ETV Bharat / sports

ಕ್ರಿಕೆಟಿಗ ಮಯಾಂಕ್​ ಅಗರ್ವಾಲ್ ಆರೋಗ್ಯ ಸ್ಥಿರ; ಮುಂದುವರಿದ ಚಿಕಿತ್ಸೆ, ಪ್ರಕರಣ ದಾಖಲು

author img

By PTI

Published : Jan 31, 2024, 7:34 AM IST

ಭಾರತೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ವಿಮಾನದ ಪ್ರಯಾಣದ ವೇಳೆ ನೀರು ಎಂದು ಭಾವಿಸಿ ವಿಷಪೂರಿತ ದ್ರವ ಸೇವಿಸಿರುವ ಘಟನೆ ಸಂಚಲನ ಮೂಡಿಸಿದ್ದು, ಪ್ರಕರಣ ದಾಖಲಾಗಿದೆ.

Mayank Agarwal admitted to hospital  drinking poisonous liquid  files police complaint  ಕನ್ನಡಿಗ ಆಸ್ಪತ್ರೆಗೆ ದಾಖಲು  ಕ್ರಿಕೆಟಿಗನ ಗಂಟಲಿನಲ್ಲಿ ಊತ  ವಿಷಪೂರಿತ ದ್ರವ ಸೇವಿಸಿದ ಮಯಾಂಕ್
ವಿಷಪೂರಿತ ದ್ರವ ಸೇವಿಸಿದ ಮಯಾಂಕ್

ಅಗರ್ತಲಾ(ತ್ರಿಪುರಾ): ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರು ವಿಷಪೂರಿತ ದ್ರವ ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದಾರೆ. ತ್ರಿಪುರಾ ರಾಜಧಾನಿ ಅಗರ್ತಲಾದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಘಟನೆ ನಡೆದಿದೆ. ತಕ್ಷಣ ಮಯಾಂಕ್‌ರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಯ ಮ್ಯಾನೇಜರ್ ಸಹಾಯದಿಂದ ಮಯಾಂಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಶ್ಚಿಮ ತ್ರಿಪುರಾ ಎಸ್ಪಿ ಕಿರಣ್ ಕುಮಾರ್ ಘಟನೆಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.

ನಡೆದಿದ್ದೇನು?: ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ತ್ರಿಪುರಾ ವಿರುದ್ಧದ ಪಂದ್ಯದ ನಂತರ ತಮ್ಮ ತಂಡದೊಂದಿಗೆ ದೆಹಲಿಗೆ ವಿಮಾನವೇರಿದ್ದರು. ನೀರು ಎಂದುಕೊಂಡು ತಾನು ಕುಳಿತಿದ್ದ ಸೀಟಿನ ಎದುರಿನ ಪೌಚ್​ನಲ್ಲಿದ್ದ ದ್ರವ ಸೇವಿಸಿದ್ದಾರೆ. ತಕ್ಷಣವೇ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ಸಹೋದ್ಯೋಗಿಗಳು ಸ್ಥಳೀಯ ಐಎಲ್ಎಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮಯಾಂಕ್ ಗಂಟಲಿನಲ್ಲಿ ಊತ ಮತ್ತು ಗುಳ್ಳೆಗಳಿರುವುದನ್ನು ಗಮನಿಸಿದ್ದಾರೆ.

ಈ ಘಟನೆಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಯಾಂಕ್‌ಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತ್ರಿಪುರಾ ಆರೋಗ್ಯ ಕಾರ್ಯದರ್ಶಿ ಕಿರಣ್ ಗಿಟ್ಟೆ ಹೇಳಿದ್ದಾರೆ. ಕ್ರಿಕೆಟಿಗನನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಸ್ಥಿರವಾಗಿದೆ. "ನಮ್ಮ ವೈದ್ಯರು ಮಯಾಂಕ್​ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ" ಎಂದು ಆಸ್ಪತ್ರೆ ಹೇಳಿಕೆ ನೀಡಿದೆ. ವೈದ್ಯರ ಸಲಹೆ ಮೇರೆಗೆ ಶೀಘ್ರದಲ್ಲೇ ಬೆಂಗಳೂರಿಗೆ ಕರೆತರಲಾಗುವುದು ಎಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ತಿಳಿಸಿದೆ.

ವೈದ್ಯಕೀಯ ತುರ್ತುಪರಿಸ್ಥಿತಿಯ ಕಾರಣ ಅಗರ್ತಲಾದಿಂದ ದೆಹಲಿಗೆ ತೆರಳಿದ್ದ ವಿಮಾನ ಹಿಂತಿರುಗಿದೆ. ತಕ್ಷಣ ಪ್ರಯಾಣಿಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದರ ನಂತರ ವಿಮಾನ ಟೇಕ್ ಆಫ್ ಆಯಿತು ಎಂದು ಇಂಡಿಗೋ ಏರ್‌ಲೈನ್ಸ್ ಮಾಹಿತಿ ನೀಡಿದೆ.

ಭಾರತ ತಂಡಕ್ಕಾಗಿ 21 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಯಾಂಕ್ ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡದ ನಾಯಕ. ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಗೆಲುವು ಸಾಧಿಸಿದೆ. ಆ ಪಂದ್ಯದಲ್ಲಿ, ಮಯಾಂಕ್ ಎರಡು ಇನ್ನಿಂಗ್ಸ್‌ಗಳಲ್ಲಿ 51 ಮತ್ತು 17 ರನ್ ಗಳಿಸಿದರು. ಈ ಘಟನೆಯಿಂದಾಗಿ ಅವರು ಫೆಬ್ರವರಿ 2ರಂದು ಸೂರತ್‌ನಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

ಇದನ್ನೂ ಓದಿ: 'ನನ್ನನ್ನು ಅದೇನೋ ರಕ್ಷಿಸಿತು': ಮೃತ್ಯುವಿಗೆ ಹತ್ತಿರವಾದ ಕ್ಷಣದ ಬಗ್ಗೆ ರಿಷಭ್​ ಪಂತ್ ಮನದಾಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.