ETV Bharat / state

ರಾಜ್ಯಸಭಾ ಚುನಾವಣೆ: ತಕ್ಷಣ ಹೈಕಮಾಂಡ್​ಗೆ ಹೆಸರು ಶಿಫಾರಸು ಮಾಡದಿರಲು ಕೋರ್ ಕಮಿಟಿ ನಿರ್ಧಾರ

author img

By ETV Bharat Karnataka Team

Published : Feb 3, 2024, 7:34 AM IST

Updated : Feb 3, 2024, 7:52 AM IST

ಬಿಜೆಪಿ ಕೋರ್ ಕಮಿಟಿ
ಬಿಜೆಪಿ ಕೋರ್ ಕಮಿಟಿ

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಚುನಾವಣೆ ಕುರಿತು ಚರ್ಚೆ ನಡೆಯಿತು. ಚುನಾವಣೆ ನಡೆಯಲಿರುವ ನಾಲ್ಕು ಸ್ಥಾನಗಳ ಪೈಕಿ ಒಂದು ಸ್ಥಾನ ಮಾತ್ರ ಬಿಜೆಪಿಗೆ ಗೆಲುವಿನ ಅವಕಾಶ ಇದೆ.

ಬೆಂಗಳೂರು: ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ತಕ್ಷಣ ಯಾವುದೇ ಹೆಸರು ಶಿಫಾರಸು ಮಾಡದೇ ಇರುವ ಬಗ್ಗೆ ಇಂದಿನ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕಳೆದ ಬಾರಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಅಭ್ಯರ್ಥಿಗಳ ಬದಲು ಅಚ್ಚರಿ ಆಯ್ಕೆ ಮಾಡಿದ್ದರಿಂದಾಗಿ ಈ ಬಾರಿ ಎಚ್ಚರಿಕೆ ಹೆಜ್ಜೆ ಇಡುತ್ತಿದೆ.

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭೆ ಚುನಾವಣೆ ಕುರಿತು ಚರ್ಚೆ ನಡೆಯಿತು. ಚುನಾವಣೆ ನಡೆಯಲಿರುವ ನಾಲ್ಕು ಸ್ಥಾನಗಳ ಪೈಕಿ ಒಂದು ಸ್ಥಾನ ಮಾತ್ರ ಬಿಜೆಪಿಗೆ ಗೆಲುವಿನ ಅವಕಾಶ ಇದೆ. ಹಾಲಿ ಸದಸ್ಯರಾಗಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರೇ ಮತ್ತೆ ಅಭ್ಯರ್ಥಿಯಾಗುವುದಾದರೆ ಇಲ್ಲಿ ಚರ್ಚೆ ನಡೆಸುವುದು ಬೇಡ. ಒಂದು ವೇಳೆ ಬೇರೆಯವರು ಅಭ್ಯರ್ಥಿಯಾಗುವುದು ಅಂತಾದರೆ ಆಗ ಮತ್ತೊಮ್ಮೆ ಚರ್ಚೆ ಮಾಡೋಣ ಎನ್ನುವ ಅಭಿಪ್ರಾಯ ರಾಜ್ಯ ನಾಯಕರಿಂದ ವ್ಯಕ್ತವಾಯಿತು.

ರಾಜ್ಯಾಧ್ಯಕ್ಷರು ವರಿಷ್ಠರ ಜೊತೆ ಈ ಬಗ್ಗೆ ಚರ್ಚಿಸಲಿ. ಎರಡನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆಯೂ ತೀರ್ಮಾನವಾದರೆ ಯಾರು ಸಮರ್ಥರು ಅಂತಾ ಕೂಡಾ ವರಿಷ್ಠರ ಜೊತೆ ಚರ್ಚೆಯಾಗಲಿ. ವರಿಷ್ಠರ ಜೊತೆ ಚರ್ಚಿಸಿ ಸ್ಪಷ್ಟತೆ ಪಡೆದ ಬಳಿಕವೇ ರಾಜ್ಯಾಧ್ಯಕ್ಷರು ಸಂಭಾವ್ಯ ಹೆಸರುಗಳನ್ನು ಕಳುಹಿಸಲಿ ಎಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.

