ETV Bharat / state

ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ, ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ: ಪರಿಷತ್​ನಲ್ಲಿ ವಿಧೇಯಕ ಅಂಗೀಕಾರ

author img

By ETV Bharat Karnataka Team

Published : Feb 23, 2024, 5:51 PM IST

ರಾಜ್ಯದಲ್ಲಿ ಹುಕ್ಕಾ ಬಾರ್ ಮತ್ತು ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ ವಿಧಿಸಿರುವ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್

ಹುಕ್ಕಾ ಬಾರ್, ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ

ಬೆಂಗಳೂರು: ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ ಹಾಗೂ ಹುಕ್ಕಾ ಬಾರ್ ಸಂಪೂರ್ಣ ನಿಷೇಧ ಅಂಶವನ್ನೊಳಗೊಂಡ ಸಿಗರೇಟುಗಳ ಮತ್ತು ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) ವಿಧೇಯಕ-2024 ವನ್ನು ವಿಧಾನ ಪರಿಷತ್ ಅಂಗೀಕರಿಸಿತು.

ವಿಧಾನ ಪರಿಷತ್ ಶಾಸನ ರಚನಾ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಸಿಗರೇಟುಗಳ ಮತ್ತು ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) ವಿಧೇಯಕ-2024 ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಡಿಸಿದರು. ನಂತರ ವಿಧೇಯಕದ ಕುರಿತು ವಿವರಣೆ ನೀಡಿದ ಸಚಿವರು, ಹುಕ್ಕಾಬಾರ್ ಸಂಪೂರ್ಣ ನಿಷೇಧ ಮತ್ತು ಸಿಗರೇಟ್ ಮಾರಾಟ ವಯಸ್ಸು 18 ರಿಂದ 21 ಕ್ಕೆ ಹೆಚ್ಚಳ, ಶಾಲಾ ಕಾಲೇಜುಗಳ ವ್ಯಾಪ್ತಿಯಿಂದ ಬೀಡಿ ಸಿಗರೇಟ್ ಮಾರಾಟಕ್ಕೆ ಇರುವ ನಿರ್ಭಂಧವನ್ನು ನೂರು ಯಾರ್ಡ್ ಬದಲು ನೂರು ಮೀಟರ್ ಎಂದು ಬದಲಿಸಲಾಗಿದೆ. ಸಿಂಗಲ್ ಸಿಗರೇಟ್ ಮಾರಾಟಕ್ಕೆ ನಿರ್ಬಂಧಿಸಿದ್ದು, ಪ್ಯಾಕ್ ಲೆಕ್ಕದಲ್ಲಿ ಖರೀದಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದಲ್ಲಿ ಇದ್ದ ದಂಡದ ಮೊತ್ತ 200 ರೂ. ಅನ್ನು 1000 ರೂ.ಗೆ ಹೆಚ್ಚಳ ಮಾಡಿದ್ದು, ನಿರ್ಬಂಧವಿದ್ದರೂ ಅಕ್ರಮವಾಗಿ ಹುಕ್ಕಾ ಬಾರ್ ನಡೆಸಿದರೆ 1-3 ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎನ್ನುವ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ ಎಂದರು.

ಹುಕ್ಕಾ ಸೇದುವುದು ಫ್ಯಾಷನ್, ಸ್ಟೇಟಸ್ ಆಗಿದೆ. ಹುಕ್ಕಾಗೆ ಮಾದಕ ವಸ್ತು ಸೇರಿಸುತ್ತಾರೆ. ಒಮ್ಮೆ ಹುಕ್ಕಾ ಸೇದಿದವರು ಇದಕ್ಕೆ ಅಡಿಕ್ಟ್ ಆಗಲಿದ್ದಾರೆ. ಇದನ್ನು ತಡೆಯಲು ಕಾಯ್ದೆ ತರಲಾಗುತ್ತಿದೆ. ಹಾಗಾಗಿ ಕಾಯ್ದೆಗೆ ಒಪ್ಪಿಗೆ ನೀಡುವಂತೆ ಮನವಿ ಮಾಡಿದರು. ವಿಧೇಯಕದ ಮೇಲೆ ಹಲವು ಸದಸ್ಯರು ಮಾತನಾಡಿ ಕೆಲ ಸಲಹೆ ನೀಡಿದರು. ನಂತರ ವಿಧೇಯಕವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

ನಂತರ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಅಂತರ್ ವಿಷಯ ಆರೋಗ್ಯ ವಿಜ್ಞಾನಗಳು ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-2024 ಅನ್ನು ದಿನೇಶ್ ಗುಂಡೂರಾವ್ ಮಂಡಿಸಿದರು. ಸಹ ಕುಲಪತಿ ನೇಮಕ ಮಾಡಿಕೊಳ್ಳಲಿದ್ದಾರೆ. ಬೋರ್ಡ್ ಆಫ್ ಗವರ್ನೆರ್ಸ್ ನೇಮಕ ಮಾಡಲಿದ್ದಾರೆ. ತಾಂತ್ರಿಕ ವಿಷಯ ಮಾತ್ರ ಇದೆ. ಬಹಳ ಹೆಚ್ಚಿನ ತಿದ್ದುಪಡಿ ಇಲ್ಲ. ಹಾಗಾಗಿ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.

ನಂತರ ವಿಧೇಯಕವನ್ನು ಅಂಗೀಕರಿಸಲು ಸಚಿವರು ಸೂಚನೆ ನೀಡದಾಗ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರು. ಸರ್ಕಾರದ ಮುಖ್ಯ ಸಚೇತಕರೂ ಇಲ್ಲ ಆಡಳಿತ ಪಕ್ಷದ ಸದಸ್ಯರೂ ಇಲ್ಲ ಬರೀ ಏಳು ಜನರಿದ್ದಾರೆ. ಬಿಲ್​ಗೆ ಹೇಗೆ ಒಪ್ಪಿಗೆ ಸಿಗಲಿದೆ ಎಂದು ಪ್ರಶ್ನಿಸಿದರು. ಆದರೂ ಸದಸ್ಯರು ಬಿಲ್​​ಗೆ ಸಹಮತ ವ್ಯಕ್ತಪಡಿಸಿದ್ದ ಕಾರಣದಿಂದಾಗಿ ಈ ರೀತಿ ಮತ್ತೆ ಆದಲ್ಲಿ ಅಂತಹ ಬಿಲ್ ಅಂಗೀಕಾರಕ್ಕೆ ಹಾಕದೆ ಮುಂದಕ್ಕೆ ಹಾಕುವ ಎಚ್ಚರಿಕೆ ನೀಡಿ ವಿಧೇಯಕ ಅಂಗೀಕಾರಕ್ಕೆ ಅವಕಾಶ ನೀಡಿದರು. ಬಳಿಕ ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾಯಿತು.

ಇದನ್ನೂ ಓದಿ : ಜಮಖಂಡಿ ಅಥಣಿ ನಡುವೆ ಕೃಷ್ಣಾ ನದಿ ಸೇತುವೆ ಕಾಮಗಾರಿಯ ವೆಚ್ಚ ಏರಿಕೆಗೆ ಸರ್ಕಾರದಿಂದ ಅನುಮತಿ: ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.