 2:32 PM IST

ಬಿ.ವೈ. ರಾಘವೇಂದ್ರ ಪುನರಾಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಶಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಯನ್ನು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ.

BY Raghavendra  BS Yeddyurappa  Shamanur Shivashankarappa  ಬಿವೈ ರಾಘವೇಂದ್ರ ಪುನರಾಯ್ಕೆ ವಿಚಾರ  ಶಾಮನೂರು ಹೇಳಿಕೆ ಸ್ವಾಗತಿಸಿದ ಯಡಿಯೂರಪ್ಪ
ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಸಂಸದ ಬಿ ವೈ ರಾಘವೇಂದ್ರ ಪರ ಬ್ಯಾಟ್​ ಬೀಸಿದ ದಾವಣಗೆರೆಯ ಕಾಂಗ್ರೆಸ್​ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಸ್ವಾಗತಿಸಿದ್ದಾರೆ. ''ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಪುನರಾಯ್ಕೆ ಆಗಬೇಕು ಎಂದು ನಮ್ಮ ಸಮಾಜದ ಮುಖಂಡರಾದ ಕಾಂಗ್ರೆಸ್​ನ ದಾವಣಗೆರೆ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಸಂತಸ ತಂದಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದು ಬಿಜೆಪಿ ಹಿರಿಯ ನಾಯಕ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಶಾಮನೂರು ಶಿವಶಂಕರಪ್ಪ ಅವರು ನಮ್ಮ ಸಮಾಜದ ಹಿರಿಯ ಮುಖಂಡರು. ಅವರು ಶಿವಮೊಗ್ಗ ಸಂಸದ ಬಿ ವೈ ರಾಘವೇಂದ್ರ ಮಾಡಿರುವ ಕೆಲಸ ಮೆಚ್ಚಿ ಅವರನ್ನು ಪುನರಾಯ್ಕೆ ಮಾಡಬೇಕೆಂದು ಹೇಳಿರೋದು ನಮ್ಮ ಸಮಾಜದ ಬಂಧುಗಳಿಗೆ, ಕಾರ್ಯಕರ್ತರಿಗೆ ಸಂತೋಷ ಉಂಟು ಮಾಡಿದೆ. ಶಾಮನೂರು ಅವರಂತಹ ಹಿರಿಯರು ಆಶೀರ್ವಾದ ಮಾಡಿರೋದು ಖುಷಿಯಾಗಿದೆ. ಅದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ'' ಎಂದರು.

''ಮತ್ತೆ ರಾಘವೇಂದ್ರನನ್ನೇ ಸಂಸದರನ್ನಾಗಿ ಆಯ್ಕೆ ಮಾಡಿ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಯನ್ನು ಮಾಜಿ ಶಾಸಕ ಸಿ. ಟಿ. ರವಿ ಕೂಡ ಸ್ವಾಗತಿಸಿದ್ದಾರೆ. ರಾಘವೇಂದ್ರ ಪರ ಹೇಳಿಕೆ ನೀಡುವ ಮೂಲಕ ಅವರು ಮೋದಿಯನ್ನು ಒಪ್ಪಿದ್ದಾರೆ. ಮತ್ತೆ ಮೋದಿ ಪ್ರಧಾನಿ ಆಗಲಿ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಶಾಮನೂರು ಅವರ ಹೇಳಿಕೆಯಂತೆ ಮೋದಿಗೆ ಎಲ್ಲರೂ ಮತ ಹಾಕಬೇಕು. ಬಿಜೆಪಿ ಗೆಲ್ಲಿಸಬೇಕು, ಅಭಿವೃದ್ಧಿ ಆಗಬೇಕು ಎಂದರೆ, ಮೋದಿ ಬೇಕಲ್ಲ, ಮೋದಿ ಪ್ರಧಾನಿ ಆಗಬೇಕು ಎಂದರೆ ಮತ ಹಾಕಬೇಕು. ಹೀಗಾಗಿ ಬಿಜೆಪಿಗೆ ಮತ ಹಾಕಿ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಿ '' ಎಂದು ಮನವಿ ಮಾಡಿದರು.

''ಜಗದೀಶ್ ಶೆಟ್ಟರ್ ನಮ್ಮ ಪಕ್ಷಕ್ಕೆ ವಾಪಸ್ ಬಂದಿದ್ದಾರೆ. ಲಕ್ಷ್ಮಣ ಸವದಿ ಜೊತೆ ಸ್ನೇಹ ಇದೆ. ಅವರು ಪಾರ್ಟಿ ಬಿಟ್ಟರು ಸ್ನೇಹ ಬಿಟ್ಟಿಲ್ಲ. ಅವರು ಪಾರ್ಟಿ ಬಿಡುವಾಗ ಹೇಳಿದ್ದೆ, ಬಿಡಬೇಡಿ ಅಂದಿದ್ದೆ. ಉಪಮುಖ್ಯಮಂತ್ರಿ ಆದವ ನೀನು ಬಿಡಬೇಡ ಅಂದಿದ್ದೆ. ಪಶ್ಚಾತ್ತಾಪ ಆದಾಗ, ಕಾಲ ಕೂಡಿ ಬಂದಾಗ ನೋಡೋಣ'' ಎಂದು ತಿಳಿಸಿದರು.

''ಇಂಡಿಯಾ ಒಕ್ಕೂಟ ಎಲ್ಲಿದೆ? ಆ ಒಕ್ಕೂಟದಲ್ಲಿ ಕೇವಲ ಮೋದಿ ಮೇಲೆ ಬೇಸರ ಇದ್ದವರು ಮಾತ್ರ ಇಲ್ಲ. ಅವರಲ್ಲಿ ಅವರವರ ಮೇಲೆ ಬೇಸರ ಇರೋರೆ ಒಕ್ಕೂಟದಲ್ಲಿ ಇರೋದು. ಈಗ ಒಬ್ಬರ ಕಂಡರೆ, ಒಬ್ಬರಿಗೆ ಆಗೋದಿಲ್ಲ'' ಎಂದು ಸಿ ಟಿ ರವಿ ವ್ಯಂಗ್ಯವಾಡಿದರು.

ಇದನ್ನೂ ಓದಿ: ಬಿಜೆಪಿ ಕಾರ್ಯಕಾರಿಣಿ, ಎದುರಾಳಿಗಳ ಲಘು ಪರಿಗಣನೆ ಬೇಡ: ಬಿ.ವೈ. ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.