ಈಗಾಗಲೇ ರಾಜ್ಯಸಭಾ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸಿರುವ ಹಿರಿಯ ನಾಯಕ ಸೋಮಣ್ಣ ಹೆಸರೂ ಪ್ರಸ್ತಾಪವಾಯಿತು. ಆದರೆ ಹಾಲಿ ಸದಸ್ಯರೇ ಮರು ಆಯ್ಕೆಗೆ ಅವಕಾಶ ನೀಡಿದರೆ ಚರ್ಚೆ ಹಾಗೂ ಶಿಫಾರಸು ಅಪ್ರಸ್ತುತವಾಗಲಿದೆ. ಹಾಗಾಗಿ ಮೊದಲು ಹೈಕಮಾಂಡ್ ಈ ವಿಚಾರದಲ್ಲಿ ನಿಲುವು ಸ್ಪಷ್ಟಪಡಿಸಲಿ, ಹಾಲಿ ಸದಸ್ಯ ರಾಜೀವ್ ಚಂದ್ರಶೇಖರ್ ಮರು ಆಯ್ಕೆಗೆ ಅವಕಾಶ ನೀಡಲ್ಲ ಎಂದರೆ ಅಥವಾ ಎರಡನೇ ಅಭ್ಯರ್ಥಿ ನಿಲ್ಲಿಸಿ ಎಂದಲ್ಲಿ ಮಾತ್ರ ಹೆಸರು ಶಿಫಾರಸು ಮಾಡೋಣ. ರಾಜ್ಯಾಧ್ಯಕ್ಷರು ರಾಷ್ಟ್ರೀಯ ಅಧ್ಯಕ್ಷರ ಜೊತೆ ಚರ್ಚಿಸಲು ನಂತರ ನಾವು ಮತ್ತೆ ಸೇರಿ ಮುಂದಿನ ನಿರ್ಧಾರಕ್ಕೆ ಬರೋಣ ಎನ್ನುವ ನಿರ್ಧಾರಕ್ಕೆ ಬರಲಾಯಿತು.

ಕಳೆದ ಬಾರಿ ರಾಜ್ಯ ಕೋರ್ ಕಮಿಟಿ ಶಿಫಾರಸು ಮಾಡಿದ್ದ ಹೆಸರುಗಳನ್ನು ಬದಿಗೊತ್ತಿ ಹೈಕಮಾಂಡ್ ತನ್ನ ಆಯ್ಕೆ ಮಾಡಿತ್ತು, ರಾಜ್ಯ ಸಮಿತಿ ಪಟ್ಟಿಯಲ್ಲಿ ಇಲ್ಲದೇ ಇರುವ ಹೆಸರುಗಳು ಪ್ರಕಟಗೊಂಡಿದ್ದವು. ಆ ಕಾರಣದಿಂದ ಆಗಿದ್ದ ಮುಜುಗರದ ರೀತಿಯ ಸನ್ನಿವೇಶ ಮತ್ತೆ ಆಗದಂತೆ ಎಚ್ಚರಿಕೆಯ ನಿಲುವು ತಳೆದಿದೆ ಎನ್ನಲಾಗಿದೆ. ಇನ್ನು ಕೋರ್ ಕಮಿಟಿ ಸಭೆಯಲ್ಲಿ ಮುಂಬರುವ ವಿಧಾನ ಪರಿಷತ್ ನಾಲ್ಕು ಸ್ಥಾನಗಳ ಚುನಾವಣೆಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ನಡೆಯಿತು.

ಬೆಂಗಳೂರು ಪದವೀಧರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ, ಈಶಾನ್ಯ ಪದವೀಧರ ಕ್ಷೇತ್ರಗಳಿಗೆ ಅಭ್ಯರ್ಥಿ ಆಕಾಂಕ್ಷಿಗಳ‌ ಬಗ್ಗೆ ಚರ್ಚಿಸಲಾಯಿತು. ಮತ್ತೊಂದು ಸುತ್ತಿನ ಸಭೆ ನಡೆಸಿ ಸಂಭಾವ್ಯ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಸಭೆಯಲ್ಲಿ ನಿರ್ಣಯ ಮಾಡಲಾಯಿತು.

ಇದನ್ನೂ ಓದಿ: ಭಾರತ ವಿಶ್ವದ ಆರ್ಥಿಕ ಶಕ್ತಿ ಕೇಂದ್ರವಾಗುವ ಹಾದಿಯಲ್ಲಿದೆ: ಪ್ರಧಾನಿ ಮೋದಿ ಬಣ್ಣನೆ

Last Updated :Feb 3, 2024, 7:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.